ಕೀಟಗಳ ಸಂರಕ್ಷಣೆಗಾಗಿ ‘ಕೀಟ ಕೆಫೆ’ : ಲಾಲ್‌ಬಾಗ್‌ನಲ್ಲಿ ಅನಾವರಣ

Insect Cafe
Published on

ಬೆಂಗಳೂರು: ಸಸ್ಯಶಾಸೀಯ ತೋಟವಾಗಿರುವ ಲಾಲ್‌ಬಾಗ್‌ನಲ್ಲಿ ಕೀಟ ಸಂರಕ್ಷಣೆಗಾಗಿ ತೋಟಗಾರಿಕೆ ಇಲಾಖೆಯು ಹೊಸ ಪರಿಕಲ್ಪನೆಯೊಂದಿಗೆ ‘ಕೀಟ ಕೆಫೆ’ ಹೆಸರಿನಲ್ಲಿ ಕೀಟಗಳಿಗೊಂದು ಮರದ ಮನೆ ನಿರ್ಮಿಸಿದ್ದು, ಶುಕ್ರವಾರ ಅನಾವರಣಗೊಳಿಸಲಾಯಿತು.

ಲಾಲ್‌ಬಾಗ್ 3 ಸಾವಿರಕ್ಕೂ ಹೆಚ್ಚು ಸಸ್ಯಪ್ರಭೇದಗಳನ್ನು ಹೊಂದಿದ್ದು, ಅಸಂಖ್ಯಾತ ಜೀವರಾಶಿಗಳ ಕೇಂದ್ರಸ್ಥಾನವಾಗಿದೆ. ಇಲ್ಲಿನ ಅಸಂಖ್ಯಾತ ಬಗೆಯ ಕ್ರಿಮಿ, ಕೀಟ, ದುಂಬಿಗಳಿಗೆ ನೈಸರ್ಗಿಕ ಆಹಾರ ಪಡೆಯಲು ಹಾಗೂ ಸಂತಾನೋತ್ಪತ್ತಿ ಮತ್ತು ಅವುಗಳ ವೃದ್ಧಿಗಾಗಿ ಸಂರಕ್ಷಿತ ಹಾಗೂ ಸುರಕ್ಷಿತ ನೆಲೆ ಸೇರಿ ಸರ್ವ ರೀತಿಯಿಂದಲೂ ಕೀಟಗಳಿಗೆ ಉತ್ತಮ ಆಶ್ರಯ ತಾಣವಾಗಲಿದೆ ಈ ‘ಕೀಟ ಕೆಫೆ’.

ಮರದ ಫ್ರೇಮ್‌ಗಳಿಂದ ಕಮಾನು ರೀತಿಯಲ್ಲಿ ಸಣ್ಣ ಮನೆಯಾಕಾರದಲ್ಲಿ ‘ಕೆಫೆ’ ವಿನ್ಯಾಸಗೊಳಿಸಲಾಗಿದೆ. ಇದನ್ನು ಹಲವು ವಿಭಾಗಗಳಾಗಿ ವರ್ಗೀಕರಿಸಲಾಗಿದೆ. ಪ್ರತಿ ವಿಭಾಗದಲ್ಲೂ ಸಣ್ಣ, ಮಧ್ಯಮ ಮರದ ತುಂಡುಗಳು, ಒಣ ಹುಲ್ಲು, ವಿವಿಧ ರೀತಿಯ ಸಸ್ಯಗಳ ಕಟ್ಟಿಗೆಯನ್ನು ಜೋಡಿಸಿ ಭದ್ರಪಡಿಸಲಾಗಿದೆ. ಈ ರಚನೆಯು ಎಲ್ಲ ಬಗೆಯ ಕೀಟಗಳು, ದುಂಬಿಗಳು ನೆಲೆಸಲು ಮೂಲ ನೆಲೆ ಕಲ್ಪಿಸಲಿದೆ. ಸಂತಾನೋತ್ಪತ್ತಿ ಹಾಗೂ ಅವುಗಳ ವೃದ್ಧಿ ಮತ್ತು ಬೆಳವಣಿಗೆಗೆ ಪೂರಕವಾಗಿ ನಿರ್ಮಿಸಲಾಗಿದೆ.

50ಕ್ಕೂ ಹೆಚ್ಚು ಕೆಫೆಗಳ ನಿರ್ಮಾಣ:

ಪ್ರಾರಂಭಿಕ ಹಂತವಾಗಿ ಲಾಲ್‌ಬಾಗ್‌ನಲ್ಲಿ ಪ್ರಾರಂಭಿಸಿರುವ ಈ ಕೀಟ ಕೆಫೆಯನ್ನು ಕಬ್ಬನ್ ಉದ್ಯಾನ, ನಂದಿ ಗಿರಿಧಾಮ, ಕೃಷ್ಣರಾಜೇಂದ್ರ ಗಿರಿಧಾಮ ಸೇರಿ ರಾಜ್ಯಾದ್ಯಂತ ಸಸ್ಯಶಾಸೀಯ ತೋಟಗಳಲ್ಲಿ ಹೊಸ ಪರಿಕಲ್ಪನೆಯಡಿ 50ಕ್ಕೂ ಹೆಚ್ಚು ಕೀಟ ಕೆಫೆ ನಿರ್ಮಿಸಲು ತೋಟಗಾರಿಕೆ ಇಲಾಖೆ ನಿರ್ಧರಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net