

ರಾಮನಗರ : ಯುವಕನ ಸಮಯ ಪ್ರಜ್ಞೆಯಿಂದ 6 ತಿಂಗಳ ಹಸುಗೂಸಿನ ಪ್ರಾಣ ಉಳಿದ ಘಟನೆ ಬುಧವಾರ ರಾಮನಗರದಲ್ಲಿ ನಡೆದಿದೆ.
ರಾಮನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಪಕ್ಕದ ರಸ್ತೆಯಲ್ಲಿ ದಂಪತಿ ತಮ್ಮ ಕಾರಿನಲ್ಲಿ ಖಾಸಗಿ ಆಸ್ಪತ್ರಗೆ ಬಂದಿದ್ದಾರೆ. ಈ ವೇಳೆ ಆಸ್ಪತ್ರೆ ಸಮೀಪ ರಸ್ತೆ ಪಕ್ಕದಲ್ಲಿ ಕಾರು ನಿಲ್ಲಿಸಿ ಮಗು ಎತ್ತಿಕೊಂಡು ಗಂಡ ಕಾರಿನಿಂದ ಇಳಿದಿದ್ದಾನೆ. ಪಕ್ಕದ ಸೀಟಿನಲ್ಲಿ ಕುಳಿತ ತನ್ನ ಹೆಂಡತಿಗೆ ಕುಳಿತ ಭಾಗದ ಕೆಳಕ್ಕೆ ಇಳಿಯುವಂತೆ ಸೂಚನೆ ನೀಡಿದ್ದಾನೆ.
ಪತ್ನಿ ಡೋರ್ ತೆಗೆದು ಕೆಳಗೆ ಇಳಿಯುವಾಗ ಅಕಸ್ಮಾತ್ ಹ್ಯಾಂಡ್ ಬ್ರೇಕ್ ಮೇಲೆ ಕೈ ಇಟ್ಟಿದ್ದಾಳೆ. ಇದ್ದಕ್ಕಿದ್ದಂತೆ ಕಾರು ಮುಂದೆ ಚಲಿಸಲು ಪ್ರಾರಂಭಿಸಿದೆ. ಕಾರಿನಿಂದ ಹೊರಗೆ ಇಳಿದಿದ್ದ ಪತಿ ಕೂಡಲೇ ಮಗುವನ್ನು ಕೈಯಲ್ಲೇ ಹಿಡಿದು ಕೊಂಡು ಗಾಬರಿಯಿಂದ ಕಾರಿನ ಡೋರ್ ತೆಗೆದು ಕಾರು ಹತ್ತಲು ಪ್ರಯತ್ನಿಸಿದ್ದಾನೆ.
ಈ ವೇಳೆ ಮಗು ಕೈನಿಂದ ಜಾರಿ ಕಾರಿನ ಚಕ್ರಕ್ಕೆ ಸಿಲುಕ ಬೇಕು ಎನ್ನುವಷ್ಟರಲ್ಲಿ ರಸ್ತೆಯಲ್ಲಿ ಬರುತ್ತಿದ್ದ ಯುವಚಕನೊಬ್ಬ ಸಿನಿಮೀಯ ರೀತಿಯಲ್ಲಿ ಮಗುವನ್ನು ಕೆಳಗೆ ಬೀಳದಂತೆ ರಕ್ಷಣೆ ಮಾಡಿದ್ದಾನೆ.
ಇತ್ತ ಚಲಿಸುತ್ತಿದ್ದ ಕಾರಿಗೆ ಹೇಗೋ ಹತ್ತಿ ಕಾರನ್ನು ಪತಿ ನಿಲ್ಲಿಸಿದ್ದಾನೆ. ಅಕ್ಕಪಕ್ಕದಲ್ಲಿದ್ದವರು ಕೂಡ ರಕ್ಷಣೆಗೆ ಧಾವಿಸಿ ಕಾರು ತಡೆದಿದ್ದಾರೆ. ಅದೃಷ್ಟವಶಾತ್ ದುರಂತ ತಪ್ಪಿದೆ ಮಗು ಅಪಾಯದಿಂದ ಪಾರಾಗಿದೆ. ಸ್ಥಳದಲ್ಲಿದ್ದವರು ಒಮ್ಮೆಲೇ ಘಟನೆ ಕಣ್ಣಮುಂದೆ ಕಂಡು ಹೌಹಾರಿದ್ದರು
ಸಮಯಪ್ರಜ್ಞೆ ಮೆರೆದು ತಮ್ಮ ಮಗುವನ್ನು ರಕ್ಷಣೆ ಮಾಡಿದ ಯುವಕನಿಗೆ ದಂಪತಿ ಕೃತಜ್ಞತೆ ಸಲ್ಲಿಸಿದರು.