ವಿವಿಧ ಸಮಿತಿಗಳಿಂದ ಗೌರಿ-ಗಣೇಶ ಮೂರ್ತಿ ಪ್ರತಿಷ್ಠಾಪನೆ

ವಿವಿಧ ಸಮಿತಿಗಳಿಂದ ಗೌರಿ-ಗಣೇಶ ಮೂರ್ತಿ ಪ್ರತಿಷ್ಠಾಪನೆ
Published on

ನಾಪೋಕ್ಲು: ಇಲ್ಲಿನ ವಿವಿಧ ಗಣೇಶ ಸೇವಾ ಸಮಿತಿಗಳ ವತಿಯಿಂದ ಗೌರಿ ಗಣೇಶ ಮೂರ್ತಿಯನ್ನು ಶನಿವಾರ ಪ್ರತಿಷ್ಠಾಪಿಸಲಾಯಿತು.

4 ಗಣೇಶ ಸೇವಾ ಸಮಿತಿಯವರು ಶನಿವಾರ ಸಂತೆ ಮೈದಾನದಿಂದ ಗೌರಿ ಗಣೇಶ ಮೂರ್ತಿಗಳನ್ನು ಅಲಂಕೃತ ವಾಹನಗಳಲ್ಲಿರಿಸಿ ವಾದ್ಯಗೋಷ್ಠಿಯ ಮೂಲಕ ಪಟ್ಟಣದ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆಸಿ ವಿವಿಧ ದೇವಾಲಯಗಳಲ್ಲಿ ಪ್ರತಿಷ್ಠಾಪಿಸಿದರು.

ಗಣೇಶೋತ್ಸವ ಸಮಿತಿಯ ಪ್ರಮುಖ ಕಲಿಯಂಡ ವಿಠಲ ಅವರು ಈಡುಗಾಯಿ ಒಡೆಯುವುದರ ಮೂಲಕ ಗಣೇಶ ಮೂರ್ತಿಗಳ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿ, ದೇಶ ಹಾಗೂ ಧರ್ಮಕ್ಕೆ ಯಾವುದೇ ಧಕ್ಕೆ ಬಾರದಂತೆ ದೇಶದ ರಕ್ಷಣೆಗಾಗಿ ಎಲ್ಲರೂ ಒಗ್ಗಟ್ಟಿನಿಂದ ನಿಸ್ವಾರ್ಥ ಸೇವೆಯಿಂದ ಶ್ರಮಿಸುವಂತಾಗಬೇಕು. ಪಟ್ಟಣದಲ್ಲಿ 50 ವರ್ಷಗಳಿಂದ ಗಣೇಶ ಉತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತಿದೆ. ಈ ವರ್ಷವೂ ಐದು ವಿವಿಧ ಭಾಗಗಳಲ್ಲಿ ಗೌರಿ ಗಣೇಶ ಸಮಿತಿಗಳಿಂದ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತಿದೆ ಎಂದು ತಿಳಿಸಿದರು.

ವಿವೇಕಾನಂದ ಸಂಘದ ಗಣೇಶ ಉತ್ಸವ ಸೇವಾ ಸಮಿತಿ ವತಿಯಿಂದ ಇಂದಿರಾನಗರದಲ್ಲಿ ಗೌರಿ- ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಯಿತು. ಶ್ರೀರಾಮ ಟ್ರಸ್ಟ್ ಗಣೇಶೋತ್ಸವ ಸಮಿತಿ ವತಿಯಿಂದ ಶ್ರೀ ಗುರುಪೊನ್ನಪ್ಪ ಸಭಾಂಗಣದಲ್ಲಿ, ಶ್ರೀ ಪೊನ್ನು ಮುತ್ತಪ್ಪ ವಿನಾಯಕ ಸೇವಾ ಸಮಿತಿ ವತಿಯಿಂದ ಹಳೇ ತಾಲೂಕು ಶ್ರೀ ಪೊನ್ನು ಮುತ್ತಪ್ಪ ದೇವಾಲಯದಲ್ಲಿ, ನಾಪೋಕ್ಲು ನಾಡು ಗೌರಿ- ಗಣೇಶ ಸಮಿತಿ ವತಿಯಿಂದ ಹಳೇ ತಾಲೂಕಿನ ಶ್ರೀ ಭಗವತಿ ದೇವಾಲಯದಲ್ಲಿ ಗೌರಿ- ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು.

ಕಕ್ಕುಂದ ಕಾಡಿನ ಗಣೇಶೋತ್ಸವ ಸೇವಾ ಸಮಿತಿ ವತಿಯಿಂದ ವೆಂಕಟೇಶ್ವರ ದೇವಾಲಯದಲ್ಲಿ ಗೌರಿ- ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಎಲ್ಲ ಸಮಿತಿಗಳಿಂದ ವಿಶೇಷ ಪೂಜೆ, ತೀರ್ಥ ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನೆರವೇರಿಸಲಾಯಿತು. ನಾಪೋಕ್ಲು ಪೊಲೀಸ್ ಠಾಣಾಧಿಕಾರಿ ಮಂಜುನಾಥ ಹಾಗೂ ಸಿಬ್ಬಂದಿ ಬಂದೋಬಸ್ತ್ ಕಲ್ಪಿಸಿದ್ದರು.

ಬುಧವಾರ ಮಧ್ಯಾಹ್ನ ಸಾಮೂಹಿಕವಾಗಿ ಗೌರಿ, ಗಣಪತಿ ಮೂರ್ತಿ ಅಲಂಕೃತ ವಾಹನದಲ್ಲಿ ಇರಿಸಿ ಸಾಂಸ್ಕೃತಿಕ ಕಲಾ ತಂಡಗಳು ಹಾಗೂ ವಾದ್ಯಗೋಷ್ಠಿಯೊಂದಿಗೆ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ಕಾವೇರಿ ನದಿಯಲ್ಲಿ ವಿಸರ್ಜಿಸಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net