ಆರೋಗ್ಯ ಕೇಂದ್ರಗಳ ಮಾಹಿತಿ ಸಂಗ್ರಹ

pch
Published on

ಗುರುಪುರ: ಗುರುಪುರ ಹೋಬಳಿ ಸರ್ಕಾರಿ ಆಸ್ಪತ್ರೆಗಳ ಉಳಿಸಿ ಹೋರಾಟ ಸಮಿತಿಯ ಪ್ರಮುಖರ ನಿಯೋಗವೊಂದು ಆ. 31ರಂದು ಹೋಬಳಿ ವ್ಯಾಪ್ತಿಯ ಕುಪ್ಪೆಪದವು, ಕೊಂಪದವು, ಗಂಜಿಮಠ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ (ಪಿಎಚ್‌ಸಿ) ಭೇಟಿ ನೀಡಿ ಆರೋಗ್ಯ ಕೇಂದ್ರಗಳ ಸ್ಥಿತಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿತು.

ಮಂಜೂರಾದ ವೈದ್ಯಕೀಯ ಸಿಬ್ಬಂದಿ ನೇಮಕಾತಿ ನಡೆಯದಿರುವುದು, ಒಬ್ಬ ಸಿಬ್ಬಂದಿಗೆ ಒಂದಕ್ಕಿಂತ ಹೆಚ್ಚು ಆರೋಗ್ಯ ಕೇಂದ್ರಗಳಲ್ಲಿ ಹೆಚ್ಚುವರಿ ಕರ್ತವ್ಯ, ಸೌಲಭ್ಯ ಮತ್ತು ವೈದ್ಯರ ಕೊರತೆ ಹಾಗೂ ಪ್ರಸಕ್ತ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಮತ್ತು ಸಿಬ್ಬಂದಿ ವರ್ಗ ಒತ್ತಡದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವಾಸ್ತವ ಸಂಗತಿ ಸಮಿತಿ ಗಮನಕ್ಕೆ ಬಂತು. ಹೋಬಳಿ ವಿಸ್ತೀರ್ಣ, ಜನಸಂಖ್ಯೆ ಪ್ರಮಾಣಕ್ಕೆ ಅನುಗುಣವಾಗಿ ಇಲ್ಲಿ ಹೆಚ್ಚುವರಿ ಆರೋಗ್ಯ ಕೇಂದ್ರ ಕಾರ್ಯ ನಿರ್ವಹಿಸುವ ಅಗತ್ಯ ಇದೆ. ಇದರಿಂದಾಗಿ ಕನಿಷ್ಟ 2 ಆರೋಗ್ಯ ಕೇಂದ್ರ 24*7 ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಬೇಕು ಎಂಬುದನ್ನು ಗಮನಿಸಿದ ಸಮಿತಿ, ಈ ನಿಟ್ಟಿನಲ್ಲಿ ವರದಿಯೊಂದಿಗೆ ಬೇಡಿಕೆಯನ್ನು ಸಮಿತಿ ಸಿದ್ಧಪಡಿಸಿ ಆರೋಗ್ಯ ಸಚಿವರಿಗೆ ನೀಡಲು ಹಾಗೂ ಹೋರಾಟ ಮುಂದುವರಿಸಲು ಸಮಿತಿ ನಿರ್ಧರಿಸಿತು.

ನಿಯೋಗದಲ್ಲಿ ಮುನೀರ್ ಕಾಟಿಪಳ್ಳ, ಗುರುಪುರ ಹೋಬಳಿ ಸರ್ಕಾರಿ ಆಸ್ಪತ್ರೆಗಳ ಉಳಿಸಿ ಹೋರಾಟ ಸಮಿತಿ ಪದಾಧಿಕಾರಿಗಳಾದ ಕಾರ್ಮಿಕ ಮುಖಂಡ ಸದಾಶಿವದಾಸ್ ಪತ್ರಕರ್ತ ಬಾವಾ ಪದ್ರೆಂಗಿ, ವಸಂತಿ ಕುಪ್ಪೆಪದವು, ಮೊಹಮ್ಮದ್ ಶೆರೀಫ್, ಎಂ. ರಫೀಕ್, ನೋಣಯ್ಯ ಗೌಡ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net