ಕೋಟಿಗದ್ದೆ ಸೇತುವೆ ಪರಿಶೀಲನೆ : ಕೊಚ್ಚಿಹೋದ ಅಡಿಭಾಗ, ದುರ್ಬಲ ಪಿಲ್ಲರ್ : ಕಳಪೆ ಕಾಮಗಾರಿ ಆರೋಪ:

bridge
ಕೋಟಿಗದ್ದೆ ಸೇತುವೆಯನ್ನು ಲೋಕೋಪಯೋಗಿ ಇಲಾಖೆಯ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಬಿ.ರಾಜಾರಾಮ್, ಇಂಜಿನಿಯರ್ ಬಾಲಕೃಷ್ಣ ಭಟ್ ಪರಿಶೀಲನೆ ನಡೆಸಿದರು.
Published on

ವಿಜಯವಾಣಿ ಸುದ್ದಿಜಾಲ ಪುತ್ತೂರು ಗ್ರಾಮಾಂತರ

ಈಶ್ವರಮಂಗಲದಿಂದ ಗಾಳಿಮುಖಕ್ಕೆ ಸಂಪರ್ಕ ಕಲ್ಪಿಸುವ ಅಂತರ್ ರಾಜ್ಯ ಸಂಪರ್ಕ ರಸ್ತೆಯ ಕರ್ನೂರು ಸಮೀಪದ ಕೋಟಿಗದ್ದೆ ಎಂಬಲ್ಲಿ ನಡೆಯುತ್ತಿರುವ ನೂತನ ಸೇತುವೆ ಕಾಮಗಾರಿ ಕಳಪೆಯಾಗಿದೆ ಎನ್ನುವ ಆರೋಪ ವ್ಯಕ್ತವಾಗಿದ್ದ ಹಾಗೂ ಸೇತುವೆಯ ಅಡಿಭಾಗದಲ್ಲಿ ಕೊರೆತ ಉಂಟಾಗಿದ್ದ ಹಿನ್ನೆಲೆಯಲ್ಲಿ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಬುಧವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಳೆದ ಕೆಲ ದಿನಗಳಿಂದ ಸುರಿದ ಮಳೆಯಿಂದಾಗಿ ಸೇತುವೆಯ ಕೆಳಭಾಗದ ಅಡಿಪಾಯ ಮಳೆನೀರಿನೊಂದಿಗೆ ಕೊಚ್ಚಿಕೊಂಡು ಹೋಗಿದೆ. ಸೇತುವೆಯ ಅಡಿಭಾಗದಲ್ಲಿ ಕೊರೆತವಾಗಿ ಗೋಡೆ ನೇತಾಡುವ ಸ್ಥಿತಿಗೆ ಬಂದಿದೆ. ಸೇತುವೆಯ ಬದಿಯಲ್ಲಿ ನಿರ್ಮಿಸಿರುವ ತಡೆಗೋಡೆಯ ಕೆಳಗಿನ ಭಾಗದ ಮಣ್ಣು ಕೂಡ ಕೊಚ್ಚಿ ಹೋಗಿದೆ.

ಕಾಮಗಾರಿ ಸಂಪೂರ್ಣವಾಗಿ ಕಳಪೆಯಾಗಿದ್ದು, ಸೇತುವೆಗೆ ಮಂಜೂರು ಮಾಡಲಾದ 40 ಲಕ್ಷ ರೂ.ಅನುದಾನ ನೀರುಪಾಲಾಗಿದೆ ಎಂದು ಗ್ರಾಮಸ್ಥರರು ಆರೋಪಿಸಿದ್ದರು. ಕಾಮಗಾರಿಯನ್ನು ಸಮರ್ಪಕವಾಗಿ ನಿರ್ವಹಿಸದಿದ್ದರೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದರು. ಈ ಕುರಿತು ವಿಜಯವಾಣಿಯಲ್ಲಿ ಸಮಗ್ರ ವರದಿ ಪ್ರಕಟವಾಗಿತ್ತು.

ಈ ಹಿನ್ನೆಲೆಯಲ್ಲಿ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಬಿ.ರಾಜಾರಾಮ್, ಇಂಜಿನಿಯರ್ ಬಾಲಕೃಷ್ಣ ಭಟ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸೇತುವೆ ಪಿಲ್ಲರ್ ಭೀಮ್ ನಿರ್ಮಿಸುವ ವೇಳೆ ತೋಡಿನ ಭಾಗಕ್ಕೆ ಹುಡಿ ಮಣ್ಣು ಹಾಕಿ ಅದರ ಮೇಲೆಯೇ ಪಿಲ್ಲರ್ ಅಳವಡಿಸಿದ್ದೀರಿ. ಅಡಿಪಾಯ ಸರಿಯಾಗದ ಕಾರಣ ಸೇತುವೆಯ ಅಡಿಭಾಗ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ಈ ಹಿಂದೆ ನೀವು ನೀಡಿರುವ ಭರವಸೆಯೂ ಹುಸಿಯಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದರು.

ರೈತ ಸಂಘ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಅಮರನಾಥ ಆಳ್ವ ಕರ್ನೂರುಗುತ್ತು, ತಾಲೂಕು ಅಧ್ಯಕ್ಷ ನವೀನ್ ಕುಕ್ಕುಡೇಲು, ಗ್ರಾಮ ಸಮಿತಿಯ ಅಧ್ಯಕ್ಷ ಕೊರಗಪ್ಪ ನಾಯ್ಕ ಕಲ್ಲಾಜೆ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ರವಿಕಿರಣ್ ಶೆಟ್ಟಿ ಬೆದ್ರಾಡಿ, ನೆಟ್ಟಣಿಗೆ ಮುಡ್ನೂರು ಗ್ರಾಪಂ ಅಧ್ಯಕ್ಷೆ ಫೌಝಿಯಾ ಇಬ್ರಾಹಿಂ, ಉಪಾಧ್ಯಕ್ಷ ರಾಮ ಮೇನಾಲ, ಸದಸ್ಯರಾದ ಕುಮಾರ್‌ನಾಥ್ ಪೂಜಾರಿ, ಪ್ರಫುಲ್ಲ ರಾಜೇಶ್ ರೈ, ಮಾಜಿ ಸದಸ್ಯ ಖಾದರ್ ಕರ್ನೂರು, ಸ್ಥಳೀಯ ಪ್ರಮುಖರಾದ ರತನ್‌ಕುಮಾರ್ ನಾಕ್ ಕರ್ನೂರುಗುತ್ತು ಇದ್ದರು.

ಮಂಗಳೂರು ಇಂಜಿನಿಯರ್ ಕರೆಸಿ ನಿರ್ಧಾರ

ಗ್ರಾಮಸ್ಥರ ಆರೋಪ, ಅಭಿಪ್ರಾಯಗಳನ್ನು ಆಲಿಸಿದ ಬಿ.ರಾಜಾರಾಮ್ ಶೀಘ್ರದಲ್ಲೇ ಮಂಗಳೂರು ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಅವರನ್ನು ಕರೆಸಿಕೊಂಡು ಸೇತುವೆ ಕಾಮಗಾರಿಯ ಪರಿಶೀಲನೆ ನಡೆಸಲಾಗುವುದು. ಪರಿಶೀಲನೆ ಮಾಡಿ ಸೇತುವೆಯನ್ನು ಏನು ಮಾಡಬಹುದೆಂದು ಜಂಟಿಯಾಗಿ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.

ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಈ ಹಿಂದೆ ನೀಡಿದ್ದ ಭರವಸೆಯೂ ಹುಸಿಯಾಗಿದೆ. ಗುತ್ತಿಗೆದಾರ ಅಧಿಕಾರಿಗಳ ಜತೆಗೆ ಸ್ಥಳಕ್ಕೂ ಬಂದಿಲ್ಲ. ಪ್ರಸ್ತುತ ನಿರ್ವಹಿಸಿರುವ ಕಾಮಗಾರಿ ಕಳಪೆಯಾಗಿರುವುದರಿಂದ ಸಂಪೂರ್ಣವಾಗಿ ತೆರವುಗೊಳಿಸಿ ಹೊಸ ಸೇತುವೆ ನಿರ್ಮಿಸಬೇಕು. ಇಲ್ಲದಿದ್ದರೆ ರೈತ ಸಂಘದ ನೇತೃತ್ವದಲ್ಲಿ ಉಗ್ರ ಪ್ರತಿಭಟನೆ ನಡೆಸುತ್ತೇವೆ. - ಅಮರನಾಥ ಆಳ್ವ ಕರ್ನೂರುಗುತ್ತು, ರೈತ ಸಂಘ ಹಸಿರುಸೇನೆಯ ಜಿಲ್ಲಾಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net