

ಕೆ.ಆರ್.ಸಾಗರ: ಕೆ.ಆರ್.ಸಾಗರ ಅಣೆಕಟ್ಟೆಗೆ ಗಣನೀಯವಾಗಿ ಒಳಹರಿವು ಏರಿಕೆಯಾಗುತ್ತಿರುವ ಕಾರಣ ಕೃಷ್ಣರಾಜಸಾಗರ ಅಣೆಕಟ್ಟೆಯಿಂದ ಕಾವೇರಿ ನದಿಗೆ ನೀರು ಬಿಡುಗಡೆ ಮಾಡಿದ ಸಂದರ್ಭದಲ್ಲಿ ಅನಾಹುತ ಸಂಭವಿಸದಂತೆ ನದಿ ಪಾತ್ರದಲ್ಲಿ ಮುಂಜಾಗ್ರತಾ ಕ್ರಮವಾಗಿ ಶ್ರೀರಂಗಪಟ್ಟಣ ತಹಸೀಲ್ದಾರ್ ಪರುಶರಾಮ್ ಸತ್ತಿಗೇರಿ ನೇತೃತ್ವದಲ್ಲಿ ಕೆ.ಆರ್.ಸಾಗರ ಕಾವೇರಿ ನಿಗಮ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮತ್ತು ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಅಧಿಕಾರಿಗಳ ಜತೆಗೂಡಿ ಮಂಗಳವಾರ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಪ್ರವಾಸಿ ತಾಣದಲ್ಲಿ ನದಿ ತೀರದಲ್ಲಿರುವ ಅಂಗಡಿಗಳು, ಗ್ರಾಮಸ್ಥರು, ಆಶ್ರಮದ ಮುಖ್ಯಸ್ಥರಿಗೆ ಅಣೆಕಟ್ಟೆಯಿಂದ ಹೊರಹರಿವು ಬಿಡುವ ಎಚ್ಚರಿಕೆ ನೀಡಿದ ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಅರಿವು ಮೂಡಿಸಲಾಯಿತು.
ಕೃಷ್ಣರಾಜಸಾಗರ ಅಣೆಕಟ್ಟೆಯಲ್ಲಿ ನೀರಿನ ಮಟ್ಟ 110 ಅಡಿ ತಲುಪಿದ್ದು, ಸುಮಾರು 35 ಸಾವಿರ ಕ್ಯೂಸೆಕ್ ಒಳಹರಿವು ಬರುತ್ತಿದ್ದು, ಒಳಹರಿವು ಹೆಚ್ಚಾದಂತೆ ಯಾವುದೇ ಸಂದರ್ಭದಲ್ಲಿ ಅಣೆಕಟ್ಟೆಯಿಂದ ನೀರು ಬಿಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಎಡಮುರಿ, ಬಲಮುರಿ, ಸರ್ವಧರ್ಮ ಆಶ್ರಮ, ಕಾರೇಕುರ, ಗೌತಮ ಆಶ್ರಮ, ಅಚ್ಚಪ್ಪನಕೊಪ್ಪಲು ಸೇರಿದಂತೆ ಹಲವು ನದಿ ತೀರಗಳಲ್ಲಿ ಹೊರಹರಿವು ಹೆಚ್ಚಾದ ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ಎಚ್ಚರಿಕೆ ಕ್ರಮ, ಜನರು ಹೋಗದಂತೆ ಪ್ರವೇಶ ನಿಷೇಧ, ಇತರ ವಿಷಯಗಳ ಬಗ್ಗೆ ಚರ್ಚಿಸಿ ಯೋಜನೆ ರೂಪಿಸಲಾಯಿತು.
ಈ ಸಂದರ್ಭದಲ್ಲಿ ಕೆ.ಆರ್.ಸಾಗರ ಕಾವೇರಿ ನಿಗಮ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕಿಶೋರ್‌ಕುಮಾರ್ ಮತ್ತು ತಾ.ಪಂ. ಕಾರ್ಯನಿರ್ವಹಣಾಧಿಕಾರಿ ವೇಣು, ರಾಜಸ್ವ ನಿರೀಕ್ಷಕ ಬಸವರಾಜು, ಹುಲಿಕರೆ ಪಿಡಿಒ ನಟೇಶ್, ಕಾರ್ಯದರ್ಶಿ ಶಿವಣ್ಣ ಇದ್ದರು.