

ಬೆಂಗಳೂರು: ರಾಜ್ಯದಲ್ಲಿ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಪ್ರಾರಂಭವಾದಾಗಿನಿಂದ ಒಂದಲ್ಲ ಒಂದು ವಿವಾದ ಹುಟ್ಟಿಕೊಳ್ಳುತ್ತಲೇ ಇದೆ. ಈ ಸಮೀಕ್ಷೆಯನ್ನು ವಿಪಕ್ಷಗಳು ತಿರಸ್ಕರಿಸಿದ್ದು, ಬಹಿಷ್ಕಾರಿಸಲು ಕರೆ ನೀಡಿದ್ದರೆ, ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮಾನತೆಯನ್ನು ಸಾಧಿಸಿ ಸರ್ವರಿಗೂ ಸಮಪಾಲು, ಸಮಬಾಳು ನೀಡುವ ಮುಖ್ಯ ಉದ್ದೇಶದೊಂದಿಗೆ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯನ್ನು ನಡೆಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಹೀಗೆ ಪರ-ವಿರೋಧ ಚರ್ಚೆಗಳ ನಡೆವೆಯೇ ಸಮೀಕ್ಷೆ ಸಾಗುತ್ತಿದೆ. ಇದೆಲ್ಲದರ ನಡುವೆ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಹಾಗೂ ಇನ್ಫೋಸಿಸ್ ( Infosys ) ಮುಖ್ಯಸ್ಥೆ ಹಾಗೂ ರಾಜ್ಯಸಭೆ ಸದಸ್ಯೆ ಸುಧಾಮೂರ್ತಿ ಅವರು ಸಮೀಕ್ಷೆಯಲ್ಲಿ ( Caste census ) ಭಾಗವಹಿಸಲು ನಿರಾಕರಿಸಿದ್ದಾರೆ. ಅಲ್ಲದೆ, ಅದಕ್ಕೆ ಕಾರಣವನ್ನು ಸಹ ನೀಡಿದ್ದಾರೆ.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ನಡೆಸುತ್ತಿದೆ. ಸಾವಿರಾರು ಶಿಕ್ಷಕರು ಹಾಗೂ ಇತರೆ ಸರ್ಕಾರಿ ಇಲಾಖೆಯ ಉದ್ಯೋಗಿಗಳು ರಾಜ್ಯದ ಪ್ರತಿಯೊಬ್ಬರ ಮನೆ-ಮನೆಗೆ ತೆರೆಳಿ ಕುಟುಂಬದ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ. ಅನೇಕ ಗಣ್ಯ ವ್ಯಕ್ತಿಗಳು ಕೂಡ ಈ ಸಮೀಕ್ಷೆಯಲ್ಲಿ ಭಾಗವಹಿಸುತ್ತಿದ್ದಾರೆ. ಆದರೆ, ನಾರಾಯಣ ಮೂರ್ತಿ ದಂಪತಿ ಸಮೀಕ್ಷೆಯಲ್ಲಿ ಭಾಗವಹಿಸದೇ ಇರುವುದು ಕುತೂಹಲಕ್ಕೆ ಹಾಗೂ ಚರ್ಚೆಗೆ ಎಡೆಮಾಡಿಕೊಟ್ಟಿದೆ.
ಸಮೀಕ್ಷೆಯಲ್ಲಿ ನಮ್ಮ ಕುಟುಂಬ ಭಾಗವಹಿಸುವುದಿಲ್ಲ ಎಂದು ನಾರಾಯಣ ಮೂರ್ತಿ ದಂಪತಿ ಸ್ವಯಂ ದೃಢೀಕರಣ ಪತ್ರವನ್ನು ಸಹ ಬರೆದುಕೊಟ್ಟಿದ್ದಾರೆ. ಅದರಲ್ಲಿ ಕಾರಣವನ್ನು ಸಹ ವಿವರಿಸಲಾಗಿದೆ. ಅದರ ಪ್ರಕಾರ, ನಾವು ಹಿಂದುಳಿದ ಯಾವ ಜಾತಿಗೂ ಸೇರುವವರಲ್ಲ ಆದ್ದರಿಂದ ಈ ಸಮೀಕ್ಷೆ ಸರ್ಕಾರಕ್ಕೆ ಏನೂ ಉಪಯೋಗವಿಲ್ಲ. ಆದ್ದರಿಂದ ನಾವು ಇದರಲ್ಲಿ ಭಾಗವಹಿಸುವುದಿಲ್ಲ ಎಂದು ಬರೆದು ನಾರಯಣ ಮೂರ್ತಿ ದಂಪತಿ ಸಹಿ ಹಾಕಿದ್ದಾರೆ. ಅಕ್ಟೋಬರ್ 10 ರಂದು ಬೆಂಗಳೂರಿನ ಜಯನಗರ 4ನೇ ಟಿ ಬ್ಲಾಕ್‌ನಲ್ಲಿರುವ ಅವರ ನಿವಾಸದಲ್ಲಿ ಸಮೀಕ್ಷೆಗೆ ಆಗಮಿಸಿದ ಗಣತಿದಾರರಿಗೆ ನಾರಾಯಣ ಮೂರ್ತಿ ದಂಪತಿ ನೇರವಾಗಿ ತಿಳಿಸಿದ್ದಾರೆ.
ಕರ್ನಾಟಕ ಹೈಕೋರ್ಟ್ 2025, ಸೆಪ್ಟೆಂಬರ್ 25ರಂದು ರಾಜ್ಯ ಸರ್ಕಾರದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ ಸಂಬಂಧಿತ)ಯ ಬಗ್ಗೆ ಮಧ್ಯಂತರ ಆದೇಶ ಹೊರಡಿಸಿದೆ. ಈ ಸಮೀಕ್ಷೆಯಲ್ಲಿ ಭಾಗವಹಿಸುವುದು ಸಂಪೂರ್ಣವಾಗಿ ಸ್ವಯಂಪ್ರೇರಿತವಾಗಿದ್ದು, ಗಣತಿದಾರರು ಯಾವುದೇ ವ್ಯಕ್ತಿಯಿಂದ ಮಾಹಿತಿಯನ್ನು ಕಡ್ಡಾಯವಾಗಿ ಸಂಗ್ರಹಿಸಲು ಒತ್ತಾಯ ಮಾಡುವಂತಹ ಅಧಿಕಾರವನ್ನು ಹೊಂದಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ಸಮೀಕ್ಷೆಯನ್ನು ರದ್ದು ಮಾಡುವಂತೆ ಕೋರಿದ ಅರ್ಜಿಯನ್ನು ತಳ್ಳಿ ಹಾಕಿದರೂ ಸಂಗ್ರಹಿಸಿದ ಮಾಹಿತಿಯ ಗೌಪ್ಯತೆಯನ್ನು ಕಾಪಾಡುವಂತೆ ಮತ್ತು ದುರ್ಬಳಕೆಯನ್ನು ತಡೆಯುವಂತೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ನಿರ್ದೇಶ ನೀಡಿದೆ.
ಅಂದಹಾಗೆ, ಈ ಸಮೀಕ್ಷೆಯು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮೂಲಕ ನಡೆಯುತ್ತಿದ್ದು, ರಾಜ್ಯದಲ್ಲಿ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸ್ಥಿತಿಗತಿಯನ್ನು ತಿಳಿಯುವ ಉದ್ದೇಶವನ್ನು ಹೊಂದಿದೆ. ಈ ಸಮೀಕ್ಷೆ 2025, ಸೆಪ್ಟೆಂಬರ್ 22ರಿಂದ ಆರಂಭವಾಗಿದ್ದು, ಧರ್ಮ, ಜಾತಿ, ಆರ್ಥಿಕ ಸ್ಥಿತಿ, ಶೈಕ್ಷಣಿಕ ಅರ್ಹತೆ ಸೇರಿದಂತೆ 65ಕ್ಕೂ ಹೆಚ್ಚು ಪ್ರಶ್ನೆಗಳನ್ನು ಒಳಗೊಂಡ 13 ಪುಟಗಳ ಫಾರ್ಮ್ ಮೂಲಕ ಮಾಹಿತಿ ಸಂಗ್ರಹಿಸಲಾಗುತ್ತದೆ. ಇದು ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಉನ್ನತಿ ಮತ್ತು ಮೀಸಲಾತಿ ನೀತಿಗಳಿಗೆ ಆಧಾರವಾಗುವಂತಹ ಸಮೀಕ್ಷೆಯಾಗಿದೆ. ಸಮೀಕ್ಷೆಯ ಅವಧಿ ಮೂಲತಃ ಸೆಪ್ಟೆಂಬರ್ 30 ರವರೆಗೆ ಇದ್ದರೂ, ಗುರಿ ತಲುಪದೆ ಇರುವುದರಿಂದ ಅಕ್ಟೋಬರ್ 18 ರವರೆಗೆ ವಿಸ್ತರಿಸಲಾಗಿದೆ. ಅಲ್ಲದೆ, ಅ.18 ಸಮೀಪಿಸುತ್ತಿದ್ದು, ಮತ್ತೊಮ್ಮೆ ವಿಸ್ತರಣೆಯಾಗುವ ಸಾಧ್ಯತೆ ಇದೆ. ಬೆಂಗಳೂರು ನಗರದಲ್ಲಿ (ಗ್ರೇಟರ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ) ಈಗಾಗಲೇ 15.42 ಲಕ್ಷ ಮನೆಗಳನ್ನು ಸಮೀಕ್ಷೆ ಮಾಡಲಾಗಿದ್ದು, 10 ದಿನಗಳಲ್ಲಿ 13.12 ಲಕ್ಷ ಮನೆಗಳು ಆವರಿಸಲ್ಪಟ್ಟಿವೆ. ಆದರೆ ನಗರದಲ್ಲಿ ಕೇವಲ 30% ಕುಟುಂಬಗಳ ಸಮೀಕ್ಷೆ ಪೂರ್ಣಗೊಂಡಿದ್ದು, ತಾಂತ್ರಿಕ ಸಮಸ್ಯೆಗಳು ಮತ್ತು ನಿರಾಕರಣೆಗಳಿಂದ ವಿಳಂಬ ಉಂಟಾಗಿದೆ ಎಂದು ವರದಿಯಾಗಿದೆ.