

ಹಾಸನ: ರಾಜ್ಯ ಸರ್ಕಾರದಲ್ಲಿ ಅಭಿವೃದ್ಧಿ ಮರೀಚಿಕೆ. ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಸರ್ಕಾರ, ಅನ್ಯ ವಿಷಯಗಳ ಬಗ್ಗೆ ತಲೆ ಕೆಡಿಸಿಕೊಳ್ಳುವ ಸ್ವಭಾವ ಬೆಳೆಸಿಕೊಂಡಿದೆ. ಕಳೆದ ಎರಡೂವರೆ ವರ್ಷಗಳಲ್ಲಿ ಅಭಿವೃದ್ಧಿಯನ್ನು ಎಲ್ಲೂ ನೋಡಲು ಸಾಧ್ಯವಿಲ್ಲ ಎಂದು ಶಾಸಕ ಸುನೀಲ್ ಕುಮಾರ್ ಆರೋಪಿಸಿದರು.
ಶನಿವಾರ ಕುಟುಂಬ ಸಮೇತರಾಗಿ ಹಾಸನಾಂಬೆ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಸರ್ಕಾರದಿಂದ ಜನರ ಸಮಸ್ಯೆಗಳಿಗೆ ಸ್ಪಂದನೆ ಇಲ್ಲ. ಹುಟ್ಟು ಕುರುಡರಿಗೆ, ಹುಟ್ಟು ಕಿವುಡರಿಗೆ ಅಧಿಕಾರ ನೀಡಿದ್ದರೆ ಜನರ ಕಷ್ಟ ಅರ್ಥವಾಗುತ್ತಿತ್ತು. ಆದರೆ, ಈ ಸರ್ಕಾರಕ್ಕೆ ಕಣ್ಣು ಕಾಣುವುದಿಲ್ಲ, ಕಿವಿಯೂ ಕೇಳುವುದಿಲ್ಲ. ಇದು ಬಾಯಿಬಡುಕ ಸರ್ಕಾರ. ಕೇವಲ ಮಾಧ್ಯಮಗಳ ಮುಂದೆ ಬಂದು ಸರ್ಕಾರಕ್ಕೆ ಸಂಬಂಧವಿಲ್ಲದ ವಿಷಯಗಳ ಕುರಿತು ಬಾಯಿ ಬಡಿದುಕೊಳ್ಳುವುದೇ ಕೆಲಸ ಎಂದು ಟೀಕಿಸಿದರು.
ಈ ಸರ್ಕಾರದ ಅವಧಿಯಲ್ಲಿ 18 ಕ್ಕೂ ಹೆಚ್ಚು ಸರ್ಕಾರಿ ನೌಕರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಿನ್ನೆ ಚಾಮರಾಜನಗರದಲ್ಲಿ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರ ಬಗ್ಗೆ ಸರ್ಕಾರಕ್ಕೆ ಯಾವುದೇ ಸಂವೇದನಾಶೀಲತೆ ಇಲ್ಲ. ಗುತ್ತಿಗೆದಾರರ ಬಾಕಿ ಪಾವತಿಯನ್ನು ಉಲ್ಲೇಖಿಸಿ, ಸರ್ಕಾರಕ್ಕೆ ಗಡುವು ಕೊಡುವ ಪರಿಸ್ಥಿತಿ ಬಂದಿದೆ. 33 ಸಾವಿರ ಕೋಟಿ ರೂ.ಬಾಕಿ ಇದೆ. ಇಂತಹ ಭ್ರಷ್ಟ ಸರ್ಕಾರವನ್ನು ಕರ್ನಾಟಕದಲ್ಲಿ ಯಾವತ್ತೂ ನೋಡಿಲ್ಲ ಎಂದು ದೂರಿದರು.
ಇದು ಅಭಿವೃದ್ಧಿ ಮರೆತಿರುವ, ದಲಿತರ ವಿರೋಧಿ ಹಾಗೂ ಶೇ.80 ಭ್ರಷ್ಟಾಚಾರದಲ್ಲಿ ತೊಡಗಿರುವ ಸರ್ಕಾರ. ಜನರ ಗಮನ ಬೇರೆಡೆ ಸೆಳೆಯಲು ಅನವಶ್ಯಕ ವಿಚಾರಗಳನ್ನು ಎಳೆದು ತರುತ್ತಿದೆ. ಕಲ್ಯಾಣ ಕರ್ನಾಟಕಕ್ಕೆ ನೂರಾರು ಕೋಟಿ ರೂ. ಬಿಡುಗಡೆ ಮಾಡಿದರೂ ಅನುಷ್ಠಾನವಾಗಿಲ್ಲ. ಗ್ರಾಮೀಣಾಭಿವೃದ್ಧಿ ಇಲಾಖೆ ಸಂಪೂರ್ಣ ಕೋಮಾ ಸ್ಥಿತಿಯಲ್ಲಿದೆ. ಈ ಇಲಾಖೆಗೆ ಜೀವ ತುಂಬುವ ಬದಲು ಆರ್‌ಎಸ್‌ಎಸ್ ವಿರುದ್ಧ ಮಾತನಾಡುವುದು ಅಪ್ರಬುದ್ಧತನ ಎಂದು ಹೇಳಿದರು.
ಆರ್‌ಎಸ್‌ಎಸ್ ಹತ್ತಿಕ್ಕಲು ಸಾಧ್ಯವಿಲ್ಲ: ಪ್ರಿಯಾಂಕ್ ಖರ್ಗೆ ಅಪ್ರಬುದ್ಧತನ, ಮೂರ್ಖತನದಿಂದ ಮಾತನಾಡುತ್ತಿದ್ದಾರೆ. ರುಚಿಯೂ ಗೊತ್ತಿಲ್ಲದವರು ಆರ್‌ಎಸ್‌ಎಸ್ ವಿರುದ್ಧ ಮಾತನಾಡುತ್ತಾರೆ. ಅವರಿಗೆ ಪ್ರತಿಕ್ರಿಯೆ ನೀಡುವುದು ಅಗತ್ಯವಿಲ್ಲ ಎಂದು ಶಾಸಕ ಸುನೀಲ್ ಕುಮಾರ್ ಹೇಳಿದರು.
ಯಾವ ಸರ್ಕಾರವೂ ಆರ್‌ಎಸ್‌ಎಸ್ ಹತ್ತಿಕ್ಕಲು ಸಾಧ್ಯವಿಲ್ಲ. ಕರೊನಾ ಸಮಯದಲ್ಲಿ ಮನೆ ಮನೆಗಳಲ್ಲಿ ಶಾಖೆ ನಡೆಸಿದ್ದೆವು. ಇಂದು ಮೈದಾನ ನೀಡದಿದ್ದರೆ ಆರ್‌ಎಸ್‌ಎಸ್ ನಿಲ್ಲುತ್ತದೆಯೇ? ಇದು ಮೂರ್ಖತನದ ಪರಮಾವಧಿ. ಆರ್‌ಎಸ್‌ಎಸ್ ಎಂದರೆ ಒಂದು ಕುಟುಂಬ, ಪರಿವಾರ. ನಮಗೆ ಮೈದಾನ ಬೇಕೆಂದಿಲ್ಲ. ನಾವು ಎಲ್ಲೆಡೆ ಚಟುವಟಿಕೆ ನಡೆಸುತ್ತೇವೆ. ಸರ್ಕಾರ ಹತ್ತಿಕ್ಕಲು ಯತ್ನಿಸಿದಷ್ಟು ನಾವು ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತೇವೆ. ಮುಂದಿನ ದಿನಗಳಲ್ಲಿ ಆರ್‌ಎಸ್‌ಎಸ್ ಸ್ವಯಂ ಸೇವಕರೇ ಕರ್ನಾಟಕದಲ್ಲಿ ಆಡಳಿತ ನಡೆಸುವರು ಇದು ನಿಮಗೆ ಗೊತ್ತಿರಲಿ ಎಂದು ಹೇಳಿದರು.