

ಗೋಣಿಕೊಪ್ಪಲು: ಗ್ರಾಮೀಣ ಭಾಗವಾಗಿರುವ ಬಿ.ಶೆಟ್ಟಿಗೇರಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ರೈಲು ಕಂಬಿ ಬ್ಯಾರಿಕೇಡ್ ಅಳವಡಿಸಲು 3.5 ಕೋಟಿ ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಿದ್ದು, ಆದರೆ ಇಲ್ಲಿಯ ತನಕ ಸಂಬಂಧಿಸಿದ ಜಿಲ್ಲಾಡಳಿತವಾಗಲಿ, ಅರಣ್ಯ ಇಲಾಖೆಯಾಗಲಿ ಕಾಮಗಾರಿಗೆ ಚಾಲನೆ ನೀಡಿಲ್ಲ. ಕೂಡಲೇ ಕಾಮಗಾರಿಯನ್ನು ಆರಂಭಿಸಬೇಕು ಎಂದು ಬಿ.ಶೆಟ್ಟಿಗೇರಿ ಗ್ರಾ.ಪಂ.ಅಧ್ಯಕ್ಷ ಕೊಲ್ಲಿರ ಬೋಪಣ್ಣ ಆಗ್ರಹಿಸಿದ್ದಾರೆ.
ಈ ಭಾಗದಲ್ಲಿ ನಿರಂತರವಾಗಿ ಕಾಡುತ್ತಿರುವ ಕಾಡಾನೆ ಉಪಟಳ ತಡೆಗೆ ಈ ಕಾಮಗಾರಿ ಅತ್ಯಗತ್ಯ. ಕೆಲವು ತಿಂಗಳ ಹಿಂದೆ ಶಾಸಕ ಎ.ಎಸ್.ಪೊನ್ನಣ್ಣ ಅವರು ಈ ಭಾಗದಲ್ಲಿ ಕಾಡಾನೆಗಳ ಹಾವಳಿ ಸಮಸ್ಯೆ ಅರಿತು ರೈಲು ಕಂಬಿ ಬ್ಯಾರಿಕೇಡ್ ಅಳವಡಿಕೆಗೆ ಸರ್ಕಾರದಿಂದ 21 ಕೋಟಿ ರೂ. ಅನುದಾನ ಮಂಜೂರು ಮಾಡಿಸಿದ್ದರು. ಅಲ್ಲದೆ ಕೆಲವು ತಿಂಗಳ ಹಿಂದೆ ಕಾಮಗಾರಿಗೆ ಭೂಮಿಪೂಜೆಯನ್ನು ನೆರವೇರಿಸಿದ್ದರು. ಆದರೆ ಇದುವರೆಗೂ ಕಾಮಗಾರಿ ಆರಂಭವಾಗಿಲ್ಲ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಈ ಭಾಗದಲ್ಲಿ 15ಕ್ಕೂ ಅಧಿಕ ಕಾಡಾನೆಗಳು ಒಂದು ತೋಟದ ನಂತರ ಮತ್ತೊಂದು ತೋಟಕ್ಕೆ ಲಗ್ಗೆ ಹಿಡುತ್ತಾ ಒಂದು ತಿಂಗಳಿನಿಂದ ಬೀಡುಬಿಟ್ಟಿವೆ. ರೈತರ ತೋಟದಲ್ಲಿರುವ ಕಾಫಿ, ಬಾಳೆ, ತೆಂಗು, ಅಡಕೆ ಗಿಡಗಳನ್ನು ಬುಡ ಸಹಿತ ಕಿತ್ತು ಹಾಕುವ ಮೂಲಕ ಅಪಾರ ಪ್ರಮಾಣದಲ್ಲಿ ನಷ್ಟ ಪಡಿಸಿದೆ. ಅರಣ್ಯ ಸಿಬ್ಬಂದಿ ಆನೆ ಓಡಿಸುವ ಕಾರ್ಯಾಚರಣೆ ಕೈಗೊಂಡಿದ್ದರೂ ಪ್ರಯೋಜನವಾಗುತ್ತಿಲ್ಲ. ಹೀಗಾಗಿ ಇದನ್ನು ಹತೋಟಿಗೆ ತರಲು ಅರಣ್ಯದಿಂದ ಬರುವ ಕಾಡಾನೆಗಳನ್ನು ತಡೆಗಟ್ಟಲು ರೈಲು ಬ್ಯಾರಿಕೇಡ್ ಅಳವಡಿಕೆ ಸೂಕ್ತ ಮಾರ್ಗವಾಗಿದೆ.
ಗ್ರಾಮದಲ್ಲಿರುವ ಬಹುತೇಕ ಶಾಲಾ ವಿದ್ಯಾರ್ಥಿಗಳು ವ್ಯಾಸಂಗಕ್ಕೆ ಸ್ಥಳೀಯ ಸರ್ಕಾರಿ ಶಾಲೆಯನ್ನು ಅವಲಂಬಿಸಿದ್ದಾರೆ. ಶಾಲೆಗೆ ನಡೆದುಕೊಂಡೆ ತೆರಳಬೇಕಾಗಿದೆ. ಕಾಡಾನೆ ಉಪಟಳದಿಂದ ಬಹುತೇಕ ವಿದ್ಯಾರ್ಥಿಗಳು ಪ್ರಾಣ ಭಯದಿಂದಾಗಿ ಶಾಲೆಗೆ ಹೋಗುವುದನ್ನು ಬಿಟ್ಟಿದ್ದಾರೆ. ಇದರಿಂದ ಇವರ ವಿದ್ಯಾಭ್ಯಾಸದ ಮೇಲೆ ಪರಿಣಾಮ ಬೀರುತ್ತಿದೆ. ರಸ್ತೆ ಬದಿಯಲ್ಲಿಯೇ ಕಾಡಾನೆಗಳು ಕಾಣಿಸಿಕೊಳ್ಳುತ್ತಿರುವುದರಿಂದ ಸಹಜವಾಗಿ ಭಯದ ವಾತಾವರಣ ನಿರ್ಮಾಣವಾಗಿದೆ ಎಂದರು.
ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಉಮೇಶ್ ಕೇಚಮಯ್ಯ ಮಾತನಾಡಿ, ಬಿ.ಶೆಟ್ಟಿಗೇರಿ ವ್ಯಾಪ್ತಿಯಲ್ಲಿ ದಾಖಲೆಯ ಮಳೆಯಾಗಿರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಮಳೆಯಿಂದಾಗಿ ಮುಂದೆ ಸಾಕಷ್ಟು ಸಮಸ್ಯೆಗಳು ರೈತರಿಗೆ ಎದುರಾಲಿದೆ. ಸಾಕಷ್ಟು ಮಳೆ ಸುರಿದಿದ್ದರೂ ಅಧಿಕಾರಿಗಳು ಇತ್ತ ರೈತರ ಕಷ್ಟವನ್ನು ಆಲಿಸುತ್ತಿಲ್ಲ ಎಂದು ಗಂಭೀರ ಆರೋಪ ಮಾಡಿದರು.
ಈ ಭಾಗದಲ್ಲಿ ವಿಪರೀತವಾಗಿ ಮಳೆ ಸುರಿಯುತ್ತಿರುವುದರಿಂದಾಗಿ ಒಂದೆಡೆ ಕಾರ್ಮಿಕರ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಇನ್ನೊಂದೆಡೆ ರಸಗೊಬ್ಬರ ಬೆಲೆ ಹೆಚ್ಚಳದಿಂದ ಈ ಭಾಗದ ಬೆಳೆಗಾರರು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಾಫಿ ಉದುರುತ್ತಿದ್ದರೆ, ಕರಿಮೆಣಸಿನ ಬಳ್ಳಿಗಳಿಗೆ ರೋಗ ಬಾಧೆ ಕಾಣಿಸಿಕೊಳ್ಳುತ್ತಿದೆ. ಇದರೊಂದಿಗೆ ವನ್ಯಪ್ರಾಣಿಗಳಿಗಳ ಉಪಟಳವನ್ನೂ ಎದುರಿಸುತ್ತಿದ್ದೇವೆ ಎಂದರು.
ನಿವೃತ್ತ ಯೋಧ ಕೊಲ್ಲೀರ ಸುಬ್ರಮಣಿ, ಚೇರಂಡ ರೋಶನ್, ಚೇರಂಡ ಜಗನ್, ಸವಿತಾ ಸಮಾಜದ ತಾಲೂಕು ಅಧ್ಯಕ್ಷರಾದ ಪೂಣಚ್ಚಿರ ಮನೋಜ್ ಹಾಗೂ ಕೊಲ್ಲಿರ ಮಾದಪ್ಪ ಉಪಸ್ಥಿತರಿದ್ದರು.