

ಎಂಎಸ್.ಸಿದ್ದಲಿಂಗೇಶ್ವರ ಮಾಗಡಿ
ತಾಲೂಕಿನ ಹೋಬಳಿ ಕೇಂದ್ರ ತಿಪ್ಪಸಂದ್ರ ಮೂಲಸೌಕರ್ಯಗಳಿಂದ ವಂಚಿತವಾಗಿದೆ. ತಿಪ್ಪಸಂದ್ರದಲ್ಲಿ ರೈತರು ಬಹುತೇಕ ತೆಂಗು, ಅಡಕೆ ಬೆಳೆಗಳಿಗೆ ಪ್ರಸಿದ್ಧಿ ಹೊಂದಿದ್ದು ಪ್ರತಿ ಕುಟುಂಬವೂ ಕಾಯಕದಲ್ಲಿ ಬದುಕು ನಡೆಸುತ್ತಿವೆ. ತಿಪ್ಪಸಂದ್ರ ಗ್ರಾಮ 3000ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದ್ದು, 1300ಕ್ಕೂ ಹೆಚ್ಚು ಮತದಾರರಿದ್ದಾರೆ.
ಗ್ರಾಮದಲ್ಲಿ ಅಳವಡಿಸಿರುವ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು 2 ವರ್ಷ ಕಳೆದರೂ ದುರಸ್ತಿಯಾಗಿಲ್ಲ. ಕುಡಿಯುವ ನೀರಿಗಾಗಿ ನೇರಳೆಕೆರೆ, ಬಿಸ್ಕೂರು, ತಿಪ್ಪಸಂದ್ರ ಹ್ಯಾಂಡ್‌ಪೋಸ್ಟ್‌ಗೆ ಹೋಗಿ ಬರಬೇಕಿದೆ. ಕೆಲವರಿಗೆ ಇದು ಸಾಧ್ಯವಾಗದೆ ಪಂಚಾಯಿತಿಯಿಂದ ಸರಬರಾಜಾಗುವ ನೀರನ್ನೆ ಆಶ್ರಯಿಸಿದ್ದಾರೆ. ಕೆಲ ಬಲಾಢ್ಯರು ಶುದ್ಧ ಕುಡಿಯುವ ನೀರಿನ ಘಟಕದ ಮುಖ್ಯ ಪೈಪ್ ಲೈನ್‌ನಿಂದ ಮನೆಗಳಿಗೆ ಸಂಪರ್ಕ ಕಲ್ಪಿಸಿಕೊಂಡು ಶುದ್ಧ ಮಾಡಿಕೊಂಡು ಬಳಸುತ್ತಿದ್ದಾರೆ. ಇದರಿಂದ ಸಾರ್ವಜನಿಕರ ಬಗ್ಗೆ ಕಾಳಜಿ ಇಲ್ಲದಂತಾಗಿದೆ ಎನ್ನುವುದು ಗ್ರಾಮಸ್ಥರ ಆರೋಪವಾಗಿದೆ.
ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರು ನಿರ್ಮಿಸಿರುವ ಉದ್ಯಾನದಲ್ಲಿ ಪಾರ್ಥೇನಿಯಂ, ಕುರುಚಲು ಗಿಡಗಳು ಆಳೆತ್ತರಕ್ಕೆ ಬೆಳೆದಿದ್ದು, ವಿಷ ಜಂತುಗಳ ವಾಸಸ್ಥಾನವಾಗಿದೆ. ಆಸ್ಪತ್ರೆಯ ತ್ಯಾಜ್ಯ ಸುರಿಯುವ ಹಾಗೂ ಸಂಜೆಯಾದರೆ ಕುಡುಕರ ತಾಣವಾಗಿದೆ. ಇದರಿಂದ ಮಾಲಿನ್ಯ ಉಂಟಾಗುತ್ತಿದೆ. ಲಕ್ಷಾಂತರ ರೂ. ವೆಚ್ಚ ಮಾಡಿದರೂ ಉದ್ಯಾನವನ ಪೂರ್ಣಗೊಂಡಿಲ್ಲ. ಸರ್ಕಾರದ ನರೇಗಾ ಹಣ ಯಾರ ಪಾಲಾಗಿದೆ ಎನ್ನುವುದು ನಿಗೂಢವಾಗಿದೆ.
ತಿಪ್ಪಸಂದ್ರದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರು ಕಾಂಪೌಂಡ್ ಕುಸಿದುಬಿದ್ದು 12 ವರ್ಷ ಕಳೆದರೂ ದುರಸ್ತಿಗೆ ಕ್ರಮ ಕೈಗೊಂಡಿಲ್ಲ. ಸಮರ್ಪಕ ವೈದ್ಯರಿಲ್ಲ. ಇರುವ ವೈದ್ಯರನ್ನು ಸೋಲೂರು ಆಸ್ಪತ್ರೆಗೆ ನಿಯೋಜಿಸಲಾಗಿದೆ. ಇದರಿಂದ ಈ ಭಾಗದ ಜನರು ಅನಾರೋಗ್ಯಕ್ಕೆ ತುತ್ತಾದರೆ ಕುದೂರು, ಕುಣಿಗಲ್, ಮಾಗಡಿ ಅಥವಾ ನೆಲಮಂಗಲಕ್ಕೆ ಹೋಗ ಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಲಕ್ಷಾಂತರ ರೂ. ವೆಚ್ಚದಲ್ಲಿ ಆಸ್ಪತ್ರೆ ಸಿಬ್ಬಂದಿಗೆ ನಿರ್ಮಿಸಿರುವ ವಸತಿ ಗೃಹದಲ್ಲಿ ಯಾವ ಸಿಬ್ಬಂದಿಯೂ ವಾಸಿಸುತ್ತಿಲ್ಲ.
ಸ್ವಚ್ಛ ಭಾರತ್ ಮಿಷನ್ ಯೋಜನೆ ಜಾರಿಯಾಗಿ 5 ವರ್ಷ ಕಳೆದರೂ ಗ್ರಾಮದಲ್ಲಿ ಎಲ್ಲೆಂದರಲ್ಲಿ ಕಸದ ರಾಶಿ ತುಂಬಿ ತುಳುಕುತ್ತಿದೆ. ಪಂಚಾಯಿತಿಯಿಂದ ಸಮರ್ಪಕವಾಗಿ ಕಸ ವಿಲೇವಾರಿ ಕೆಲಸ ಆಗುತ್ತಿಲ್ಲ. ಕಸ ಸಂಗ್ರಹಕ್ಕೆ ವಾಹನವಿದ್ದರೂ, ಕಸ ವಿಲೇವಾರಿಗೆ ಸೂಕ್ತ ಜಾಗ ಗುರುತಿಸದೆ, ಚಾಲಕರನ್ನು ನೇಮಿಸದ ಕಾರಣ ವಾಹನ ಪಂಚಾಯಿತಿ ಬಳಿ ನಿಂತಿದೆ.
ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಕೃಷಿ ಇಲಾಖೆ, ಆಸ್ಪತ್ರೆ, ನಾಡ ಕಚೇರಿಗಳ ಬಳಿ ಚರಂಡಿಗಳಲ್ಲಿ ಹೂಳು ತುಂಬಿ ಮುಚ್ಚಿಹೋಗಿದೆ. ಮಳೆ ಬಂದರೆ ರಸ್ತೆಯಲ್ಲಿ ನೀರು ನಿಲ್ಲುತ್ತಿದೆ. ಪ್ರಾಥಮಿಕ ಶಾಲೆಯ ಬಿಸಿಯೂಟ ತಯಾರಿಕೆಯಿಂದ ಬರುವ ಅನ್ನ, ಬಸಿದ ಗಂಜಿ ಮತ್ತು ತರಕಾರಿ ತ್ಯಾಜ್ಯಗಳು ಚರಂಡಿ ಸೇರಿ ರಸ್ತೆಗೂ ಹರಡಿವೆ.
ಗ್ರಾಮದ ಕೋಟೆ ಬೀದಿ, ಸರ್ಕಾರಿ ಶಾಲೆಗಳ ಬಳಿ ಹೈಮಾಸ್ಟ್ ಲೈಟ್ ಇಲ್ಲದೆ ಗ್ರಾಮಸ್ಥರು ಪರಿತಪಿಸುವಂತಾಗಿದೆ. ಇಷ್ಟೆಲ್ಲಾ ಸಮಸ್ಯೆಯಿದ್ದರೂ ನಾಗರಿಕರಿಗೆ ಅನುಕೂಲ ಕಲ್ಪಿಸಲು ಅಧಿಕಾರಿಗಳು ಮುಂದಾಗದೆ ಇರುವುದು ಚರ್ಚೆಗೆ ಗ್ರಾಸವಾಗಿದೆ.
ತಿಪ್ಪಸಂದ್ರ ಬಳಿ ರೈಲು ನಿಲ್ದಾಣವಿದ್ದು, ಪ್ರತಿದಿನ 13 ರೈಲುಗಳು ಸಂಚರಿಸುತ್ತಿವೆ. 2 ರೈಲುಗಳಿಗೆ ಈ ನಿಲ್ದಾಣದಲ್ಲಿ ನಿಲುಗಡೆ ಇದೆ. ಕೆಂಪಾಪುರ ಗ್ರಾಮದ ಕೆಂಪೇಗೌಡರ ವೀರಸಮಾಧಿ, ಸಂಸ್ಕೃತ ವಿಶ್ವವಿದ್ಯಾನಿಲಯ ತಲೆ ಎತ್ತುತ್ತಿವೆ. ಇದರಿಂದಾಗಿ ಪ್ರಮುಖ ರೈಲುಗಳಿಗೂ ಈ ನಿಲ್ದಾಣದಲ್ಲಿ ನಿಲುಗಡೆಗೆ ಸೂಚಿಸಬೇಕು ಎಂಬ ಕೂಗು ವ್ಯಾಪಕವಾಗಿದೆ.
ಹಂತ ಹಂತವಾಗಿ ಸ್ವಚ್ಛತಾ ಕಾರ್ಯ ಹಮ್ಮಿಕೊಳ್ಳಲಾಗುತ್ತಿದೆ. ಶುದ್ಧ ಕುಡಿಯುವ ನೀರಿನ ಘಟಕದ ನಿರ್ವಹಣೆ ಒಪ್ಪಂದ ಮುಗಿದಿದ್ದು, ಇದರಿಂದ ಸಮಸ್ಯೆಯಾಗಿದೆ. ಶಾಸಕರ ಗಮನಕ್ಕೆ ತಂದಿದ್ದು, ಶೀಘ್ರದಲ್ಲೇ ಬೇರೆ ಕಡೆ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಲಾಗುವುದು.ವೀಣಾ, ಅಧ್ಯಕ್ಷೆ, ತಿಪ್ಪಸಂದ್ರ ಗ್ರಾಪಂ
ಗ್ರಾಮದಲ್ಲಿ ಸ್ವಚ್ಛತೆ ಕಾಪಾಡುವುದು, ಕುಡಿಯುವ ನೀರು ಒದಗಿಸುವುದು ಗ್ರಾಪಂ ಕರ್ತವ್ಯವಾಗಿದೆ. ಇತರ ಗ್ರಾಮಗಳಲ್ಲಿ ಜಲಜೀವನ್ ಮಿಷನ್ ಯೋಜನೆ ಕಾಮಗಾರಿ ಪೂರ್ಣಗೊಂಡರೂ ನಮ್ಮ ಗ್ರಾಮದಲ್ಲಿ ಆರಂಭವೇ ಆಗಿಲ್ಲ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಜನರಿಗೆ ಅನುಕೂಲ ಕಲ್ಪಿಸಬೇಕು.
ವೇದಾ ವೆಂಕಟೇಶ್, ತಿಪ್ಪಸಂದ್ರ.
ತಿಪ್ಪಸಂದ್ರ ಗ್ರಾಪಂ ಆಡಳಿತ ವೈಖರಿ ಮರೆತಿರುವ ಬಗ್ಗೆ ಮತ್ತು ಗ್ರಾಮದ ನೈರ್ಮಲ್ಯ, ಸ್ವಚ್ಚತೆ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದು ಉಪವಾಸ ಸತ್ಯಾಗ್ರಹ ಮಾಡಿದ್ದೇನೆ.ಆದರೆ, ಜಿಲ್ಲಾಡಳಿತ, ತಾಲೂಕು ಆಡಳಿತ ಕ್ರಮ ವಹಿಸದೆ ಇರುವುದು ಬೇಸರವಾಗಿದೆ.ಹನುಮಂತೇಗೌಡ, ಸಾಮಾಜಿಕ ಕಾರ್ಯಕರ್ತ