ರೈತರಿಗೆ ಆಲೂಗಡ್ಡೆಯ ಹೊಸ ತಳಿಯ ಮಾಹಿತಿ

11ark-1
Published on

ಅರಕಲಗೂಡು: ಆಲೂಗಡ್ಡೆಯ ಹೊಸ ತಳಿಯಾದ ಕರಣ್ ರೋಗಮುಕ್ತವಾಗಿ ಬೆಳವಣಿಗೆ ಹೊಂದಲಿದೆ ಎಂದು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಹೇಳಿದರು.

ತಾಲೂಕಿನ ಬೈಚನಹಳ್ಳಿ ಗ್ರಾಮದ ಆಲೂಗೆಡ್ಡೆ ಬೆಳೆಯಲ್ಲಿ ನೂತನ ತಳಿಯಾದ ಕರಣ್ ತಳಿಯ ಕುರಿತು ರೈತ ದಯಾನಂದ್ ಅವರ ಜಮೀನಿನಲ್ಲಿ ಬುಧವಾರ ತೋಟಗಾರಿಕೆ ಇಲಾಖೆ ವತಿಯಿಂದ ಆಯೋಜಿಸಿದ್ದ ಬೆಳೆ ಕ್ಷೇತ್ರೋತ್ಸವದಲ್ಲಿ ಅವರು ಮಾತನಾಡಿದರು.

ಜಿಲ್ಲೆಯ ರೈತರು ಕಳೆದ 50 ವರ್ಷಗಳಿಂದಲೂ ಕೇವಲ ಜ್ಯೋತಿ ತಳಿ ಒಂದನ್ನೇ ಬೆಳೆಯುತ್ತಿದ್ದು, ಇದರ ಸಾಮರ್ಥ್ಯ ಹಿಂದಿನಂತೆ ಇಲ್ಲದೆ ಕ್ಷೀಣಿಸಿರುತ್ತದೆ. ಹೀಗಾಗಿ ರೈತರು ಹೊಸ ತಳಿಯಾದ ಕರಣ್ ತಳಿಯನ್ನು ಕುಡಿಕಾಂಡ ಸಸಿಗಳ ಮೂಲಕ ರೈತರೇ ಉತ್ಪಾದಿಸಿ ಮುಂದಿನ ಬೆಳೆಗೆ ಸ್ವಾವಲಂಬಿಯಾಗಿ ಬೀಜೋತ್ಪಾದನೆ ನಡೆಸಿದರೆ ಆರ್ಥಿಕವಾಗಿ ಸದೃಢರಾಗಬಹುದು ಎಂದು ಸಲಹೆ ನೀಡಿದರು.

ಬೆಳೆಗಾರ ದಯಾನಂದ್ ಮಾತನಾಡಿ, ಸಸಿಗಳ ಮೂಲಕ ಆಲೂಗಡ್ಡೆ ಬೆಳೆಯುವ ವಿಷಯ ಈ ಮುಂಚೆ ತಿಳಿದಿರಲಿಲ್ಲ. ಆದರೆ, ತೋಟಗಾರಿಕೆ ಇಲಾಖೆ ಈ ನಿಟ್ಟಿನಲ್ಲಿ ರೈತರಿಗೆ ತರಬೇತಿ ನೀಡಿ ಸಹಾಯಧನದೊಂದಿಗೆ ಸಸಿಗಳ ಮೂಲಕ ಬೀಜೋತ್ಪಾದನೆಗೆ ಉತ್ತೇಜನ ಸಿಕ್ಕಿತು. ಇದರಿಂದ ಕುಫ್ರಿ ಕರಣ್ ತಳಿಯನ್ನು ಕಳೆದ ಬಾರಿ ಸಸಿಗಳ ಮೂಲಕ ಬೆಳೆದು, ಉತ್ಪಾದಿಸಿದ ಬೀಜಗಳನ್ನು ಶೀತಲಗೃಹದಲ್ಲಿ ಇಟ್ಟು, ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ಅದೇ ಬೀಜಗಳನ್ನು ನಾಟಿ ಮಾಡಿದ್ದು ಉತ್ತಮವಾದ ಬೆಳೆ ಬಂದಿದೆ. ಕರಣ್ ತಳಿಗೆ ಬಹಳಷ್ಟು ಕಡಿಮೆ ಔಷಧಗಳನ್ನು ಬಳಸಿ ಉತ್ತಮ ಬೆಳೆಯನ್ನು ಬೆಳೆಯಬಹುದಾಗಿದೆ. ಎಲ್ಲ ರೈತರು ಇದೇ ತಳಿಯನ್ನು ಬೆಳೆಯುವುದು ಸೂಕ್ತ ಎಂದು ತಿಳಿಸಿದರು.

ಸಿರಿ ಆಲೂಗಡ್ಡೆ ಸಂಸ್ಥೆಯ ವ್ಯವಸ್ಥಾಪಕ ರವೀಂದ್ರ ರೆಡ್ಡಿ, ಉಪ ವ್ಯವಸ್ಥಾಪಕ ಸುಹಾಸ್, ರೈತ ಸಂಘದ ವಾಜಿದ್, ಗ್ರಾಪಂ ಸದಸ್ಯ ಕಳ್ಳಿಮುದ್ದನಹಳ್ಳಿ ಕುಮಾರ್, ಹೆತ್ತಗೌಡನಹಳ್ಳಿ ಶ್ರೀನಿವಾಸ್, ಮರವಳಲು ರಘು, ಹುಲ್ಲಂಗಾಲ ಸುಬ್ಬೇಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net