

ವಿಜಯವಾಣಿ ಸುದ್ದಿಜಾಲ ಬಂಟ್ವಾಳ
ಬಿ.ಸಿ.ರೋಡ್-ಅಡ್ಡಹೊಳೆ ಚತುಷ್ಪಥ ಹೆದ್ದಾರಿ ಕಾಮಗಾರಿಯಿಂದಾಗಿ ಕಲ್ಲಡ್ಕ ಪೇಟೆ ಕೆಸರುಮಯವಾಗಿ ಜನರು ತೊಂದರೆ ಅನುಭ ವಿಸುತ್ತಿದ್ದು, ಬುಧವಾರ ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವಾಹನ ಸಂಚಾರ ಮಾತ್ರವಲ್ಲ, ಸಾರ್ವಜನಿಕರ ಓಡಾಟ, ರಸ್ತೆ ದಾಟಲು ಕೂಡ ಕಲ್ಲಡ್ಕ ಪೇಟೆಯಲ್ಲಿ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳು ಮತ್ತು ಗುತ್ತಿಗೆ ಸಂಸ್ಥೆಗೆ ಕೆಲವು ತುರ್ತು ಕಾಮಗಾರಿ ಕೈಗೊಳ್ಳಲು ಡಿಸಿ ನಿರ್ದೇಶನ ನೀಡಿದರು. ಸ್ಥಳೀಯ ವ್ಯಾಪಾರಿಗಳು ಹೆದ್ದಾರಿ ಅಭಿವೃದ್ಧಿ ಕಾಮಗಾರಿಯಿಂದ ಉಂಟಾಗಿರುವ ಸಮಸ್ಯೆಗಳನ್ನು ಜಿಲ್ಲಾಧಿಕಾರಿ ಗಮನಕ್ಕೆ ತಂದರು.
ನಿರ್ಮಾಣ ಹಂತದಲ್ಲಿರುವ ಪಿಲ್ಲರ್‌ಗಳ ಬಳಿ ನೀರು ಸರಾಗವಾಗಿ ಹರಿದುಹೋಗಲು ಒಳಭಾಗದಲ್ಲಿ ಚರಂಡಿ ನಿರ್ಮಾಣ, ಪಾದಚಾರಿಗಳು ದಾಟಲು 4 ಪಾಯಿಂಟ್‌ಗಳಲ್ಲಿ ಸಮತಲ ಕಾಲುದಾರಿ ನಿರ್ಮಾಣ, ಅಲ್ಲಲ್ಲಿ ರಾಶಿ ಬಿದ್ದಿರುವ ಕಲ್ಲು ಮಣ್ಣುಗಳ ತೆರವು, ಸರ್ವೀಸ್ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅನುಕೂಲವಾಗುವಂತೆ ಸಿಮೆಂಟ್ ಜಲ್ಲಿಕಲ್ಲಿನ ಮಿಶ್ರಣ ಅಳವಡಿಸುವಂತೆ ಗುತ್ತಿಗೆ ಸಂಸ್ಥೆಗೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.
ತಹಸೀಲ್ದಾರ್ ಅರ್ಚನಾ ಡಿ.ಭಟ್, ಟ್ರಾಫಿಕ್ ಎಸ್‌ಐ ಸುತೇಶ್, ಕೆಎನ್‌ಆರ್ ಸಂಸ್ಥೆ ಎಜಿಎಂ ರೋಹಿತ್ ರೆಡ್ಡಿ, ಕಂದಾಯ ನಿರೀಕ್ಷಕರಾದ ಜನಾರ್ದನ, ವಿಜಯ್ ಮತ್ತಿತರರು ಜತೆಗಿದ್ದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿ ಮುಲ್ಲೈ ಮುಗಿಲನ್, ಕಳೆದ ಮಾರ್ಚ್‌ನಲ್ಲಿ ಮಳೆಗಾಲ ಮುಂಚಿತವಾಗಿಯೇ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಸೂಚನೆ ನೀಡಲಾಗಿತ್ತು. ವಿಟ್ಲ ಸರ್ಕಲ್‌ವರೆಗೆ ಚರಂಡಿ ನಿರ್ಮಾಣ ಮುಗಿದಿದ್ದು ಮಧ್ಯ ಭಾಗದಲ್ಲಿ ಚರಂಡಿ ಕೆಲಸ ಮಾಡಲು ಸಾಧ್ಯವಾಗಲಿಲ್ಲ. ಮಳೆ ಕಡಿಮೆಯಾದ ತಕ್ಷಣ ಅಲ್ಲಿಯೂ ಚರಂಡಿ ಮಾಡಿಕೊಡುವಂತೆ ಸೂಚನೆ ನೀಡಿದ್ದೇವೆ. ಫೈ ಓವರ್ ಕೆಲಸವೂ ಉತ್ತಮವಾಗಿ ಸಾಗುತ್ತಿದೆ. ಜನರು ರಸ್ತೆ ದಾಟಲು ಅನುಕೂಲ ಆಗುವಂತೆ ಆಯ್ದ ಜಾಗಗಳಲ್ಲಿ ರ‌್ಯಾಂಪ್ ಮಾಡಲು ಸ್ಥಳ ಗುರುತಿಸುವಂತೆ ತಹಸೀಲ್ದಾರ್‌ಗೆ ಸೂಚಿಸಲಾಗಿದೆ. ತಕ್ಷಣ ಕೆಲಸವೂ ಆಗಲಿದೆ ಎಂದರು.