ಇಂಡಿಯಾ ಎಂಎಸ್​ಎಂಇ ಸಮಾವೇಶದಲ್ಲಿ ಗಮನ ಸೆಳೆಯುತ್ತಿವೆ ಕೈಗಾರಿಕೆಗಳ ಪ್ರಾತ್ಯಕ್ಷತೆ

msme
Published on

ಬೆಂಗಳೂರು: ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್​​​​​ಕೆಸಿಸಿಐ), ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ), ಪೀಣ್ಯ ಕೈಗಾರಿಕೆಗಳ ಸಂಘ (ಪಿಐಎ) ಜಂಟಿಯಾಗಿ ಅರಮನೆ ಮೈದಾನದಲ್ಲಿ ಆಯೋಜಿಸಿರುವ 3 ದಿನಗಳ "ಇಂಡಿಯಾ ಎಂಎಸ್​ಎಂಇ ಸಮಾವೇಶ'ಕ್ಕೆ 250 ಕಂಪನಿಗಳ ಪ್ರಾತ್ಯಕ್ಷತೆಯು ನೋಡುಗರ ಗಮನಸೆಳೆಯುತ್ತಿದೆ.

ದಕ್ಷಿಣ ಭಾರತದ ಅತಿದೊಡ್ಡ ಪ್ರದರ್ಶನ ಇದಾಗಿದ್ದು, ಕೈಗಾರಿಕೆಗಳ ಉತ್ಪನ್ನಗಳನ್ನು ಮಳಿಗೆಗಳಲ್ಲಿ ಪ್ರದರ್ಶನಕ್ಕಿಡಲಾಗಿದೆ. ಬಿಟುಬಿ ಸಭೆಗಳು, ಕೈಗಾರಿಕಾ ತಜ್ಞರಿಂದ ಸಭೆ ಇರಲಿದೆ. ಎಂಎಸ್​ಎಂಇ ಉದ್ಯಮಗಳು, ಸಾರ್ವಜನಿಕ ವಲಯ ಟಕಗಳು, ದೊಡ್ಡ ಕಂಪನಿಗಳು, ಸರ್ಕಾರಿ ಅಧಿಕಾರಿಗಳು ಮತ್ತು ಆರ್ಥಿಕ ಸಂಸ್ಥೆಗಳು ಭಾಗಿಯಾಗಿದ್ದಾರೆ. ದೊಡ್ಡ ಕಂಪನಿಗಳ ಜೊತೆ ಸಂಪರ್ಕ ಸಾಧಿಸುವುದು, ಹೊಸ ಅವಕಾಶ ಸೃಷ್ಟಿಸುವುದು, ಎಂಎಸ್​ಎಂಇ ಉದ್ಯಮ ಪಾರ್ಕ್​ ಸ್ಥಾಪನೆ, ಸಣ್ಣ, ಅತಿಸಣ್ಣ, ಮಧ್ಯಮ ಉದ್ದಿಮೆಗಳ ಬಲವರ್ಧನೆಗೆ ಕ್ರಮ ಕೈಗೊಳ್ಳುವುದು ಸೇರಿ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ ಮತ್ತು ರಾಜ್ಯದ ಸಚಿವರಿಗೆ ಮೂರು ಸಂಗಳ ಪದಾಧಿಕಾರಿಗಳು ಬೇಡಿಕೆ ಸಲ್ಲಿಸಿದರು.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಧಿಕಾರಿಗಳ ಸಮ್ಮುಖದಲ್ಲಿ ಸದ್ಯದಲ್ಲೇ ಸಭೆ ಕರೆದು ಕೈಗಾರಿಕೆಗಳು ಹಾಗೂ ಬ್ಯಾಂಕರ್​ಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ದೇಶದ ಆರ್ಥಿಕ ಬೆಳವಣಿಗೆಗೆ ಇವುಗಳ ಪಾತ್ರ ಹಿರಿದಾಗಿದೆ. ಸದ್ಯದಲ್ಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಧಿಕಾರಿಗಳನ್ನು ಒಟ್ಟುಗೂಡಿಸಿ ಸಭೆ ಕರೆಯಲಾಗುವುದು. ಸಣ್ಣ ಕೈಕಾರಿಕೆಗಳು ಸಾಲ ಮಂಜೂರಾತಿ ಕೋರಿ ಸಲ್ಲಿಸಿರುವ ಅರ್ಜಿಯನ್ನು ಬ್ಯಾಂಕ್​ಗಳು ಅನಗತ್ಯ ಕಾರಣವೊಡ್ಡಿ ತಿರಸ್ಕಾರ ಮಾಡಬಾರದು. "ವಿಕಸಿತ ಭಾರತಕ್ಕೆ' ನಿಮ್ಮೆಲ್ಲರ ಸಹಕಾರ ಅಗತ್ಯವಿದೆ. ಮಾರುಕಟ್ಟೆಗೆ ಉತ್ತೇಜನ ನೀಡುವ ಕೆಲಸವಾಗಬೇಕಿದೆ. ಕೃತಕ ಬುದ್ಧಿಮತ್ತೆ (ಎಐ), ರಣಾ ಸಾಮಗ್ರಿಗಳ ಉತ್ಪಾದನೆಗೆ ಕೈಗಾರಿಕೆಗಳು ಹೆಚ್ಚು ಆದ್ಯತೆ ನೀಡುವಂತಾಗಬೇಕು ಎಂದು ಸಲಹೆ ನೀಡಿದರು.

ಪ್ರತ್ಯೇಕ ಸಚಿವಾಲಯದ ಭರವಸೆ

ಸಣ್ಣ, ಮಧ್ಯಮ ಕೈಗಾರಿಕೆಗಳು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಶಕ್ತಿ. ಕೈಗಾರಿಕೆಗಳ ಸಮಸ್ಯೆಗಳ ಬಗ್ಗೆ ಅರಿವಿದೆ. ವಿದ್ಯುತ್​, ನೀರಿನ ಸೌಲಭ್ಯ ಒದಗಿಸಲು ಸರ್ಕಾರ ಬದ್ಧವಾಗಿದೆ. ಪ್ರತ್ಯೇಕ ಸಚಿವಾಲಯ ನಿರ್ಮಿಸುವ ಬಗ್ಗೆ ಈಗಾಗಲೆ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್​ ಹೇಳಿದರು. ಮೊದಲಿನಿಂದಲೂ ಪೀಣ್ಯ, ಎಲೆಕ್ಟ್ರಾನಿಕ್ಸ್​ ಸಿಟಿ ಕೈಗಾರಿಕಾ ಪ್ರದೇಶಗಳು ರಾಷ್ಟ್ರ ಮಟ್ಟದಲ್ಲಿ ವಿಶೇಷ ಸ್ಥಾನ ಪಡೆದಿವೆ. 3 ಸಂಸ್ಥೆಗಳು ಜೊತೆಗೂಡಿ ದೇಶದ ಪ್ರಗತಿಗೆ ಒಟ್ಟಾಗಿ ಶ್ರಮಿಸುವ ಸಂದೇಶ ದೇಶಕ್ಕೆ ರವಾನಿಸುವುದು ಗಮನಾರ್ಹ. ಸರ್ಕಾರ ಮಾಡಲಾಗದ ಕೆಲಸವನ್ನು ಎಂಎಸ್​ಎಂಇ ಮಾಡಿ ಜನರಿಗೆ ಉದ್ಯೋಗ ನೀಡುತ್ತಿವೆ. ಕೇಂದ್ರ ಸರ್ಕಾರದ ನೀತಿಯಂತೆ ರಾಷ್ಟ್ರೀಕೃತ ಬ್ಯಾಂಕುಗಳ ಸಹಕಾರ ಅಗತ್ಯ ಎಂದು ಹೇಳಿದರು. ಆಸಕ್ತಿ, ಪ್ರಾಮಾಣಿಕತೆಯಿಂದ ದುಡಿಯುವವರಿಗೆ ಸರ್ಕಾರಗಳು ಪ್ರೋತ್ಸಾಹ ನೀಡಿದರೆ ದೇಶಕ್ಕೆ ನೆರವಾಗುತ್ತದೆ. "ಮೇಕ್​ ಇನ್​ ಇಂಡಿಯಾ' ಪರಿಕಲ್ಪನೆಗೆ ಹೆಚ್ಚು ಒತ್ತು ನೀಡಿದಾಗ ಪ್ರತಿಭೆಗಳು ನಮ್ಮಲ್ಲಿಯೇ ಉಳಿದುಕೊಳ್ಳುತ್ತವೆ. ರಾಜ್ಯದಲ್ಲಿ 250 ಇಂಜಿನಿಯರಿಂಗ್​ ಕಾಲೇಜುಗಳಿವೆ. ಇಲ್ಲಿಂದ ವಿದ್ಯಾಭ್ಯಾಸ ಮಾಡಿದ ಪ್ರತಿಭಾನ್ವಿತರು ಬೇರೆ ದೇಶಕ್ಕೆ ಹೋಗುತ್ತಿದ್ದಾರೆ. ಅವರನ್ನು ಇಲ್ಲಿಯೇ ಬಳಸಿಕೊಳ್ಳಬೇಕು. ನಾವೆಲ್ಲರೂ ಒಟ್ಟಾಗಿ ಸೇರಿ ಮುನ್ನಡೆಯಬೇಕಿದೆ ಎಂದು ಡಿಸಿಎಂ ಹೇಳಿದರು.

ಇ-ಖಾತಾ, ವಿದ್ಯುತ್​ ಶುಲ್ಕ ಸೇರಿ ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸದ್ಯದಲ್ಲೇ ಸಭೆ ಕರೆಯಲಿದ್ದಾರೆ. ರಾಜ್ಯದಲ್ಲಿ ಹೊಸ ಕೈಗಾರಿಕೆ ನೀತಿ ಜಾರಿಗೆ ತಂದಿದ್ದೇವೆ. ಅಭಿವೃದ್ಧಿಗೆ ಕರ್ನಾಟಕ ಮಾದರಿ ರಾಜ್ಯವಾಗಿದೆ. ಸಣ್ಣ ಕೈಗಾರಿಕೆಗಳ ಸೇರಿ ದೊಡ್ಡ ಮಟ್ಟದ ಕೈಗಾರಿಕೆಗಳಿಗೆ ಉತ್ತೇಜನ ನೀಡುವ ಕಾರ್ಯವನ್ನು ನಾವು ಮಾಡುತ್ತಿದ್ದೇವೆ.

| ಶರಣಬಸಪ್ಪ ದರ್ಶನಾಪುರ, ಸಚಿವ

"ಎಸ್​ಎಂಇ ಕನೆಕ್ಟ್​' ಅಡಿ 1,800 ಉದ್ದಿಮೆಗಳಿಗೆ ನೆರವು ಒದಗಿಸಲಾಗುತ್ತಿದೆ. 60 ಉದ್ದಿಮೆಗಳು ಈಗಾಗಲೆ ಆಧುನಿಕ ತಂತ್ರಾನವನ್ನು ಅಳವಡಿಸಿಕೊಂಡಿವೆ. ವೆಂಚುರೈಸ್​ ಉಪಕ್ರಮದ ಮೂಲಕ ನವೋದ್ಯಮಗಳು, ಸಣ್ಣ ಕೈಗಾರಿಕೆಗಳಿಗೆ ಮಾರ್ಗದರ್ಶನ ಮತ್ತು ಆರ್ಥಿಕ ನಿಧಿ ಕೊಡಲಾಗುತ್ತಿದೆ. 2032ರ ವೇಳೆಗೆ ರಾಜ್ಯವು 1 ಟ್ರಿಲಿಯನ್​ ಡಾಲರ್​ ಮೌಲ್ಯದ ಆರ್ಥಿಕತೆ ಬೆಳೆಯಲು ಹೆಚ್ಚಿನ ಒತ್ತು ನೀಡಲಾಗುತ್ತಿದೆ.

| ಎಂ.ಬಿ. ಪಾಟೀಲ್​, ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net