ಷೇರುದಾರರಿಗೆ ಸಾಲ ನೀಡದೆ ಅನ್ಯಾಯ

25-pnp 1
Published on

ಪಾಂಡವಪುರ: ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ (ಪಿಕಾರ್ಡ್) ನಿರ್ದೇಶಕರು ನೀಡುವ ಸಾಲ ಸೌಲಭ್ಯದ ಫಲಾನುಭವಿಗಳು ಬ್ಯಾಂಕಿನ ನಿರ್ದೇಶಕರ ಸಂಬಂಧಿಕರು ಮತ್ತು ಸ್ನೇಹಿತರೇ ಆಗಿದ್ದು, ಇತರ ಷೇರುದಾರರಿಗೆ ಸಾಲ ನೀಡದೆ ಅನ್ಯಾಯ ಮಾಡಲಾಗುತ್ತಿದೆ ಎಂಬ ವಿಚಾರವಾಗಿ ಷೇರುದಾರ ಸದಸ್ಯರು ಹಾಗೂ ಆಡಳಿತ ಮಂಡಳಿಯ ನಿರ್ದೇಶಕರ ನಡುವೆ ಮಾತಿನ ಚಕಮಕಿ ನಡೆಯಿತು.


ಪಟ್ಟಣದ ಟಿಎಪಿಸಿಎಂಎಸ್ ರೈತ ಸಭಾಂಗಣದಲ್ಲಿ ಬ್ಯಾಂಕಿನ ಅಧ್ಯಕ್ಷ ನಾಗಶೆಟ್ಟಿ ಅಧ್ಯಕ್ಷತೆಯಲ್ಲಿ ಬುಧವಾರ ಏರ್ಪಡಿಸಿದ್ದ 2023-24ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಷೇರುದಾರರು ಸಂಘದ ಆಡಳಿತ ಮಂಡಳಿ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಅಧ್ಯಕ್ಷರು ಮತ್ತು ನಿರ್ದೇಶಕರನ್ನು ತರಾಟೆಗೆ ತೆಗೆದುಕೊಂಡರು.


ಬ್ಯಾಂಕಿನ ಎಲ್ಲ ವ್ಯವಹಾರದಲ್ಲಿ ದಲ್ಲಾಳಿಗಳ ಪಾತ್ರ ಹೆಚ್ಚಾಗಿದ್ದು, ಅರ್ಹ ಫಲಾನುಭವಿಗಳಿಗೆ ಯಾವುದೇ ಸೌಲಭ್ಯ ಸಿಗುತ್ತಿಲ್ಲ. ನಿರ್ದೇಶಕ ಸ್ಥಾನಕ್ಕೆ ಆಯ್ಕೆಯಾಗಿರುವ ವ್ಯಕ್ತಿಗಳು ಹೇಳಿದವರಿಗೆ ಮಾತ್ರ ಸೌಲಭ್ಯ ಎನ್ನುವಂತಾಗಿದೆ. ಹಾಗಾದರೆ ಷೇರುದಾರರ ಅವಶ್ಯಕತೆ ಏನಿದೆ ಎಂಬ ಅಭಿಪ್ರಾಯ ಷೇರುದಾರರಿಂದ ವ್ಯಕ್ತವಾಯಿತು.


ಷೇರುದಾರರು ಕೇಳುವ ಪ್ರಶ್ನೆಗಳಿಗೆ ಸಂಘದ ಮಾಜಿ ಅಧ್ಯಕ್ಷ ಹಾಗೂ ನಿರ್ದೇಶಕ ಮಲ್ಲಿಗೆರೆ ಯಶವಂತ್ ಒಬ್ಬರೇ ಎಲ್ಲದಕ್ಕೂ ಉತ್ತರ ನೀಡಲು ಮುಂದಾದಾಗ ಇದಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿದ ಷೇರುದಾರರು, ಅಧ್ಯಕ್ಷ ನಾಗಶೆಟ್ಟಿ ಅವರೇ ನಮ್ಮ ಪ್ರಶ್ನೆಗಳಿಗೆ ಉತ್ತರ ನೀಡಬೇಕು ಎಂದು ಒತ್ತಾಯಿಸಿದರು. ಇದರಿಂದ ಸಭೆಯಲ್ಲಿ ಕೆಲಕಾಲ ಗೊಂದಲ ಉಂಟಾಯಿತು.


ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸರ್ಕಾರದಿಂದ ಸಿಗುವ ಮಾರ್ಜಿನ್ ಹಣದ ಬಗ್ಗೆ ಯಾರಿಗೂ ಮಾಹಿತಿ ಇಲ್ಲ. ಇದರಿಂದ ಈ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದರು.


ಇದುವರಗೆ ಸದಸ್ಯರಿಗೆ ಷೇರು ಪ್ರಮಾಣ ಪತ್ರ ಯಾಕೆ ನೀಡಿಲ್ಲ, ಷೇರುದಾರರ ಅಮಾನತು ಮೊತ್ತ 2.27 ಲಕ್ಷ ರೂ.ಕಳೆದ 10 ವರ್ಷಗಳಿಂದಲೂ ಆಡಿಟ್ ವರದಿಯಲ್ಲಿ ಹಾಗೆಯೇ ಮುಂದುವರಿದಿದೆ. ವಾರ್ಷಿಕ ಸಭೆಯ ಬಗ್ಗೆ ಷೇರುದಾರರಿಗೆ ಆಹ್ವಾನ ತಲುಪಿಸುತ್ತಿಲ್ಲ. ಬ್ಯಾಂಕಿಗೆ ಬರುವ ಷೇರುದಾರರ ಬಳಿ ಸಿಬ್ಬಂದಿ ಅಗೌರವದಿಂದ ನಡೆದುಕೊಳ್ಳುತ್ತಾರೆ. ಸಹಕಾರ ಸಂಘಕ್ಕೆ ಆದಾಯ ಮೂಲ ಹೆಚ್ಚಿಸಲು ಬ್ಯಾಂಕಿನ ಮುಂಭಾಗದ ಜಾಗದಲ್ಲಿ ವಾಣಿಜ್ಯ ಮಳಿಗೆ ನಿರ್ಮಿಸಿ ಎಂದು ಕಳೆದ ವಾರ್ಷಿಕ ಸಭೆಯಲ್ಲಿ ತೀರ್ಮಾನವಾಗಿದೆ. ಆದರೂ ಆಡಳಿತ ಮಂಡಳಿ ನಿರ್ಲಕ್ಷ್ಯ ವಹಿಸಿದೆ. ವಾರ್ಷಿಕ ಮಹಾಸಭೆ ಷೇರುದಾರರ ಅಭಿಪ್ರಾಯಕ್ಕೆ ಮಾತ್ರ ಸಿಮೀತವಾಗಿದೆ ಎಂದು ಆಡಳಿತ ಮಂಡಳಿಯ ವಿರುದ್ಧ ಸದಸ್ಯರಾದ ಹಿರೇಮರಳಿ ಯೋಗೇಶ್, ಕೃಷ್ಣೇಗೌಡ, ಮಹದೇವು, ದೇವರಾಜು, ಶ್ಯಾದನಹಳ್ಳಿ ಜಯರಾಮು, ಕೆನ್ನಾಳು ಪುಟ್ಟೇಗೌಡ, ಪಟೇಲ್ ರಮೇಶ್ ಕಿಡಿಕಾರಿದರು.


ಸಭೆಯಲ್ಲಿ ಅಧ್ಯಕ್ಷ ನಾಗಶೆಟ್ಟಿ, ಉಪಾಧ್ಯಕ್ಷ ಚನ್ನಯ್ಯ, ನಿರ್ದೇಶಕರಾದ ಸಿ.ಪ್ರಕಾಶ್, ರತ್ನಮ್ಮ, ಡಿ.ಎನ್. ಸೋಮಶೇಖರ್, ಎನ್.ಮುರಳಿ, ಗೌರಮ್ಮ, ಶಿವಣ್ಣ, ಎಚ್.ಎನ್.ದಯಾನಂದ, ಕೆ.ಎಂ.ಗುರುರಾಜ್, ನರೇಂದ್ರಬಾಬು, ನಾಗೇಗೌಡ, ಚಂದ್ರಶೇಖರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net