

ಅರಸೀಕೆರೆ: ಉದ್ಯೋಗ ಅರಸಿ ಅನ್ಯರಾಜ್ಯಗಳಿಂದ ಆಗಮಿಸಿ ತಾಲೂಕಿನ ವಿವಿಧೆಡೆ ನೆಲೆಸಿರುವ ಕಾರ್ಮಿಕರ ಪತ್ತೆಗೆ ಕಾರ್ಮಿಕ ಇಲಾಖೆ ನಿರೀಕ್ಷಕಿ ಶಶಿಕಲಾ ಮುಂದಾಗಿದ್ದಾರೆ. ಇದಕ್ಕೆ ಪೂರಕ ಎನ್ನುವಂತೆ ಕೋಡಿಹಳ್ಳಿ ಬಳಿಯಿರುವ ಅರವಿಂದ್ ಹಾಗೂ ಹುಳಿಯಾರು ರಸ್ತೆಗೆ ಹೊಂದಿಕೊಂಡಂತಿರುವ ಶಾಹಿ ಗಾರ್ಮೆಂಟ್ಸ್‌ಗೆ ಸೋಮವಾರ ದಿಢೀರ್ ಭೇಟಿ ನೀಡಿ ವಿವರ ಕಲೆಹಾಕಿದ್ದಾರೆ.
ಶಾಹಿ ಗಾರ್ಮೆಂಟ್ಸ್‌ನಲ್ಲಿ ಅನ್ಯರಾಜ್ಯಗಳಿಂದ ಉದ್ಯೋಗ ಅರಸಿ ಬಂದಿರುವ ಹದಿಮೂರು ಕಾರ್ಮಿಕರು ದುಡಿಯುತ್ತಿರುವುದು ಗೊತ್ತಾಗಿದೆ. ಯಾವುದೇ ಅನ್ಯರಾಜ್ಯದ ಕಾರ್ಮಿಕರಿಲ್ಲ ಎಂಬ ಮಾಹಿತಿಯನ್ನು ಅರವಿಂದ್ ಲಿಮಿಟೆಡ್ ಸಿಬ್ಬಂದಿ ತಿಳಿಸಿದ್ದಾರೆ.
ವಿವರಕ್ಕೆ ಪೊಲೀಸರಿಂದ ಪತ್ರ: ತಾಲೂಕಿನ ವಿವಿಧೆಡೆ ವಲಸಿಗ ಕಾರ್ಮಿಕರ ಪುಂಡಾಟಿಕೆ ಹೆಚ್ಚಿರುವ ಹಿನ್ನೆಲೆಯಲ್ಲಿ ಕಠಿಣ ಕ್ರಮಕ್ಕೆ ಮುಂದಾಗಿರುವ ಆರಕ್ಷಕ ಇಲಾಖೆ ವಿವರ ಪತ್ತೆಗೆ ಕಾರ್ಮಿಕ ಇಲಾಖೆ ನಿರೀಕ್ಷಕರಿಗೆ ಪತ್ರ ಬರೆದಿದೆ. ಗಾರ್ಮೆಂಟ್ಸ್, ಕ್ರಷರ್, ಬಾರ್ ಮತ್ತು ರೆಸ್ಟೋರೆಂಟ್, ರಸ್ತೆ ಕಾಮಗಾರಿ, ಕಟ್ಟಡ ನಿರ್ಮಾಣ ಗುತ್ತಿಗೆದಾರರ ಸಂಘ ಸೇರಿದಂತೆ ಇನ್ನಿತರ ಕಡೆಗಳಿಂದ ಮಾಹಿತಿ ಪಡೆದು ಪತ್ತೆಗೆ ನೆರವು ಕೋರಿ ಪತ್ರ ಬರೆದಿದೆ. ತಕ್ಷಣವೇ ಎಚ್ಚೆತ್ತುಕೊಂಡ ಕಾರ್ಮಿಕ ಇಲಾಖೆ ನಿರೀಕ್ಷಕಿ ಶಶಿಕಲಾ ವಲಸಿಗರ ಪತ್ತೆ ಕಾರ್ಯಕ್ಕೆ ಮುಂದಾಗಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಕೆಲ ದಿನಗಳ ಹಿಂದೆ ಬಿಲ್ಡಿಂಗ್ ಕಾಂಟ್ರ್ಯಾಕ್ಟರ್ ವಿಜಯ್ ಕುಮಾರ್ ಕೊಲೆಯಾಗಿದ್ದು, ಕೃತ್ಯದಲ್ಲಿ ಭಾಗಿಯಾಗಿದ್ದ ಬಿಹಾರ ಮೂಲದ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ವಲಸಿಗರ ಪುಂಡಾಟ ಕುರಿತು ವಿಜಯವಾಣಿ ಪತ್ರಿಕೆ ಜೂ.2ರ ಸಂಚಿಕೆಯಲ್ಲಿ ಸಮಗ್ರ ವರದಿ ಪ್ರಕಟಿಸಿತ್ತು. ಇದೀಗ ಆರಕ್ಷಕ ಇಲಾಖೆ ಹಾಗೂ ಕಾರ್ಮಿಕ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಲು ಮುಂದಡಿಯಿಟ್ಟಿರುವುದು ನಾಗರಿಕರಲ್ಲಿ ನಿಟ್ಟುಸಿರು ಬಿಡುವಂತೆ ಮಾಡಿದೆ.