ಬಾಲಾಲಯದಲ್ಲಿ ದೇವರ ಪ್ರತಿಷ್ಠಾಪನೆ

bala
Published on

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ

ಸಮಗ್ರವಾಗಿ ಜೀರ್ಣೋದ್ಧಾರಗೊಳ್ಳಲಿರುವ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಎಂಟು ಮಂದಿ ಪರಿಷತ್ ಬ್ರಾಹ್ಮಣರಿಂದ ದೇವಾನುಮತಿ ಪಡೆದು ದೇವರನ್ನು ದೇಗುಲದ ಈಶಾನ್ಯ ಭಾಗದಲ್ಲಿ ನಿರ್ಮಿಸಲಾಗಿರುವ ಬಾಲಾಲಯಗಳಲ್ಲಿ ಕ್ಷೇತ್ರದ ತಂತ್ರಿ ಕಂಬ್ಳಕಟ್ಟ ರಾಧಾಕೃಷ್ಣ ಉಪಾಧ್ಯಾಯರ ನೇತೃತ್ವದಲ್ಲಿ ಗುರುವಾರ ವಿಧ್ಯುಕ್ತವಾಗಿ ಪ್ರತಿಷ್ಠಾಪಿಸಿ ಪ್ರಥಮ ಪೂಜೆ ನಡೆಸಲಾಯಿತು.

ಪ್ರಾತಃ ಕಾಲದಿಂದಲೇ ಅನುಜ್ಞಾ ಕಲಶ ಸ್ಥಾಪನೆ, ಅಭಿಷೇಕ, ತತ್ವ ಹೋಮ, ದೇವಾನುಮತಿಯ ಸಂಕಲ್ಪ, ಜೀರ್ಣೋದ್ಧಾರ ಸಂಕಲ್ಪದ ವಿಧಿ, ಕಾಲ ನಿರ್ಣಯಗಳ ಘೋಷಣೆ ಬಳಿಕ ತತ್ವ ಕಲಶಾಭಿಷೇಕವನ್ನು ಪೂರೈಸಿ ಸಂಕೋಚಗೊಳಿಸಿ, ಉಪಸ್ಥಾನ ಗಣಪತಿ ದೇವರು ಹಾಗೂ ಪ್ರಧಾನ ದೇವರಾದ ಮಹಾರುದ್ರ ದೇವರ ಬಿಂಬದ ಕಲಾಕರ್ಷಣೆಯೊಂದಿಗೆ ಸಂಕೋಚಗೈದು ಧಾನ್ಯಯುಕ್ತ ಕಲಶದಲ್ಲಿ ಆವಾಹಿಸಿ ಅದನ್ನೂ ಸೇರಿದಂತೆ ರುದ್ರ ದೇವರ ಬಲಿಮೂರ್ತಿಯನ್ನು ಹಳೇ ದೇವಾಲಯ ಪ್ರಾಕಾರದಿಂದ ಹೊರತಂದು ನೂತನ ಬಾಲಾಲಯಗಳಲ್ಲಿ ಪ್ರತಿಷ್ಠಾಪಿಸಲಾಯಿತು. ಬಳಿಕ ಬ್ರಹ್ಮಕಲಶೋತ್ಸವದ ಪರ್ಯಂತ ನಡೆಸಬೇಕಾದ ಪೂಜಾ ವಿಧಾನ ಘೋಷಿಸಲಾಯಿತು.

ಕರಸೇವೆಗೆ ಚಾಲನೆ

ಹಳೇ ದೇಗುಲದ ಎರಡೂ ಗರ್ಭಗುಡಿಗಳ ಶಿಖರಗಳನ್ನು ಹೋರಿಗೆ ಹಗ್ಗದ ಮೂಲಕ ವಹಿಸಿ ಚಲನೆಗೈದು ಪ್ರತ್ಯೇಕಿಸಿ ಕರಸೇವೆಗೆ ವಿದ್ಯುಕ್ತ ಚಾಲನೆ ನೀಡಲಾಯಿತು. ಪಡುಬಿದ್ರಿ, ಪಾದೆಬೆಟ್ಟು ಗ್ರಾಮಗಳ 25 ಮಂದಿ ವಿಶ್ವಕರ್ಮ ಸಮಾಜದ ಮಂದಿ ತೀರ್ಥಮಂಟಪ ಬಿಚ್ಚುವ ಕರಸೇವೆ ಆರಂಭಿಸಿದ್ದಾರೆ. ಮುಂದಿನ ಒಂದು ವರ್ಷದೊಳಗಾಗಿ ನವೀಕೃತ ಎರಡೂ ಗರ್ಭಗುಡಿಗಳು, ತೀರ್ಥ ಮಂಟಪ, ಸುತ್ತುಪೌಳಿಗಳು, ನಾಲ್ಕೂ ಸುತ್ತು ಪ್ರಸಾದಗಳು, ಎದುರಿನ ಪ್ರಧಾನ ಗೋಪುರವನ್ನು ಸುಮಾರು 30 ಕೋಟಿ ರೂ. ವೆಚ್ಚದಲ್ಲಿ ಎಲ್ಲ ದಾನಿಗಳ ಸಹಕಾರದಿಂದ ನಿರ್ಮಿಸುವ ಯೋಜನೆ ಹೊಂದಲಾಗಿದೆ ಎಂದು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ.ಪ್ರಕಾಶ್ ಶೆಟ್ಟಿ ತಿಳಿಸಿದರು.

ದೇವಸ್ಥಾನ ಆನುವಂಶಿಕ ಮೊಕ್ತೇಸರರಾದ ಪಡುಬಿದ್ರಿ ಬೀಡು ರತ್ನಾಕರರಾಜ ಅರಸು ಕಿನ್ಯಕ್ಕ ಬಲ್ಲಾಳರು, ಪಡುಬಿದ್ರಿ ಪೇಟೆಮನೆ ಭವಾನಿಶಂಕರ ಹೆಗ್ಡೆ, ಕಾರ್ಯನಿರ್ವಹಣಾಧಿಕಾರಿ ಕೆ.ರಾಜಗೋಪಾಲ ಉಪಾಧ್ಯಾಯ, ಆಶಾ ಪ್ರಕಾಶ್ ಶೆಟ್ಟಿ, ಅರ್ಚಕರಾದ ಪದ್ಮನಾಭ ಭಟ್ ಹೆಜಮಾಡಿ, ವೈ.ಗುರುರಾಜ ಭಟ್, ಗಣಪತಿ ಭಟ್, ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಶ್ರೀನಾಥ ಹೆಗ್ಡೆ ನಡ್ಸಾಲುಗುತ್ತು, ಕಾಪು ಹೊಸ ಮಾರಿಗುಡಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಾಸುದೇವ ಕೆ.ಶೆಟ್ಟಿ, ಕಾರ್ಯದರ್ಶಿ ರಮೇಶ್ ಹೆಗ್ಡೆ, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಮಾಜಿ ಶಾಸಕ ಲಾಲಾಜಿ ಆರ್.ಮೆಂಡನ್, ದೇವಿಪ್ರಸಾದ್ ಶೆಟ್ಟಿ ಬೆಳಪು, ಸಂತೋಷ್ ಶೆಟ್ಟಿ ಕುರ್ಕಿಲ್‌ಬೆಟ್ಟು, ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳು, ವಿವಿಧ ಗುತ್ತುಗಳ ಮುಖ್ಯಸ್ಥರು, ಸೀಮೆಯ ಭಕ್ತರು, ಗ್ರಾಮಸ್ಥರು, ಮಹಿಳೆಯರು, ಸಿಬ್ಬಂದಿವರ್ಗ ಮತ್ತಿತರರಿದ್ದರು.

ಅಹೋರಾತ್ರಿ ಭಜನಾ ಕಾರ್ಯಕ್ರಮ

ಬುಧವಾರ ರಾತ್ರಿ ದೀಪಾರಾಧನೆ, ವಿಶೇಷ ರಾತ್ರಿ ಪೂಜೆ ಹಾಗೂ ಅಹೋರಾತ್ರಿ ಭಜನಾ ಕಾರ್ಯಕ್ರಮದಲ್ಲಿ ಸಹಸ್ರಾರು ಮಂದಿ ಭಾಗವಹಿಸಿದ್ದರು. ಅಹೋರಾತ್ರಿ ಭಜನೆಯಲ್ಲಿ ಸ್ಥಳೀಯ ಹಾಗೂ ಪರವೂರು 29 ತಂಡ ಭಾಗವಹಿಸಿದ್ದವು. ಗೌಡ ಸಾರಸ್ವತ ಸಮಾಜದವರು ಕಾರ್ಯಕ್ರಮಕ್ಕಾಗಿ ವಿವಿಧ ಧಾನ್ಯಗಳು, ಹೂವುಗಳಿಂದ ರಚಿಸಿದ ವಿವಿಧ ರಂಗೋಲಿಗಳು ಗಮನ ಸೆಳೆಯಿತು. ದೇಗುಲದ ಈಶಾನ್ಯ ಭಾಗದಲ್ಲಿ ನಿರ್ಮಿಸಲಾದ ಎರಡು ಬಾಲಾಲಯ ಹಾಗೂ ಬಾವಿಗಳಿಗಾಗಿ ಋತ್ವಿಜರಿಂದ ವಾಸ್ತುಹೋಮ, ರಾಕ್ಷೋಘ್ನ ಹೋಮ ಇತ್ಯಾದಿ ವಿಧಿಗಳು ರಾತ್ರಿ ವಿದ್ಯುಕ್ತವಾಗಿ ನೆರವೇರಿತು. ಗುರುವಾರ ಮುಂಜಾನೆ ಸೂರ್ಯೋದಯದ ವೇಳೆ ಅಹೋರಾತ್ರಿ ಭಜನಾ ಕಾರ್ಯಕ್ರಮದ ಮಂಗಲಾಚರಣೆ ತರಂಗಿಣಿ ಮಿತ್ರ ಮಂಡಳಿ ಸದಸ್ಯರ ಭಜನಾ ಕಾರ್ಯಕ್ರಮದೊಂದಿಗೆ ಸಂಪನ್ನಗೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net