ವೈರಾಣು ಸೋಂಕುಗಳ ಪತ್ತೆ ಪರೀಕ್ಷೆಗೆ 1,700 ರೂ. ದರ ನಿಗದಿಪಡಿಸಿ ಆರೋಗ್ಯ ಇಲಾಖೆ ಆದೇಶ

Arogya soudha
Published on

ಬೆಂಗಳೂರು: ವೈರಾಣು ಸೋಂಕುಗಳ ಪತ್ತೆಗೆ ಖಾಸಗಿಯಲ್ಲಿ ನಡೆಸಲಾಗುವ ಇನ್‌ಫ್ಲ್ಯೂಯೆಂಜಾ ಪ್ಯಾನೆಲ್ ಪರೀಕ್ಷೆಗೆ 1,700 ರೂ. ದರ ನಿಗದಿಪಡಿಸಿ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.

ರಾಜ್ಯದ ಖಾಸಗಿ ವೈದ್ಯಕೀಯ ಸಂಸ್ಥೆಗಳು, ಆಸ್ಪತ್ರೆಗಳು ಹಾಗೂ ಪ್ರಯೋಗಾಲಯಗಳು ಕೋವಿಡ್ ಸೇರಿ ಯಾವುದೇ ರೀತಿಯ ವೈರಾಣು ಸೋಂಕು ಪತ್ತೆಗೆ ನಡೆಸುವ ಪರೀಕ್ಷೆಗೆ ಈ ದರ ಅನ್ವಯವಾಗಲಿದೆ.

ರಾಜ್ಯದ ಕೆಲ ಖಾಸಗಿ ವೈದ್ಯಕೀಯ ಸಂಸ್ಥೆಗಳು ಹಾಗೂ ಪ್ರಯೋಗಾಲಯಗಳು ಸಾಮಾನ್ಯ ಜ್ವರಕ್ಕೂ ಗಂಟಲ ದ್ರವದ ಮಾದರಿಗಳನ್ನು ಪಡೆದು,ಇನ್‌ಫ್ಲ್ಯೂಯೆಂಜಾ ಪ್ಯಾನೆಲ್ ಕಿಟ್‌ಗಳನ್ನು ಬಳಸಿ ಪರೀಕ್ಷೆ ನಡೆಸಿರುವುದು ಗಮನಕ್ಕೆ ಬಂದಿದೆ. ಈ ರೀತಿ ಪರೀಕ್ಷೆಗಳಿಗೆ 8 ರಿಂದ 10 ಸಾವಿರದವರೆಗೆ ಹಣ ಪಡೆಯಲಾಗಿದೆ. ಆದ್ದರಿಂದ ಆರೋಗ್ಯ ಇಲಾಖೆ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ, ಪರೀಕ್ಷೆಗೆ ದರ ನಿಗದಿ ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಿದೆ.

ನಿಗದಿಪಡಿಸಲಾದ ದರಕ್ಕಿಂತ ಅಧಿಕ ಹಣ ಪಡೆದಲ್ಲಿ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆ (ಕೆಪಿಎಂಇ) ಅಡಿ ಕ್ರಮ ಕೈಗೊಳ್ಳಲಾಗುವುದು. ಸಾರಿ (ತೀವ್ರ ಉಸಿರಾಟದ ಸಮಸ್ಯೆ), ಐಎಲ್‌ಐ (ಶೀತಜ್ವರ ಮಾದರಿ ಅನಾರೋಗ್ಯ ಸಮಸ್ಯೆ) ಪ್ರಕರಣಗಳನ್ನುಸಮಗ್ರ ಆರೋಗ್ಯ ಮಾಹಿತಿ ವೇದಿಕೆ (ಐಎಚ್‌ಐಪಿ)ಅಡಿ ಕಡ್ಡಾಯವಾಗಿ ವೈದ್ಯಕೀಯ ಸಂಸ್ಥೆಗಳು ದಾಖಲಿಸಬೇಕು ಎಂದು ಸೂಚಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net