

ದೇವದುರ್ಗ: ತಾಲೂಕಿನ ಇಂಗಳದಾಳ ಗ್ರಾಮದ ಆರಾಧ್ಯ ದೈವ ಶ್ರೀಸಾಲಿ ದುರ್ಗಮ್ಮದೇವಿ ಜಾತ್ರೆ ಮಂಗಳವಾರ ಅದ್ದೂರಿಯಾಗಿ ಜರುಗಿತು. ಜಾತ್ರೆ ನಿಮಿತ್ತ ದೇವಸ್ಥಾನದಲ್ಲಿ ಅರ್ಚಕ ಮಲ್ಲಯ್ಯಸ್ವಾಮಿ ನೇತೃತ್ವದಲ್ಲಿ ಬೆಳಗ್ಗೆ 7ಕ್ಕೆ ವಿಶೇಷ ಪೂಜೆ, ಶ್ರೀದೇವಿ ಮೂರ್ತಿಗೆ ವಿಶೇಷ ಹೂವಿನ ಅಲಂಕಾರ, ಮಹಾಮಂಗಳಾರತಿ ಜರುಗಿದವು.
ಭಕ್ತರಿಂದ ದೀರ್ಘದಂಡ ನಮಸ್ಕಾರ ಸೇವೆ, ವಿಶೇಷ ಎಡೆ ಸಮರ್ಪಣೆ ನಡೆಯಿತು. ಶ್ರೀದೇವಿ ಪಲ್ಲಕ್ಕಿ ಮೆರವಣಿಗೆ ವಿವಿಧ ಕಲಾ ಮೇಳದೊಂದಿಗೆ ಜರುಗಿತು. ಸಂಜೆ 5.30ಕ್ಕೆ ಸಾವಿರಾರು ಭಕ್ತರ ಮಧ್ಯೆ ಶ್ರೀದೇವಿಯ ಉಚ್ಚಾಯ ಮಹೋತ್ಸವ ಅದ್ದೂರಿಯಾಗಿ ಜರುಗಿತು. ಭಕ್ತರು ಮಂಡಾಳು, ಹೂವು, ಉತ್ತುತ್ತಿ ಅರ್ಪಿಸಿ ಭಕ್ತಿಭಾವ ಮೆರೆದರು. ಅರ್ಚಕರಾದ ಮಲ್ಲಯ್ಯ ಪೂಜಾರಿ, ಪ್ರಭಾಕರ ಸ್ವಾಮಿ, ಪ್ರಭಣ್ಣಗೌಡ ಮಾಲಿಪಾಟೀಲ್, ಮಹಾದೇವಪ್ಪಗೌಡ ಪೊಪಾ, ಬೂದಯ್ಯಸ್ವಾಮಿ, ಬಸವಲಿಂಗಪ್ಪ ಇತರರಿದ್ದರು.