ಸಾಂಕ್ರಾಮಿಕ ರೋಗಗಳ ಅರಿವು ಅಗತ್ಯ : ಬಟ್ನಾಡಿ ಅಣ್ಣಪ್ಪ ಶೆಟ್ಟಿ

maleria
ಕಾಲ್ತೋಡು ಗ್ರಾಪಂ ವತಿಯಿಂದ ಅಧ್ಯಕ್ಷ ಬಟ್ನಾಡಿ ಅಣ್ಣಪ್ಪ ಶೆಟ್ಟಿ ನೇತೃತ್ವದಲ್ಲಿ ಸೋಮವಾರ ಮಲೇರಿಯಾ, ಡೆಂಘೆ ಮತ್ತು ಚಿಕನ್ ಗುನ್ಯ ಬರದಂತೆ ತಡಗಟ್ಟುವ ಮಂಜಾಗ್ರತಾ ಕ್ರಮದ ಬಗ್ಗೆ ಕರಪತ್ರ ವಿತರಿಸಯಿತು
Published on

ಬೈಂದೂರು: ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳು ಹೆಚ್ಚಾಗಿ ಕಾಣಿಸಿಕೊಳ್ಳುವ ಸಾಧ್ಯತೆ ಇರುವುದರಿಂದ ಎಲ್ಲೆಡೆ ಅಗತ್ಯ ಎಚ್ಚರಿಕೆ ಕ್ರಮ ತೆಗೆದುಕೊಳ್ಳುವ ಜತೆಗೆ ಸಾರ್ವಜನಿಕವಾಗಿ ಈ ಬಗ್ಗೆ ಅರಿವು ಮೂಡಿಸಬೇಕು ಎಂದು ಕಾಲ್ತೋಡು ಗ್ರಾಪಂ ಅಧ್ಯಕ್ಷ ಬಟ್ನಾಡಿ ಅಣ್ಣಪ್ಪ ಶೆಟ್ಟಿ ಹೇಳಿದರು. ಕಾಲ್ತೋಡು ಗ್ರಾಪಂ ವತಿಯಿಂದ ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಸಭಾಭವನದಲ್ಲಿ ಸೋಮವಾರ ಮಲೇರಿಯಾ, ಡೆಂಘೆ ಮತ್ತು ಚಿಕುನ್‌ಗುನ್ಯ ಬರದಂತೆ ತಡಗಟ್ಟುವ ಮಂಜಾಗ್ರತಾ ಕ್ರಮದ ಬಗ್ಗೆ ಮಾಹಿತಿ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಹಳ್ಳಿ ಪ್ರದೇಶಗಳಲ್ಲಿ ಡೆಂಘೆ, ಮಲೇರಿಯಾ ಪ್ರಕರಣಗಳ ಸಂಖ್ಯೆ ಜಾಸ್ತಿಯಾಗಿ ಕಂಡುಬರುತ್ತಿದ್ದು, ಯಾವುದೇ ಕಾರಣಕ್ಕೂ ಇದನ್ನು ನಿರ್ಲಕ್ಷಿಸುವಂತಿಲ್ಲ. ಜಿಲ್ಲೆಯಲ್ಲಿಯೂ ಕೂಡ ಡೆಂಘೆ ಪ್ರಕರಣ ದಿನೇ ದಿನೆ ಹೆಚ್ಚಾಗುತ್ತಿದ್ದು, ಇದು ಕಳವಳಕಾರಿ ಸಂಗತಿ ಎಂದರು. ಸ್ಥಳೀಯ ಆಯುಷ್ ಚಿಕಿತ್ಸಾಲಯದ ವೈದ್ಯಾಧಿಕಾರಿ ಡಾ.ವೀಣಾ ಕಾರಂತ್, ಸಾಂಕ್ರಾಮಿಕ ಕಾಯಿಲೆ ಬರದಂತೆ ಹಾಗೂ ಅದನ್ನು ತಡೆಗಟ್ಟು ವಿಧಾನದ ಬಗ್ಗೆ ಮಾಹಿತಿ ನೀಡಿದರು. ಆಯುರ್ವೇದ ಚಿಕಿತ್ಸೆ ಹಾಗೂ ಮನೆಮದ್ದಿನ ಕುರಿತು ತಿಳಿಸಿದರು. ಪಿಡಿಒ ದಿವಾಕರ ಶ್ಯಾನುಭಾಗ್, ಕಾರ್ಯದರ್ಶಿ ಆನಂದ ಬಿಲ್ಲವ, ಕಾಲ್ತೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕ ವಿನಾಯಕ ಮೆರ್ಟ, ಪಂಚಾಯಿತಿ ಸದಸ್ಯರು, ಆಶಾ ಕಾರ್ಯಕರ್ತೆಯರು ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.

ರಾಜ್ಯಾದ್ಯಂತ ಡೆಂಘೆ ಹೆಚ್ಚಾಗಿದ್ದು, ಇದನ್ನು ಮನೆಮದ್ದಿಂದಲೂ ಗುಣಪಡಿಸಿಕೊಳ್ಳಬಹುದು. ಜೇನುತುಪ್ಪದೊಂದಿಗೆ ಪಪಾಯಿ ಎಲೆಯ ರಸ ಬೆರೆಸಿ ಸೇವಿಸಿದರೆ ಅದು ಕೆಲಸ ಮಾಡುತ್ತದೆ. 12 ಗಂಟೆಗಳಲ್ಲಿ ಪ್ಲೇಟ್‌ಲೆಟ್‌ಗಳನ್ನು ವೃದ್ಧಿಸುವ ಗುಣ ಈ ಮನೆಮದ್ದಿಗಿದೆ.-ಬಟ್ನಾಡಿ ಅಣ್ಣಪ್ಪ ಶೆಟ್ಟಿ, ಅಧ್ಯಕ್ಷರು ಕಾಲ್ತೋಡು ಗ್ರಾಪಂ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net