ಆ್ಯಪ್‌ಗಳಿಂದ ಸರ್ಕಾರಿ ಸೌಲಭ್ಯಗಳ ಮಾಹಿತಿ

ಆ್ಯಪ್‌ಗಳಿಂದ ಸರ್ಕಾರಿ ಸೌಲಭ್ಯಗಳ ಮಾಹಿತಿ
Published on

ಸೋಮವಾರಪೇಟೆ: ಪಂಚಾಯತ್‌ರಾಜ್ ಇಲಾಖೆ ಮತ್ತು ಶಿಕ್ಷಣ ಫೌಂಡೇಶನ್ ವತಿಯಿಂದ ನೇರುಗಳಲೆ ಗ್ರಾಮ ಪಂಚಾಯಿತಿ ಡಿಜಿಟಲ್ ಗ್ರಂಥಾಲಯ ಮತ್ತು ಅರಿವು ಕೇಂದ್ರದ ಮೂಲಕ ಸ್ವಸಹಾಯ ಸಂಘದ ಸದಸ್ಯರಿಗೆ ಮೊಬೈಲ್ ಬಳಕೆಯ ಬಗ್ಗೆ ಮಾಹಿತಿ ಕಾರ್ಯಾಗಾರ ಮಂಗಳವಾರ ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ತಣ್ಣೀರುಹಳ್ಳ ಗ್ರಾಮದ ಗೃಹಿಣಿ ಸ್ಪೂರ್ತಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಗ್ರಾಮೀಣ ಜನರು ಮೊಬೈಲ್ ಫೋನ್ ಬಳಕೆಯನ್ನು ಕಲಿಯಲೇಬೇಕಾದ ಅನಿವಾರ್ಯಯತೆ ಇದೆ. ಎಲ್ಲದಕ್ಕೂ ಗ್ರಾಮ ಪಂಚಾಯಿತಿಗೆ ಬಂದು ಮಾಹಿತಿ ಪಡೆಯಲು ಕಷ್ಟವಾಗುತ್ತದೆ. ಸರ್ಕಾರದ ಅನೇಕ ಆ್ಯಪ್‌ಗಳಿಂದ ಸರ್ಕಾರದ ಸೌಲಭ್ಯಗಳ ಬಗ್ಗೆ ಮಾಹಿತಿ ಸಿಗುತ್ತದೆ. ಹಣದ ವ್ಯವಹಾರವನ್ನು ಮೊಬೈಲ್‌ನಲ್ಲೇ ಮಾಡಿದರೆ, ಸಮಯ, ಹಣ ಉಳಿಯುತ್ತದೆ. ಆದರೆ ಮೊಬೈಲ್ ಬಳಕೆಯ ಜ್ಞಾನ ಹೊಂದಿದರೆ ಮಾತ್ರ ಅದರ ಉಪಯೋಗವಿದೆ. ಮಹಿಳೆಯರು, ಪುರುಷರು ಮನಸ್ಸು ಮಾಡಿದರೆ ಎಲ್ಲವನ್ನು ಕಲಿಯಬಹುದು ಎಂದು ಹೇಳಿದರು.

ಶಿಕ್ಷಣ ಫೌಂಡೇಶನ್‌ನ ಜಿಲ್ಲಾ ಸಂಯೋಜಕ ರಕ್ಷಿತ್, ದಿಲೀಪ್ ಮಾಹಿತಿ ನೀಡಿದರು. ಗ್ರಾಮೀಣ ಭಾಗದ ಮಹಿಳೆಯರು ಗ್ರಂಥಾಲಯಕ್ಕೆ ಬರಬೇಕು. ವಿದ್ಯಾರ್ಥಿಗಳು ಸಮಯ ಸಿಕ್ಕಾಗ ಹೆಚ್ಚಿನ ಸಮಯವನ್ನು ಡಿಜಿಟಲ್ ಗ್ರಂಥಾಲಯದಲ್ಲಿ ಕುಳಿತು ಓದಬೇಕು. ಈ ಬಗ್ಗೆ ಮಹಿಳೆಯರು ಅರಿವು ಮೂಡಿಸಬೇಕು ಎಂದು ರಕ್ಷಿತ್ ಹೇಳಿದರು. 22 ಸದಸ್ಯರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಸಂಜೀವಿನಿ ಒಕ್ಕೂಟದ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net