ಬೇಡಿಕೆಯುಳ್ಳ ವೃತ್ತಿಪರ ಕೋರ್ಸ್‌ಗಳ ಆರಂಭ

ಫೋಟೋ ಶೀರ್ಷಿಕೆ 27 ಸಿಆರ್_ಪಿ-2ಎ
ಚನ್ನರಾಯಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಭೇಟಿ ನೀಡಿ ಪರಿಶೀಲಿಸಿದರು. ಸಿ.ಎನ್.ಬಾಲಕೃಷ್ಣ, ಮಂಜುಳಾ, ಬಿ.ಎಸ್.ಪೂರ್ಣಿಮಾ, ಮೆಡಿಕಲ್ ವೆಂಕಟೇಶ್ ಇದ್ದರು.
Published on

ಚನ್ನರಾಯಪಟ್ಟಣ: ಗ್ರಾಮೀಣ ಭಾಗದ ಬಡ ಮಕ್ಕಳ ಅನುಕೂಲಕ್ಕಾಗಿ ರಾಜ್ಯಾದ್ಯಂತ ಸರ್ಕಾರಿ ಕಾಲೇಜುಗಳಲ್ಲಿ ಹೊಸದಾಗಿ ಬೇಡಿಕೆಯುಳ್ಳ ವೃತ್ತಿಪರ ಕೋರ್ಸ್‌ಗಳನ್ನು ಆರಂಭ ಮಾಡಲಾಗಿದ್ದು, ಇದರಿಂದ 21 ಸಾವಿರ ಮಕ್ಕಳಿಗೆ ಲಾಭವಾಗಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು.

ಅರಸೀಕೆರೆ ತಾಲೂಕಿನಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಶಂಕುಸ್ಥಾಪನೆ ನೆರವೇರಿಸಲು ಬುಧವಾರ ಆಗಮಿಸಿದ್ದ ಅವರು, ಮಾರ್ಗ ಮಧ್ಯೆ ತಾಲೂಕಿನ ಹಿರೀಸಾವೆ ಹೋಬಳಿಯ ಮೇಟಿಕೆರೆ ರಸ್ತೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಚನ್ನರಾಯಪಟ್ಟಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪರಿಶೀಲನೆ ನಡೆಸಿ ಮಾತನಾಡಿದರು.

ಹೊಸದಾಗಿ ಆರಂಭ ಮಾಡಲಾಗಿರುವ ಕೋರ್ಸ್‌ಗಳಲ್ಲಿ ಬಿಸಿಎ ಬಯೋಟೆಕ್ನಾಲಜಿ ಸೇರಿದಂತೆ ಕಲಾ ಮತ್ತು ವಾಣಿಜ್ಯ ವಿಭಾಗದಲ್ಲಿ ವಿದ್ಯಾರ್ಥಿಗಳಿಗೆ ಸಕಾಲದಲ್ಲಿ ಉದ್ಯೋಗ ಸಿಗುವ ಹೊಸ ಹೊಸ ಕೋರ್ಸ್‌ಗಳನ್ನು ಆರಂಭ ಮಾಡಲಾಗಿದೆ. ಇದರಿಂದಾಗಿ ಜಿಲ್ಲೆಯ 450 ಮಕ್ಕಳಿಗೆ ಅನುಕೂಲವಾಗುತ್ತದೆ ಎಂದರು.

ಇಲ್ಲಿನ ಸರ್ಕಾರಿ ಕಾಲೇಜಿಗೆ ಬಿಸಿಎ ಕೋರ್ಸ್ ಮಂಜೂರಾತಿ ಆಗದಿರುವುದು ಆಶ್ಚರ್ಯಕರ. ಮುಂದಿನ ಶೈಕ್ಷಣಿಕ ವರ್ಷದಿಂದ ಬಿಸಿಎ ಕೋರ್ಸ್ ಆರಂಭಿಸಲಾಗುವುದು. ಶಾಸಕ ಬಾಲಕೃಷ್ಣ ಎಂ.ಕಾಂ ಸ್ನಾತಕೋತ್ತರ ಪದವಿ ಆರಂಭಿಸುವಂತೆ ಮನವಿ ಮಾಡಿದ್ದು, ಈ ನಿಟ್ಟಿನಲ್ಲಿ ಶೀಘ್ರದಲ್ಲೇ ಕಾಲೇಜಿನ ಮೂಲ ಸೌಲಭ್ಯಗಳ ಪರಿಶೀಲನೆಗಾಗಿ ಪರಿಣಿತರ ತಂಡವು ಆಗಮಿಸಿ ವರದಿ ಕೊಟ್ಟ ನಂತರ ಎಂ.ಕಾಂ ಕೋರ್ಸ್ ಆರಂಭಿಸಲಾಗುವುದು ಎಂದರು.

ತಾಲೂಕಿನಲ್ಲಿ ಪಾಲಿಟೆಕ್ನಿಕ್ ಮತ್ತು ಇಂಜಿನಿಯರಿಂಗ್ ಕಾಲೇಜುಗಳನ್ನು ತೆರೆಯುವಂತೆ ಬೇಡಿಕೆ ಬಂದಿದೆ. ಜಿಲ್ಲೆಯಲ್ಲಿ ಸರ್ಕಾರಿ, ಖಾಸಗಿ ಸೇರಿ 5 ಇಂಜಿನಿಯರಿಂಗ್ ಕಾಲೇಜುಗಳಿದ್ದು, ಅದರಲ್ಲೂ 3 ಸರ್ಕಾರಿ ಕಾಲೇಜುಗಳಿವೆ. ಈ ನಿಟ್ಟಿನಲ್ಲಿ ಚನ್ನರಾಯಪಟ್ಟಣಕ್ಕೆ ಮತ್ತೊಂದು ಇಂಜಿನಿಯರಿಂಗ್ ಕಾಲೇಜು ನೀಡುವುದು ತುಸು ಕಷ್ಟವಾದರೂ ಪರಿಶೀಲನೆ ಮಾಡುವುದಾಗಿ ತಿಳಿಸಿದರು.

ಉಪನ್ಯಾಸಕರ ಕೊರತೆ: ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ಇಲ್ಲಿನ ಪದವಿ ಕಾಲೇಜಿನಲ್ಲಿ 1200ಕ್ಕೂ ಹೆಚ್ಚು ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಎರಡು ಬಾರಿ ನ್ಯಾಕ್ ಮಾನ್ಯತೆ ಪಡೆದಿದೆ. ಉತ್ತಮ ಪರಿಸರದಲ್ಲಿ ಸುಸಜ್ಜಿತ ಕಟ್ಟಡದೊಂದಿಗೆ ಉತ್ತಮ ಪಾಠ ಪ್ರವಚನದೊಂದಿಗೆ ಸಾಗುತ್ತಿರುವ ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆಯಿದೆ. ಪಿಸಿಎಂಗೆ ಅತಿಥಿ ಉಪನ್ಯಾಸಕರನ್ನು ಆಶ್ರಯಿಸಬೇಕಾಗಿದೆ. ಇಲ್ಲಿದ್ದ ಲೈಬ್ರರಿಯನ್ ಹಾಸನಕ್ಕೆ ವರ್ಗಾವಣೆಗೊಂಡಿದ್ದು, ಸದ್ಯ ಖಾಲಿ ಇರುವ ಹುದ್ದೆಗೆ ವಾರದಲ್ಲಿ ಮೂರು ದಿನ ಅವರನ್ನೇ ಇಲ್ಲಿಗೆ ನಿಯೋಜನೆ ಮಾಡಬೇಕು ಎಂದು ಮನವಿ ಮಾಡಿದರು.

1242 ಹುದ್ದೆಗಳ ಭರ್ತಿ: ರಾಜ್ಯದಲ್ಲಿ ಉಪನ್ಯಾಸಕರ ಕೊರತೆಯ ಕುರಿತಾಗಿ ಹೇಳಿದ ಸಚಿವರು, ಈಗಾಗಲೇ ಸಹ ಪ್ರಾಧ್ಯಾಪಕರ ನೇಮಕಾತಿ ವಿಚಾರದಲ್ಲಿ ಕಲ್ಯಾಣ ಕರ್ನಾಟಕದ ಭಾಗಕ್ಕೆ ಮೀಸಲಾತಿ ಸರಿಯಾಗಿ ನಿಗದಿಯಾಗಿಲ್ಲವೆಂದು ಕೋರ್ಟ್‌ನಲ್ಲಿದ್ದ ಕೇಸ್ ಕಳೆದ ವಾರ ಇತ್ಯರ್ಥವಾಗಿದ್ದು, ಶೀಘ್ರ 1242 ಹುದ್ದೆಗಳನ್ನು ಸರ್ಕಾರದ ನಿಯಮಾನುಸಾರ ತುಂಬಲಾಗುವುದು ಎಂದರು.

ಕಾಲೇಜಿನ ಪ್ರಾಂಶುಪಾಲೆ ಮಂಜುಳಾ, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ ಪೂರ್ಣಿಮಾ, ಉಪನ್ಯಾಸಕರಾದ ಮುನಿರಾಜು, ಪ್ರಕಾಶ್ ಕಾಲೇಜು ಅಭಿವೃದ್ಧಿ ಮಂಡಳಿ ಸದಸ್ಯ ವೆಂಕಟೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net