

| ಸತೀಶ್ ಕಂದಗಲ್ಪುರ ಬೆಂಗಳೂರು
ಕರೊನಾ ಲಾಕ್ಡೌನ್ನಿಂದಾಗಿ ಆರ್ಥಿಕ ಹೊಡೆತಕ್ಕೆ ಸಿಲುಕಿದ್ದ ರಾಜ್ಯದ ಸಣ್ಣ, ಮಧ್ಯಮ ಮತ್ತು ಬೃಹತ್ ಕೈಗಾರಿಕೆಗಳಿಗೀಗ ಕಚ್ಚಾವಸ್ತುಗಳ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಕೈಗಾರಿಕೆಗಳಲ್ಲಿ ಬಳಸುವ ಎಲ್ಲ ಲೋಹದ ಕಚ್ಚಾ ವಸ್ತುಗಳ ಬೆಲೆ ವರ್ಷದಲ್ಲಿ ಶೇ.20 ರಿಂದ ಶೇ.40 ದುಬಾರಿಯಾಗಿದೆ. ಇದರ ಪರಿಣಾಮವಾಗಿ ಕೈಗಾರಿಕೆಗಳ ವಾರ್ಷಿಕ ಉತ್ಪಾದನೆ ಅರ್ಧಕ್ಕರ್ಧ ಕುಂಠಿತವಾಗಿದೆ. ಕಚ್ಚಾವಸ್ತುಗಳ ಕೃತಕ ಅಭಾವ ಸೃಷ್ಟಿಸುತ್ತಿರುವ ಆರೋಪಗಳೂ ಕೇಳಿ ಬಂದಿರುವುದರಿಂದ ಸಿದ್ಧವಸ್ತುಗಳ ಕೊರತೆಯಾಗುವ ಮುನ್ಸೂಚನೆ ಸಿಕ್ಸಿದೆ. ರಾಜ್ಯದಲ್ಲಿ ಕರೊನಾಕ್ಕೂ ಮುನ್ನ, ಕೈಗಾರಿಕೆಗಳಲ್ಲಿ ಬಳಸುವ ಕಚ್ಚಾವಸ್ತುಗಳ ಬೆಲೆಯಲ್ಲಿ ಸಣ್ಣಪುಟ್ಟ ಏರಿಳಿತ ಕಂಡುಬರುತ್ತಿತ್ತು. ಆದರೆ, ಕೋವಿಡ್ 1ನೇ ಅಲೆಯ ಲಾಕ್ಡೌನ್ ವೇಳೆ ಲೋಹ ಕಚ್ಚಾವಸ್ತುಗಳ ಬೆಲೆ ಗಗನಕ್ಕೇರಿತ್ತು. ಬಳಿಕ ಬೆಲೆ ಇಳಿಕೆ ಆಗಲಿಲ್ಲ. ಕೋವಿಡ್ 2ನೇ ಅಲೆಯ ನಂತರ ಪುನಃ ಶೇ.40 ದರ ಹೆಚ್ಚಳವಾಗಿದೆ. ಕಬ್ಬಿಣ, ಉಕ್ಕು, ಅಲ್ಯೂಮಿನಿಯಂ, ತಾಮ್ರ, ಹಿತ್ತಾಳೆ, ಕಂಚು ಹೀಗೆ ಎಲ್ಲವೂ ದುಬಾರಿಯಾಗಿದ್ದು, ಉದ್ಯಮ ನಡೆಸುವುದಕ್ಕೆ ತೊಂದರೆಯಾಗಿದೆ. ಹೀಗಾಗಿ, ವ್ಯಾಪಾರೋದ್ಯಮಿಗಳೊಂದಿಗೆ ಕೈಗಾರಿಕೆ ಮಾಲೀಕರು ಮಾಡಿಕೊಂಡ ಒಪ್ಪಂದದಂತೆ ಸಿದ್ಧವಸ್ತು ಪೂರೈಸಲು ಸಾಧ್ಯವಾಗುತ್ತಿಲ್ಲ.
ಉತ್ಪಾದನೆಗೆ ಹೊಡೆತ: ಲಾಕ್ಡೌನ್ ಹಿನ್ನೆಲೆಯಲ್ಲಿ ಉದ್ಯಮ ನಡೆಸಲಾಗದೆ ಎಲ್ಲ ಆದಾಯ ಮೂಲ ಸ್ಥಗಿತವಾಗಿವೆ. ಈಗ ಕಚ್ಚಾವಸ್ತುಗಳ ಬೆಲೆಯೂ ಹೆಚ್ಚಾಗಿದ್ದರಿಂದ, ಬಂಡವಾಳ ಕೊರತೆ ಎದುರಾಗಿದೆ. ಅಗತ್ಯವಿರುವ ಪ್ರಮಾಣದಲ್ಲಿ ಕಚ್ಚಾವಸ್ತು ಖರೀದಿ ಸಾಧ್ಯವಾಗುತ್ತಿಲ್ಲ. ಹೀಗಾಗಿ, ಉತ್ಪಾದನೆ ಸಾಮರ್ಥ್ಯ ಮತ್ತು ಕಾರ್ವಿುಕರ ಸಂಖ್ಯೆ ಅಧಿಕವಾಗಿದ್ದರೂ, ಕಚ್ಚಾವಸ್ತು ಪೂರೈಸಲಾಗದ ಹಿನ್ನೆಲೆಯಲ್ಲಿ ಉತ್ಪಾದನೆ ಶೇ.50 ಕಡಿಮೆ ಮಾಡಲಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಸಿದ್ಧವಸ್ತುಗಳ ಕೊರತೆ ಉಂಟಾಗಿ, ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ.
ಕೈಗಾರಿಕೆ ನಡೆಸಲು ಸಂಕಷ್ಟ: ದೇಶದಲ್ಲಿ ಖನಿಜಗಳ ಬೆಲೆ ಅಥವಾ ಆಮದು ಸುಂಕ ಹೆಚ್ಚಳ ಮಾಡದಿದ್ದರೂ ಕೈಗಾರಿಕೆಗಳ ಕಚ್ಚಾವಸ್ತುಗಳ ಬೆಲೆ ದಿಢೀರ್ ಏರಿಕೆ ಆಗಿದೆ. ಕೈಗಾರಿಕಾ ಉತ್ಪಾದನೆಯ ಸಿದ್ಧವಸ್ತುಗಳ ದರ ಹೆಚ್ಚಿಸಿದಲ್ಲಿ ಗ್ರಾಹಕರು ಖರೀದಿಗೆ ಹಿಂದೇಟು ಹಾಕುತ್ತಾರೆ. ಮತ್ತೊಂದೆಡೆ ಬ್ಯಾಂಕ್ನಲ್ಲಿ ಸಾಲದ ಬಡ್ಡಿ ಅಥವಾ ಸಾಲ ಪಾವತಿಗೆ ಕಾಲಾವಕಾಶ ನೀಡá-ತ್ತಿಲ್ಲ. ಹೀಗಾಗಿ, ಬಹುತೇಕರು ನಷ್ಟದಲ್ಲಿ ಕೈಗಾರಿಕೆ ನಡೆಸುತ್ತಿದ್ದಾರೆ. ಇನ್ನು ಶೇ.20 ಕೈಗಾರಿಕೆ ಮುಚ್ಚುವ ಹಂತಕ್ಕೆ ಬಂದಿವೆ ಎಂದು ಶಿವಮೊಗ್ಗದ ಕೈಗಾರಿಕೋದ್ಯಮಿ ರಮೇಶ್ ಹೆಗಡೆ ತಿಳಿಸಿದ್ದಾರೆ.
ಕೇಂದ್ರವೇ ತಡೆಯಬೇಕು: ದೇಶದಿಂದ ಕಬ್ಬಿಣ ಸೇರಿ ಹಲವು ಲೋಹದ ಖನಿಜ, ಕಚ್ಚಾವಸ್ತುಗಳನ್ನು ಅನೇಕ ದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ನಮ್ಮಲ್ಲಿ ಅಗತ್ಯ ಖನಿಜ ಸಂಪನ್ಮೂಲಗಳಿದ್ದರೂ ಸ್ಥಳೀಯವಾಗಿ ಕಬ್ಬಿಣ ಉತ್ಪಾದಿಸಿ ಮಾರಾಟ ಮಾಡದೆ ಕೃತಕ ಅಭಾವ ಸೃಷ್ಟಿಸಲಾಗುತ್ತಿದೆ. ಇದನ್ನು ಕೇಂದ್ರ ಸರ್ಕಾರವೇ ತಡೆಯಬೇಕಿದೆ ಎಂದು ಎಫ್ಕೆಸಿಸಿಐ ಅಧ್ಯಕ್ಷ ಪೆರಿಕಲ್ ಎಂ. ಸುಂದರ್ ಒತ್ತಾಯಿಸಿದ್ದಾರೆ. ಪೆಟ್ರೋಲಿಯಂ ಬೆಲೆ ಹೆಚ್ಚಳದಿಂದ ಇದರ ಉಪ ಉತ್ಪನ್ನಗಳಾದ ಪೆಟ್ರೋಲ್, ಡೀಸೆಲ್, ಗ್ರೀಸ್ ಮತ್ತು ಪ್ಲಾಸ್ಟಿಕ್ ಸಾಮಗ್ರಿಗಳ ಬೆಲೆ ಗಗನಕ್ಕೇರಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಪೆಟ್ರೋಲ್ ಮೇಲಿನ ತೆರಿಗೆ ಕಡಿತಕ್ಕೆ ಮನವಿ ಮಾಡಿದ್ದರೂ ಪ್ರಯೋಜವಾಗಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಪೀಣ್ಯದಲ್ಲೇ 8500: ಬೆಂಗಳೂರಿನ ಪೀಣ್ಯ ಕೈಗಾರಿಕಾ ಕೇಂದ್ರದಲ್ಲಿ ಅಂದಾಜು 8,500 ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳಿವೆ. ಲಾಕ್ಡೌನ್ ವೇಳೆ ಬಾಗಿಲು ಮುಚ್ಚಿದ ಪರಿಣಾಮ ಆರ್ಥಿಕ ನಷ್ಟವಾಗಿ ಶೇ.10 ಉದ್ದಿಮೆ ಗಳು ಮತ್ತೆ ಬಾಗಿಲು ತೆರೆದಿಲ್ಲ.
7.6ಲಕ್ಷ ಕೈಗಾರಿಕೆ: ಕರ್ನಾಟಕದಲ್ಲಿ 7.6 ಲಕ್ಷಕ್ಕೂ ಹೆಚ್ಚು ಸಣ್ಣ ಮತ್ತು ಮಧ್ಯಮ ಹಾಗೂ ಅತಿ ಸಣ್ಣ ಕೈಗಾರಿಕೆಗಳಿವೆ. ಅದರಲ್ಲಿ 2.6 ಲಕ್ಷ ಉದ್ದಿಮೆಗಳು ಬೆಂಗಳೂರಿನಲ್ಲೇ ಇದ್ದು ಮತ್ತು ಈ ವಲಯಗಳನ್ನು ಸುಮಾರು 2.6 ಕೋಟಿ ಜನ ಅವಲಂಬಿಸಿಕೊಂಡಿದ್ದಾರೆ. ಕರೊನಾ ಲಾಕ್ಡೌನ್ನಿಂದಾಗಿ ಶೇ.20 ಉದ್ದಿಮೆಗಳು ನಷ್ಟ ಅನುಭವಿಸಿವೆ.
ಕೈಗಾರಿಕೆಗಳಿಗೆ ಅಗತ್ಯವಿರುವ ಬಹುತೇಕ ಕಚ್ಚಾವಸ್ತುಗಳ ದರ ವರ್ಷದಲ್ಲಿ ದುಪ್ಪಟ್ಟಾಗಿದೆ. ಹೀಗಾಗಿ, ಸರ್ಕಾರ ಮಧ್ಯ ಪ್ರವೇಶಿಸಿ ಕಚ್ಚಾವಸ್ತುಗಳ ದರ ನಿಯಂತ್ರಣ ಸಮಿತಿ ರಚಿಸಿ, ಬೆಲೆ ಏರಿಕೆಗೆ ಕಡಿವಾಣ ಹಾಕಬೇಕು.
| ಕೆ.ಬಿ. ಅರಸಪ್ಪ ಕರ್ನಾಟಕ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ