More

    ಕ್ರಯೋಜನಿಕ್ ಇಂಜಿನ್ ಪರೀಕ್ಷೆ ಯಶಸ್ವಿ; ಇಸ್ರೋ ಮಹತ್ವದ ಮೈಲಿಗಲು

    ನವದೆಹಲಿ: ಗಗನಯಾನ ಮಿಷನ್​ಗೆ ಅಗತ್ಯವಾದ ಮಾನವಾಂಕದ (ಹ್ಯೂಮನ್-ರೇಟೆಡ್) ಎಲ್​ವಿಎಂ3 ಉಡಾವಣಾ ವಾಹನದ ನಿರ್ಣಾಯಕ ಕ್ರಯೋಜನಿಕ್ ಹಂತದ ಪರೀಕ್ಷೆಯನ್ನು ಇಸ್ರೋ ಇತ್ತೀಚೆಗೆ ಯಶಸ್ವಿಯಾಗಿ ನಡೆಸಿದೆ. ಗ್ರೌಂಡ್ ಕ್ವಾಲಿಫಿಕೇಶನ್ ಟೆಸ್ಟ್​ನ ಅಂತಿಮ ಸುತ್ತನ್ನು ಪೂರ್ಣಗೊಳಿಸಿರುವುದು ಭಾರತದ ಬಾಹ್ಯಾಕಾಶ ಅನ್ವೇಷಣಾ ಸಾಹಸಗಳಲ್ಲಿ ಇನ್ನೊಂದು ದೊಡ್ಡ ಮುನ್ನೆಗೆತವಾಗಿದೆ. ಸಿಇ20 ಕ್ರಯೋಜನಿಕ್ ಇಂಜಿನ್ ಪರೀಕ್ಷೆಯ ಅಂತಿಮ ಸುತ್ತು ಯಶಸ್ವಿಯಾಗು ವುದರೊಂದಿಗೆ ಇಸ್ರೋ ಇನ್ನೊಂದು ಮೈಲಿಗಲ್ಲನ್ನು ತಲುಪಿದೆ. ಸಮಗ್ರ ಗ್ರೌಂಡ್ ಕ್ವಾಲಿಫಿಕೇಶನ್ ಪರೀಕ್ಷೆಗೂ ಮುನ್ನ ಹಲವು ಇತರ ಕಠಿಣ ಪರೀಕ್ಷೆಗಳನ್ನೂ ನಡೆಸಲಾಗಿತ್ತು. ಮಿಶ್ರಣ ಅನುಪಾತ, ಒತ್ತಡ (ಥ್ರಸ್ಟ್) ಮತ್ತು ಪ್ರೊಪೆಲಂಟ್ ಟ್ಯಾಂಕ್ ಒತ್ತಡಗಳಿಗೆ ವಿಶೇಷ ಗಮನ ನೀಡಲಾಗಿತ್ತು. ಇಂಜಿನ್​ನ ವಿಶ್ವಾಸಾರ್ಹತೆ ಮತ್ತು ಸುರಕ್ಷತೆಯನ್ನು ಖಾತರಿಪಡಿಸಲು ಇದು ಅಗತ್ಯವಾಗಿತ್ತು.

    ಮಾನವರಹಿತ ಮಿಷನ್ ಪರೀಕ್ಷೆ: ಪ್ರಥಮ ಮಾನವರಹಿತ ಗಗನಯಾನ (ಜಿ1) ಮಿಷನ್​ಗೆಂದು ನಿಯೋಜಿತವಾಗಿರುವ ಫ್ಲೈಟ್ ಇಂಜಿನ್​ನ ಅಂಗೀಕಾರ ಪರೀಕ್ಷೆಗಳನ್ನು ಕೂಡ ಇಸ್ರೋ ಈಗಾಗಲೇ ಪೂರ್ಣಗೊಳಿಸಿದೆ. ಈ ವರ್ಷದ ದ್ವಿತೀಯ ತ್ರೖೆಮಾಸಿಕದಲ್ಲಿ ಜಿ1 ಮಿಷನ್ ನಡೆಸಲು ತಾತ್ಕಾಲಿಕವಾಗಿ ನಿರ್ಧರಿಸಲಾಗಿದೆ. ಈ ಇಂಜಿನ್ ಹ್ಯೂಮನ್-ರೇಟೆಡ್ ಎಲ್​ವಿಎಂ3 ವಾಹನದ ಮೇಲಿನ ಹಂತದ ಶಕ್ತಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ.

    ಗಗನಯಾನಕ್ಕೆ ಅಗತ್ಯ: ಭಾರತದ ಗಗನಯಾನ ಕಾರ್ಯಕ್ರಮಕ್ಕೆ ಅಗತ್ಯವಾದ ಸಿಇ20 ಇಂಜಿನ್​ನ ಎಲ್ಲ ಪರೀಕ್ಷೆಗಳನ್ನು ಸಂಪೂರ್ಣಗೊಳಿಸಲಾಗಿದೆ. ಇದು ಮಾನವರ ಬಾಹ್ಯಾಕಾಶ ಮಿಷನ್​ಗೆ ಅಗತ್ಯವಾದ ಉನ್ನತ ಕಾರ್ಯಕ್ಷಮತೆ ಮತ್ತು ವಿಶ್ವಾಸಾರ್ಹ ಮಾನದಂಡಗಳಿಗೆ ಇಸ್ರೋದ ಬದ್ಧತೆಯನ್ನು ತೋರಿಸುತ್ತದೆ.

    8,810 ಸೆಕೆಂಡ್: ನಾಲ್ಕು ಇಂಜಿನ್​ಗಳು ಒಟ್ಟು 8,810 ಸೆಕೆಂಡ್ ಅವಧಿಯ ಪರೀಕ್ಷೆಗೆ ಒಳಪಟ್ಟವು. ಇದು ಕನಿಷ್ಠ ಮಾನವಾಂಕ ಅರ್ಹತಾ ಮಾನದಂಡದ ಅಗತ್ಯವಾದ 6,350 ಸೆಕೆಂಡ್​ಗಿಂತ ಜಾಸ್ತಿಯಾಗಿದೆ ಎಂದು ಸಂಸ್ಥೆ ಹೇಳಿದೆ.

    ಅನುಕರಣೆ ಕ್ರಮ: ಹಾರಾಟ ಪರಿಸ್ಥಿತಿಗಳ ಅನುಕರಣೆ ಮಾಡುವ ಉದ್ದೇಶದಿಂದ ನಿರ್ವಾತದಲ್ಲಿ ಹೊತ್ತಿಸುವ (ವ್ಯಾಕ್ಯೂಮ್ ಇಗ್ನಿಷನ್) ಪರೀಕ್ಷೆಗಳ ಏಳನೇ ಹಾಗೂ ಅಂತಿವ ಪರೀಕ್ಷೆಯನ್ನು ಮಹೇಂದ್ರಗಿರಿಯಲ್ಲಿರುವ ಇಸ್ರೋ ಪ್ರೊಪಲ್ಶನ್ ಸಂಕೀರ್ಣದಲ್ಲಿ ನಡೆಸಲಾಗಿದೆ ಎಂದು ಇಸ್ರೋ ವಿವರಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts