

ಹಾಸನ: ಪಿಒಪಿ ಬಣ್ಣದ ಗಣಪತಿ ಬಳಕೆ ಮಾಡುವ ಬದಲು ಮಣ್ಣಿನ ಗಣೇಶ ಬಳಕೆ ಮಾಡಬೇಕು ಎಂದು ಮಾಜಿ ಶಾಸಕರೂ ಆದ ಪರಿಸರಕ್ಕಾಗಿ ನಾವು ಸಂಘಟನೆ ರಾಜ್ಯ ಘಟಕದ ಅಧ್ಯಕ್ಷ ಎ.ಟಿ.ರಾಮಸ್ವಾಮಿ ಹೇಳಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ವಂದೇ ಮಾತರಂ ಸಮಿತಿಯಿಂದ ಆಯೋಜಿಸಿದ್ದ ನನ್ನ ಗಣಪ ಮಣ್ಣಿನ ಗಣಪ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಮುಂದಿನ ವರ್ಷಕ್ಕೆ ಗೋಧಿ, ರಾಗಿ, ಮೈದಾ, ಅಕ್ಕಿಹಿಟ್ಟಿನ ಗಣಪ ಮೂರ್ತಿ ನಿರ್ಮಾಣ ಮಾಡುವ ಮೂಲಕ ಜಲಚರ ಜೀವಿಗಳಿಗೆ ಆಹಾರ ನೀಡಬಹುದು. ಪಿಒಪಿ ಬಣ್ಣದ ಗಣಪತಿ ಪರಿಸರಕ್ಕೆ ಹಾನಿ ಮಾಡುತ್ತವೆ. ಪರಿಸರಕ್ಕೆ ಪೂರಕವಾದ ಮಣ್ಣಿನ ಗಣಪತಿ ಬಳಕೆ ಮಾಡಬೇಕು ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಮಾಜಿ ಗೌರವಾಧ್ಯಕ್ಷ ರವಿನಾಕಲಗೂಡು ಮಾತನಾಡಿ, ಪರಿಸರದ ಬಗ್ಗೆ ಜಾಗೃತಿ ಮೂಡಿಸವ ಕೆಲಸ ಆಗಬೇಕಿದೆ. ಮಣ್ಣಿನ ಗಣಪ ತಯಾರು ಮಾಡುವ ಕಾರ್ಯಾಗಾರ ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತದೆ ಎಂದು ಹೇಳಿದರು.
ಬ್ರಾಹ್ಮಣ ಸಭಾದ ಅಧ್ಯಕ್ಷ ಎಚ್.ಎಸ್.ಮಂಜುನಾಥ್ ಮೂರ್ತಿ, ವಂದೇ ಮಾತರಂ ಗೆಳೆಯರ ಬಳಗದ ಮುಖ್ಯ ಸಂಚಾಲಕ ಪ್ರಣವ್ ಭಾರದ್ವಾಜ್, ಕಟ್ಟಾಯ ಶಿವಕುಮಾರ್, ಶೋಭನ್ ಬಾಬು, ಸೀತರಾಮಾಂಜನೇಯ ದೇವಾಲಯದ ಅಧ್ಯಕ್ಷ ಶ್ರೀಕಾಂತ್, ಮನು, ನಾಗರಾಜ್, ಪೂಜಾ ರಘುನಂದನ್, ರಘುನಂದನ್, ಎಚ್.ಎಸ್.ಬಾಲಸುಬ್ರಹ್ಮಣ್ಯ ಪ್ರಸಾದ್, ಝೇಂಕಾರ್, ಪ್ರಜ್ವಲ್ ಗೌಡ, ದಿಗಂತ್, ಆದಿತ್ಯ, ಸೃಜನ್, ತನವ್, ಪೃಥ್ವಿಕ್, ಚಿದಾನಂದ್ ಇತರರು ಇದ್ದರು.