

ದೊಡ್ಡಸಿದ್ದು ಹಾದನೂರು ಎಚ್.ಡಿ.ಕೋಟೆ
ಕೇರಳದ ವಯನಾಡು, ಕಲ್ಪೆಟ್ಟ ಜಿಲ್ಲೆ ಹಾಗೂ ತಾಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಬಾರಿ ಮಳೆ ಆಗುತ್ತಿರುವುದರಿಂದ ಕಬಿನಿ ಜಲಾಶಯಕ್ಕೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಜಲಾಶಯದ ಭದ್ರತಾ ದೃಷ್ಟಿಯಿಂದ 40 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗಿದೆ. ಇದರಿಂದ ನದಿ ಪಾತ್ರದ ಜನರಲ್ಲಿ ಪ್ರವಾಹ ಭೀತಿ ಉಂಟಾಗಿದೆ.
ವಯನಾಡ್ ಹಾಗೂ ಕಲ್ಪೆಟ್ಟ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ 60 ಮಿ.ಮೀಟರ್‌ಗೂ ಹೆಚ್ಚು ಮಳೆ ಆಗುತ್ತಿದ್ದು, ರೆಡ್ ಅಲರ್ಟ್ ಇದೆ. ಜತೆಗೆ ಕೇರಳ ಮತ್ತು ಕೊಡಗು ಜಿಲ್ಲೆಯ ಗಡಿ ಭಾಗದ ಪಾಪನಾಶಿನಿ ಹೊಳೆ ಪಾತ್ರದಿಂದ 30 ಸಾವಿರ ಕ್ಯೂಸೆಕ್‌ಗಿಂತ ಹೆಚ್ಚು ನೀರು ಹರಿದುಬರುತ್ತಿದೆ. ಹಾಗಾಗಿ 40 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗಿದೆ. ಜಲಾಶಯ ಭರ್ತಿಗೆ ಕೇವಲ ಅರ್ಧ ಅಡಿ ಬಾಕಿ ಇದೆ.
ಈಗಾಗಲೇ ಜಲಾಶಯದ ಮುಂಭಾಗದ ಸೇತುವೆ ಮುಳುಗಡೆ ಆಗಿ ಬೀಚನಹಳ್ಳಿ- ಬಿದರಹಳ್ಳಿ ಸಂಪರ್ಕ ಕಲ್ಪಿಸುವ ರಸ್ತೆ ಕಡಿತಗೊಂಡು ಇಪ್ಪತ್ತಕ್ಕೂ ಹೆಚ್ಚು ಗ್ರಾಮಗಳು ಸರಗೂರು ಮಾರ್ಗವಾಗಿ ಸಂಚರಿಸಬೇಕಾದ ಪರಿಸ್ಥಿತಿ ಇದೆ.
ಜಲಾಶಯದಿಂದ 40 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಟ್ಟಿರುವುದರಿಂದ ತಾಲೂಕಿನ ಆಗುತ್ತೂರು ಹಾಗೂ ಕೆ.ಬೆಳ್ತೂರು ಸೇತುವೆ ಮುಳುಗಡೆ ಆಗಿದೆ. 45 ಸಾವಿರ ಕ್ಯೂಸೆಕ್ ಬಿಟ್ಟರೆ ಹೊಮ್ಮರಗಳ್ಳಿ ಸೇತುವೆ ಮುಳುಗಡೆ ಆಗಲಿದೆ. ಬಹುತೇಕ ಭಾನುವಾರ ಜಲಾಶಯದಿಂದ 50 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡುವ ಸಾಧ್ಯತೆಯಿದೆ. ಜಲಾಶಯದಿಂದ 50 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಟ್ಟರೆ ನೂರಾರು ಗ್ರಾಮಗಳಿಗೆ ಸಂಪರ್ಕ ರಸ್ತೆ ಕಡಿತಗೊಳ್ಳಲಿದೆ.
2019ರಲ್ಲಿ ಜಲಾಶಯಕ್ಕೆ ಒಂದು ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ ನೀರು ಹರಿದು ಬಂದು ಅಷ್ಟೇ ಪ್ರಮಾಣದ ನೀರನ್ನು ನದಿಗೆ ಬಿಟ್ಟಿದ್ದರಿಂದ ತಾಲೂಕಿನಲ್ಲಿ ಪ್ರವಾಹ ಉಂಟಾಗಿ ತಾಲೂಕಿನ ದೊಡ್ಡ ತುಂಬಸೋಗೆ ಸೇತುವೆ ಮುಳುಗಡೆ ಆಗಿ ಅನೇಕ ಗ್ರಾಮಗಳು ಪ್ರವಾಹಕ್ಕೆ ಸಿಲುಕಿ ಗ್ರಾಮಗಳ ನಡುವೆ ಸಂಪರ್ಕ ಕಡಿತಗೊಂಡಿದ್ದವು. ಬಿದರಹಳ್ಳಿ ವೃತ್ತದ ಗ್ರಾಮದ ಸುಮಾರು ನಲವತ್ತು ಮನೆಗಳು ನೀರಿನಲ್ಲಿ ಮುಳುಗಡೆಯಾಗಿ ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ನಷ್ಟ ಉಂಟಾಗಿತ್ತು.
ಅದೇ ರೀತಿ ಕಬಿನಿ ಹಿನ್ನೀರಿನ ಡಿ.ಬಿ. ಕುಪ್ಪೆ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳು ಹಾಗೂ ಹಾಡಿಗಳು ನೀರಿನಲ್ಲಿ ಮುಳುಗಿದ್ದವು. ಈ ಸಂದರ್ಭದಲ್ಲಿ ಜಿಲ್ಲಾ ಮತ್ತು ತಾಲೂಕು ಆಡಳಿತ ನಿರಾಶ್ರಿತರ ನೆರವಿಗೆ ಬಂದು ಆಶ್ರಯ ಕೇಂದ್ರಗಳನ್ನು ತೆರೆದು ಆಶ್ರಯ ಕಲ್ಪಿಸಿದರು. ಈಗಲೂ ಜನರು ಅದೇ ಆತಂಕದಲ್ಲಿ ಇರುವುದನ್ನು ಕಾಣಬಹುದಾಗಿದೆ.
ಕಬಿನಿ ಜಲಾಶಯಕ್ಕೆ ಇದುವರೆಗೆ ಒಟ್ಟು 60 ಟಿಎಂಸಿ ನೀರು ಹರಿದು ಬಂದಿದ್ದು, 57 ಟಿಎಂಸಿಗೂ ಹೆಚ್ಚು ನೀರನ್ನು ನದಿ ಮೂಲಕ ತಮಿಳುನಾಡಿಗೆ ಹರಿಸಲಾಗಿದೆ. ತಮಿಳುನಾಡು ರಾಜ್ಯಕ್ಕೆ ಒಪ್ಪಂದದಂತೆ ಬಹುತೇಕ ನೀರು ಕಬಿನಿ ಜಲಾಶಯ ಒಂದರಲ್ಲೇ ಬಿಡಲಾಗಿದೆ.