ಪದವಿ ಕಾಲೇಜುಗಳಿಗೆ ಮೂಲಸೌಕರ್ಯ

FotoJet
Published on

ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿಕೆ | ಕಟ್ಟಡ ಕಾಮಗಾರಿಗೆ ಭೂಮಿಪೂಜೆ

 ಗೌರಿಬಿದನೂರು: ತಾವು ಉನ್ನತ ಶಿಕ್ಷಣ ಸಚಿವರಾದ ಬಳಿಕ ಜಿಲ್ಲೆಯ ಪ್ರಥಮ ದರ್ಜೆ ಕಾಲೇಜುಗಳಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ.ಸುಧಾಕರ್ ಹೇಳಿದರು.

ನಗರದ ಸರ್ಕಾರಿ ಪದವಿ ಕಾಲೇಜಿನಲ್ಲಿ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ವತಿಯಿಂದ 2023-24ನೇ ಎಸಿಪಿ ಹಾಗೂ ಟಿಎಸ್‌ಪಿ ಯೋಜನೆಯಡಿ ಕಟ್ಟಡ ಕಾಮಗಾರಿಗಳಿಗೆ ಮಂಗಳವಾರ ಶಂಕುಸ್ಥಾಪನೆ ಹಾಗೂ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹೊಸ ಕಟ್ಟಡಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಯಾವುದೇ ಹೊಸ ಕೋರ್ಸ್‌ಗಳಿಗೆ ಅನುಮತಿ ನೀಡಿರಲಿಲ್ಲ. ಆದರೆ ಈಗಿನ ಸರ್ಕಾರ ಪದವಿ ಕಾಲೇಜಿನಲ್ಲಿ ಬಿಸಿಎ, ಬಿಬಿಎ ಕೋರ್ಸ್‌ಗಳಿಗೆ ಅನುಮತಿ ನೀಡಿದೆ. ಅಗತ್ಯವಿರುವ ಕಡೆ ಅತಿಥಿ ಉಪನ್ಯಾಸಕರನ್ನು ಸಹ ನೇಮಕ ಮಾಡಿಕೊಳ್ಳಲಾಗುತ್ತಿದೆ. ಇದರಿಂದ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ಪಡೆಯಲು ಅನುಕೂಲವಾಗಿದೆ ಎಂದರು.

ಪ್ರಾಂಶುಪಾಲ ಮಂಜುನಾಥ್ ಮಾತನಾಡಿ, 2002ರಲ್ಲಿ ಪ್ರಾರಂಭವಾದ ಕಾಲೇಜಿನಲ್ಲಿ ಈಗ 1437 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಹಂತ ಹಂತವಾಗಿ ಎಲ್ಲ ಕೋರ್ಸ್ ಆರಂಭಿಸಲಾಗುತ್ತಿದೆ ಎಂದರು.

ತಹಸೀಲ್ದಾರ್ ಮಹೇಶ್ ಎಸ್. ಪತ್ರಿ, ತಾಪಂ ಇಒ ಜಿ.ಕೆ.ಹೊನ್ನಯ್ಯ, ನಗರಸಭೆ ಅಧ್ಯಕ್ಷ ಲಕ್ಷ್ಮೀನಾರಾಯಣಪ್ಪ, ಪೌರಾಯುಕ್ತೆ ಡಿ.ಎನ್. ಗೀತಾ ಮುಂತಾದವರು ಹಾಜರಿದ್ದರು.

ಖಾಸಗಿ ಸಂಸ್ಥೆಗಳ ಪ್ರವೇಶಾತಿ ಕುಸಿತ

ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಲಕ್ಷಾಂತರ ರೂ. ತೆತ್ತು ಶಿಕ್ಷಣ ಪಡೆಯಲು ಪರದಾಡುವುದನ್ನು ತಪ್ಪಿಸಿದ್ದೇವೆ. ಸದರಿ ಕಾಲೇಜಿನಲ್ಲಿ1473 ವಿದ್ಯಾರ್ಥಿಗಳಿದ್ದು, 800 ಹೆಣ್ಣು ಮಕ್ಕಳಿದ್ದಾರೆ. ಚಿಂತಾಮಣಿಯಲ್ಲೂ 2000ಕ್ಕೂ ಹೆಚ್ಚು ಹೆಣ್ಣು ಮಕ್ಕಳು ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಗೌರಿಬಿದನೂರಿನಲ್ಲಿ ಡಾ.ಎಚ್.ನರಸಿಂಹಯ್ಯ ಅವರು ಸ್ಥಾಪಿಸಿದ ನ್ಯಾಷನಲ್ ಕಾಲೇಜು ಮತ್ತು ಆಚಾರ್ಯ ಪದವಿ ಕಾಲೇಜುಗಳು ಮಾತ್ರ ಇದ್ದವು. ಈಗ ಸರ್ಕಾರಿ ಪದವಿ ಕಾಲೇಜು ಪ್ರಾರಂಭ ಮಾಡುತ್ತಿದ್ದು ವಿದ್ಯಾರ್ಥಿಗಳ ಪ್ರವೇಶಾತಿ ಹೆಚ್ಚಾಗುತ್ತಿದೆ. ಖಾಸಗಿ ಕಾಲೇಜುಗಳಲ್ಲಿ ದಾಖಲಾತಿ ಕುಸಿಯುತ್ತಿದೆ ಎಂದಿ ಸಚಿವ ಎಂ.ಸಿ. ಸುಧಾಕರ್ ಹೇಳಿದರು.

ಕೌಶಲಾಧಾರಿತ ಕೋರ್ಸ್‌ಗಳ ಆರಂಭ

ಉನ್ನತ ಶಿಕ್ಷಣ ಇಲಾಖೆಯಲ್ಲಿ ಹಿಂದಿನಿಂದಲೂ ದೂರದೃಷ್ಟಿಯೊಂದಿಗೆ ಕಾರ್ಯ ನಿರ್ವಹಿಸಲಿಲ್ಲ. ಈಗ ಕಂಪ್ಯೂಟರ್ ಲ್ಯಾಬ್ ಸೇರಿ ಆಧುನಿಕ ಸೌಲಭ್ಯಗಳನ್ನು ಒಳಗೊಂಡಂತೆ ಕ್ರಿಯಾಯೋಜನೆ ಸಿದ್ಧಪಡಿಸಲಾಗುತ್ತಿದೆ. ಮೂರು ಮತ್ತು ನಾಲ್ಕನೇ ಅಂತಸ್ತುಗಳಿಗೆ ಲ್‌ಟಿ ಸಹ ಅಳವಡಿಸಲಾಗುತ್ತಿದೆ ಎಂದ ಸಚಿವರು, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕಟಡ ನಿರ್ಮಾಣಕ್ಕೆ 2023-24ನೇ ಸಾಲಿನಲ್ಲಿ 8 ಕೋಟಿ ರೂ., 2024-25ನೇ ಸಾಲಿನಲ್ಲಿ 2 ಕೋಟಿ ರೂ. ಅನುದಾನ ನೀಡಲಾಗಿದೆ. ತಾಲೂಕು ಕೈಗಾರಿಕೆಗಳ ಸ್ಥಾಪನೆಯಲ್ಲಿ ಜಿಲ್ಲೆಯಲ್ಲೇ ಪ್ರಥಮ ಸ್ಥಾನದಲ್ಲಿದೆ. ಆದ್ದರಿಂದ ಪದವಿ ತರಗತಿಗಳಲ್ಲಿ ಕೌಶಲಾಧಾರಿತ ತರಬೇತಿ ಕೋರ್ಸ್‌ಗಳನ್ನು ಆರಂಭಿಸಲಾಗುತ್ತಿದೆ ಎಂದು ಡಾ.ಎಂ.ಸಿ. ಸುಧಾಕರ್ ಹೇಳಿದರು.

ಹೆಣ್ಣು ಮಕ್ಕಳಿಗೆ ಶಿಕ್ಷಣ ಪ್ರಗತಿಯ ಸಂಕೇತ

ಶಾಸಕ ಕೆ.ಎಚ್. ಪುಟ್ಟಸ್ವಾಮಿಗೌಡ ಮಾತನಾಡಿ, ತಾಲೂಕಿನ ಶೈಕ್ಷಣಿಕ ಪ್ರಗತಿಯನ್ನು ಗಮನದಲ್ಲಿರಿಸಿಕೊಂಡು ಸರ್ಕಾರ ಕಟ್ಟಡಗಳ ನಿರ್ಮಾಣಕ್ಕೆ 10 ಕೋಟಿ ರೂ. ಅನುದಾನ ಒದಗಿಸಿದೆ. ನಗರಗೆರೆ ಮತ್ತು ತೊಂಡೆಬಾವಿಗಳಲ್ಲಿ ಕೂಡ ಪ್ರಥಮ ದರ್ಜೆ ಕಾಲೇಜು ಪ್ರಾರಂಭಿಸಲು ಅನುಮತಿ ನೀಡಬೇಕು. 50 ವರ್ಷಗಳ ಹಿಂದೆ ಶೇ.10 ಹೆಣ್ಣು ಮಕ್ಕಳು ಶಾಲೆಗಳಿಗೆ ತೆರಳುತ್ತಿದ್ದರು. ಆದರೆ ಈಗ ಈ ಸಂಖ್ಯೆ ಶೇ.100ರಷ್ಟಾಗಿದೆ. ಇದು ಪ್ರಗತಿಯ ಸಂಕೇತ. ಯಾವುದೇ ದೇಶ ಪ್ರಗತಿಯಾಗಬೇಕಾದರೆ ಸಮಾನತೆ ಇರಬೇಕು ಗಂಡು-ಹೆಣ್ಣು ಎಂಬ ಭೇದಭಾವ ಇರಬಾರದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net