

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಕೆಎಸ್ಸಾರ್ಟಿಸಿ ಜನಸ್ಪಂದನ ಹಾಗೂ ಸಾರ್ವಜನಿಕ ಅಹವಾಲು ಸ್ವೀಕಾರ ಮತ್ತು ಮಾಹಿತಿ ಕಾರ್ಯಾಗಾರ ಬೆಳ್ತಂಗಡಿಯ ಶ್ರೀ ಧರ್ಮಸ್ಥಳ ಮಂಜುನಾಥ ಕಲಾಭವನದಲ್ಲಿ ಸೋಮವಾರ ನಡೆಯಿತು.
ಶಾಸಕ ಹರೀಶ್ ಪೂಂಜ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ಸಮಸ್ಯೆ ಉಂಟಾಗದಂತೆ ವ್ಯವಸ್ಥೆ ಸರಿಪಡಿಸಿ ಬೆಳಗ್ಗೆ 8ರಿಂದ 9.30ರವರೆಗೆ ಅಗತ್ಯ ಸ್ಥಳಗಳಲ್ಲಿ ಬಸ್‌ಗಳನ್ನು ಹೆಚ್ಚಿಸಿ ಹಾಗೂ ಬಂದಿರುವ ಅಹವಾಲುಗಳ ಕುರಿತು ಒಂದು ವಾರದೊಳಗೆ ವರದಿ ನೀಡಿ, ಉಜಿರೆಯ ಟಿಸಿ ಪಾಯಿಂಟ್‌ನ ಸಮಯವನ್ನು ವಿಸ್ತರಿಸಿ ಎಂದು ಕೆಎಸ್ಸಾರ್ಟಿಸಿ ಅಧಿಕಾರಿಗಳಿಗೆ ಸೂಚಿಸಿದರು.
ಮಂಗಳೂರು ಡಿಪೋದ ಡಿಸಿ ರಾಜೇಶ್ ಶೆಟ್ಟಿ ಮಾತನಾಡಿ, ಜನಸ್ಪಂದನೆ ಕಾರ್ಯಕ್ರಮದ ಮೂಲಕ ತಾಲೂಕಿನ ಮೂಲೆ ಮೂಲೆಗಳ ಸಮಸ್ಯೆ ಗೊತ್ತಾಗಿದೆ. ಮುಂದಿನ ದಿನಗಳಲ್ಲಿ ಮಂಗಳೂರು-ಧರ್ಮಸ್ಥಳ ರೂಟ್‌ನಲ್ಲಿ ಎಲೆಕ್ಟ್ರಿಕ್ ಮತ್ತು ರಾಜಹಂಸ ಬಸ್‌ಗಳ ಓಡಾಟ ನಡೆಸುವ ಕುರಿತು ಚಿಂತನೆ ನಡೆದಿದೆ ಎಂದರು. ಪುತ್ತೂರು ಡಿಪೋ ಡಿಸಿ ಅಮಲಿಂಗಯ್ಯ ಪಿ.ಹಾಸು ಪೂಜಾರಿ ಮಾತನಾಡಿ, ಈಗಿರುವ ವ್ಯವಸ್ಥೆಯಲ್ಲಿ ಇರುವ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಒದಗಿಸಲಾಗುವುದು ಎಂದರು.
ಶಿಶಿಲ, ಪಟ್ರಮೆ, ದೇವಗಿರಿ, ವೇಣೂರು ಕಲ್ಮಂಜ ಕಡೆ ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹ ವ್ಯಕ್ತವಾಯಿತು. ಬಸ್‌ಗಳು ನಿಗದಿತ ಸಮಯಕ್ಕೆ ಸಂಚರಿಸಬೇಕು. ಅರಸಿನಮಕ್ಕಿಗೆ ಬೆಳಗ್ಗೆ 10 ಗಂಟೆ ಬಳಿಕ ಬಸ್ ಬೇಕು, ಬಂದಾರು- ಉಪ್ಪಿನಂಗಡಿ ರೂಟ್‌ನಲ್ಲಿ ಕೆಎಸ್ಸಾರ್ಟಿಸಿ ಬಸ್‌ಗಳು ಓಡಾಡಬೇಕು, ಧರ್ಮಸ್ಥಳ ಬಸ್ ನಿಲ್ದಾಣದಲ್ಲಿ ಸ್ವಚ್ಛತೆ ಅಗತ್ಯವಾಗಿದೆ. ಬಸ್ ನಿಲ್ದಾಣಗಳ ಶೌಚಾಗೃಹ ನಿರ್ವಹಣೆ ಅತಿ ಅಗತ್ಯ, ಹೊಗೆಯುಗುಳುವ ಬಸ್‌ಗಳನ್ನು ಸ್ಥಗಿತಗೊಳಿಸಬೇಕು, ಸೌತಡ್ಕಕ್ಕೆ ಗಂಟೆಗೊಂದರಂತೆ ಬಸ್ ಓಡಾಟ ನಡೆಸಬೇಕು, ಚಾಲನೆ ವೇಳೆ ಚಾಲಕರು ಮೊಬೈಲ್ ಬಳಸುವುದನ್ನು ನಿಲ್ಲಿಸಬೇಕು ಇತ್ಯಾದಿ ವಿಚಾರಗಳು ಕುರಿತು ಯದುಪತಿ ಗೌಡ, ಸುಧೀರ್ ಕುಮಾರ್, ಶ್ರೀನಿವಾಸರಾವ್, ಮೀನಾಕ್ಷಿ, ಭಾರತೀ ಶೆಟ್ಟಿ ರತ್ನಾಕರ ಬುಣ್ಣನ್, ಆಶಾ ಸಲ್ದಾನ, ಧರಿತ್ರಿ ಭಿಡೆ, ವಸಂತಿ, ಸಂತೋಷ್ ಮತ್ತಿತರರು ಹವಾಲು ನೀಡಿದರು.
ಪುತ್ತೂರು ಡಿಟಿಒ ಮುರಳೀಧರ ಆಚಾರ್ಯ, ಮಂಗಳೂರು ಡಿಟಿಒ ಕಮಲ್ ಕುಮಾರ್ ಉಪಸ್ಥಿತರಿದ್ದರು. ರಾಜೇಶ್ ಪೆಂರ್ಬುಡ ನಿರೂಪಿಸಿದರು.
ಅತಿ ಹಿಂದುಳಿದ ಪ್ರದೇಶವಾದ ಮಲವಂತಿಗೆ ಗ್ರಾಮದ ದಿಡುಪೆಯ ಕಜಕ್ಕೆಯಲ್ಲಿ ಶಾಲೆಯಿದ್ದು, 150ಕ್ಕಿಂತ ಅಧಿಕ ವಿದ್ಯಾರ್ಥಿಗಳಿದ್ದಾರೆ. ಇಲ್ಲಿವರೆಗೆ ದಿಡುಪೆ ಬಸ್ಸನ್ನು ವಿಸ್ತರಿಸಬೇಕು. ಇಲ್ಲಿಗೆ ಬಸ್ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳು ಒಂದೂವರೆ ಕಿ.ಮೀ. ನಡೆಯಬೇಕಾಗಿದೆ ಎಂದು ದಿಡುಪೆಯ ತೀಕ್ಷಿತ್ ಮನವಿ ನೀಡಿದರು. ಸೋಮಂತಡ್ಕದಲ್ಲಿ ಎಕ್ಸ್‌ಪ್ರೆಸ್ ಬಸ್‌ಗಳಿಗೆ ನಿಲುಗಡೆ ನೀಡಿದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎಂದು ರಾಘವೇಂದ್ರ ಪಟವರ್ಧನ್ ಸಭೆಯ ಗಮನಕ್ಕೆ ತಂದರು.