ಸ್ಕ್ಯಾನಿಂಗ್ ಸೆಂಟರ್​ಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿ

24-hvr-04
Published on

ಹಾವೇರಿ: ಪ್ರಸವಪೂರ್ವ ಲಿಂಗ ಪತ್ತೆ ಮಾಡುವುದು ಶಿಕ್ಷಾರ್ಹ ಅಪರಾಧ. ಜಿಲ್ಲೆಯ ಪ್ರತಿ ಸ್ಕ್ಯಾನಿಂಗ್ ಸೆಂಟರ್​ಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮರಾ ಅಳವಡಿಸಬೇಕು. ಗರ್ಭಪಾತದ ಔಷಧಗಳು, ಮಾತ್ರೆ, ಇಂಜಕ್ಷನ್​ಗಳನ್ನು ಅಕ್ರಮ ಮಾರಾಟ ಮಾಡುವವರ ಮೇಲೆ ಕಣ್ಗಾವಲಿರಿಸಬೇಕು ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಸರ್ಕಾರಿ ಮತ್ತು ಖಾಸಗಿ ಸ್ಕ್ಯಾನಿಂಗ್ ಸೆಂಟರ್, ರೇಡಿಯಾಲಜಿಸ್ಟ್ ಹಾಗೂ ಸ್ತ್ರೀ ರೋಗ ತಜ್ಞರಿಗಾಗಿ ಬುಧವಾರ ಆಯೋಜಿಸಿದ್ದ ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ಹಾಗೂ ನಿಷೇಧ ಕಾಯ್ದೆ ಕುರಿತ ಜಿಲ್ಲಾಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಪ್ರಸವಪೂರ್ವ ಲಿಂಗಪತ್ತೆ, ಹೆಣ್ಣು ಭ್ರೂಣಹತ್ಯೆಗೆ ಸಮಾಜದಲ್ಲಿ ಹೆಣ್ಣು, ಗಂಡು ಮಗುವಿನ ನಡುವಿನ ತಾರತಮ್ಯ ಕಾರಣವಾಗಿದೆ. ಎಲ್ಲರೂ ಹೆಣ್ಣು, ಗಂಡು ಸಮಾನ ಎಂಬ ಮನೋಭಾವನೆಯಿಂದ ಮಕ್ಕಳನ್ನು ಬೆಳೆಸಬೇಕು. ಅಂದಾಗ ಮಾತ್ರ ಹೆಣ್ಣು ಭ್ರೂಣಹತ್ಯೆ ಕಡಿಮೆಯಾಗುತ್ತವೆ ಎಂದರು.

ಪುರುಷರಿಗಿಂತ ಮಹಿಳಾ ಅನುಪಾತ ಕಡಿಮೆಯಾಗದಂತೆ ಎಚ್ಚರವಹಿಸಬೇಕು. ಕೇಂದ್ರ ಸರ್ಕಾರ ಹೆರಿಗೆಗೆ ಮುನ್ನ ಭ್ರೂಣಲಿಂಗ ಪತ್ತೆ ಮಾಡುವುದನ್ನು ನಿಷೇಧಿಸಿದೆ. ಕಾಯ್ದೆಯನ್ನು ಉಲ್ಲಂಘಿಸಿದರೆ ಕಠಿಣ ಕ್ರಮ ಜರುಗಿಸಿ ಶಿಕ್ಷೆಗೆ ಗುರಿಪಡಿಸಬೇಕು ಎಂದರು.

ಜಿಪಂ ಸಿಇಒ ಮಹಮ್ಮದ ರೋಷನ್ ಮಾತನಾಡಿ, ಪ್ರಸವಪೂರ್ವ ಹೆಣ್ಣು ಭ್ರೂಣ ಹತ್ಯೆ ಅಪರಾಧ ಸಂಖ್ಯೆ ಹೆಚ್ಚಾಗಿವೆ. ಜಿಲ್ಲಾ ಮತ್ತು ತಾಲೂಕು ಸರ್ಕಾರಿ ಹಾಗೂ ಖಾಸಗಿ ಸ್ಕ್ಯಾನಿಂಗ್ ಸೆಂಟರ್​ಗಳು ಪ್ರತಿಯೊಬ್ಬ ಗರ್ಭಿಣಿಯ ಸ್ಕ್ಯಾನಿಂಗ್ ಮಾಹಿತಿಯನ್ನು ದಾಖಲಿಸಿ ಇಲಾಖೆಗೆ ಮಾಹಿತಿ ನೀಡಬೇಕು ಎಂದರು.

ಯಾದಗಿರಿಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ. ಇಂದುಮತಿ ಪಾಟೀಲ ಉಪನ್ಯಾಸ ನೀಡಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಚ್.ಎಸ್. ರಾಘವೇಂದ್ರಸ್ವಾಮಿ, ಪಿಸಿ ಮತ್ತು ಪಿಎನ್​ಡಿಟಿ ಅಧಿಕಾರಿ ಡಾ. ದೇವರಾಜ ಎಸ್., ಡಾ. ಎಂ. ಜಾನ್, ತಾಲೂಕು ಮತ್ತು ಜಿಲ್ಲಾಮಟ್ಟದ ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net