

ಹಿರಿಕರ ರವಿ ಸೋಮವಾರಪೇಟೆ
ಇಂದಿರಾಗಾಂಧಿ ಅಭಿಮಾನಿಗಳ ಸಂಘದ ಕಳೆದ ಹತ್ತು ವರ್ಷಗಳ ಹೋರಾಟದ ಫಲವಾಗಿ ಸೋಮವಾರಪೇಟೆ ಪಟ್ಟಣದಲ್ಲಿ ಇಂದಿರಾ ಕ್ಯಾಂಟಿನ್ ಸೋಮವಾರ ಉದ್ಘಾಟನೆಯಾಗಲಿದೆ.
ಸಂಘದ ಅಧ್ಯಕ್ಷ ಎಚ್.ಎ.ನಾಗರಾಜ್ ನೇತೃತ್ವದಲ್ಲಿ ಕ್ಯಾಂಟಿನ್ ಪ್ರಾರಂಭ ಮಾಡಬೇಕೆಂದು ಎರಡು ವರ್ಷಗಳ ಹಿಂದೆ ಪಟ್ಟಣದ ಪಂಚಾಯಿತಿ ಕಚೇರಿ ಮುಂಭಾಗ ಎರಡ್ಮೂರು ಪ್ರತಿಭಟನೆಗಳು ನಡೆದಿದ್ದವು. ಅದರೆ ಯಾವುದೇ ಪ್ರಯೋಜವಾಗಿರಲಿಲ್ಲ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ ಎರಡು ವರ್ಷಗಳ ನಂತರ ಸೋಮವಾರಪೇಟೆಯಲ್ಲಿ ಇಂದಿರಾ ಕ್ಯಾಂಟಿನ್ ಪ್ರಾರಂಭವಾಗಿದೆ.
ತಮಿಳುನಾಡಿನಲ್ಲಿ ಅಮ್ಮ ಕ್ಯಾಂಟಿನ್ ಮಾದರಿಯಲ್ಲಿ 2017ರಲ್ಲಿ ಕರ್ನಾಟಕ ರಾಜ್ಯದಲ್ಲಿ ಇಂದಿರಾ ಕ್ಯಾಂಟಿನ್ ಪ್ರಾರಂಭಿಸಲಾಯಿತು. ಇದೇ ಸಂದರ್ಭ ಸೋಮವಾರಪೇಟೆ ಪಟ್ಟಣದಲ್ಲಿ ಇಂದಿರಾ ಕ್ಯಾಂಟಿನ್ ತೆರೆಯುವಂತೆ ಇಂದಿರಾಗಾಂಧಿ ಅಭಿಮಾನಿಗಳ ಸಂಘ ಮುಖ್ಯಮಂತ್ರಿಗೆ ಪತ್ರ ಬರೆಯಿತು. ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕ್ಯಾಂಟಿನ್ ನಿರ್ಮಾಣಕ್ಕೆ ಅನುಮೋದನೆಯೊಂದಿಗೆ ಹಣವನ್ನು ಬಿಡುಗಡೆಗೊಳಿಸಿದರು. ಇಲ್ಲಿನ ಪಟ್ಟಣ ಪಂಚಾಯಿತಿ ಬಿಜೆಪಿ ಆಡಳಿತದಲ್ಲಿತ್ತು. ಬಿಜೆಪಿ ಶಾಸಕರು ಇದ್ದರು. ಇಂದಿರಾಗಾಂಧಿ ಅಭಿಮಾನಿ ಸಂಘದವರು ಕೆಎಸ್‌ಆರ್‌ಟಿಸಿ ಸಮೀಪದಲ್ಲಿ ಕ್ಯಾಂಟಿನ್ ತೆರಯುವಂತೆ ಪಂಚಾಯಿತಿಗೆ ಮನವಿ ಸಲ್ಲಿಸಿದರು. ಜಾಗ ಇಕ್ಕಟ್ಟಾದ ಹಿನ್ನೆಲೆ ಕೆಎಸ್‌ಆರ್‌ಟಿಸಿ ಒಪ್ಪಿಗೆ ನೀಡಲಿಲ್ಲ.
ನಂತರ ಸಿ.ಕೆ.ಸುಬ್ಬಯ್ಯ ರಸ್ತೆಯ ಪಕ್ಕದಲ್ಲಿ ಇಂದಿರಾ ಕ್ಯಾಂಟಿನ್‌ಗೆ ಸ್ಥಳ ಗುರುತಿಸಿ, ಜಾಗವನ್ನು ತಮತಟ್ಟು ಮಾಡಲಾಯಿತು. ನಂತರ ಹೋದ ಗುತ್ತಿಗೆದಾರ ಬರಲಿಲ್ಲ. ಇಂದಿರಾಗಾಂಧಿ ಅಭಿಮಾನಿಗಳ ಸಂಘದವರು ಶಾಸಕ ಅಪ್ಪಚ್ಚು ರಂಜನ್ ಅವರಿಗೆ ಮನವಿ ಪತ್ರ ಸಲ್ಲಿಸಿ, ಕ್ಯಾಂಟಿನ್ ಸ್ಥಾಪನೆಗೆ ಮನವಿ ಮಾಡಿದರು. ನಂತರ ಪಟ್ಟಣ ಪಂಚಾಯಿತಿ ಎದುರು ಪ್ರತಿಭಟನೆ ಹಮ್ಮಿಕೊಂಡರು. ಕ್ಯಾಂಟಿನ್ ಕಟ್ಟಡ ಸ್ಥಳಕ್ಕೆ ಕ್ರೇನ್ ಹೋಗಲು ಜಾಗವಿಲ್ಲ. ಈ ಕಾರಣದಿಂದ ವಿಳಂಬವಾಗಿದೆ ಎಂದು ಪಂಚಾಯಿತಿ ಆಡಳಿತ ಮಾಹಿತಿ ನೀಡಿತು.
ಕಳೆದ ವರ್ಷ ವರ್ಕ್ಸ್‌ಶಾಪ್ ಏರಿಯದಲ್ಲಿ ಅನೇಕ ಕಟ್ಟಡಗಳನ್ನು ಅಕ್ರಮ ಕಟ್ಟಡ ನಿರ್ಮಾಣದ ಆರೋಪದಲ್ಲಿ ಪಂಚಾಯಿತಿ ಒಡೆಸಿ ಹಾಕಿಲಾಯಿತು. ಇದರಿಂದ ಇಂದಿರಾ ಕ್ಯಾಂಟಿನ್ ಜಾಗಕ್ಕೆ ಕ್ರೇನ್ ಹೋಗಲು ಅವಕಾಶವಾಯಿತು. ಇದೇ ಸಂದರ್ಭ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತು. ಜಿಲ್ಲೆಯ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರು ಆಯ್ಕೆಯಾದರು.
ಛಲ ಬಿಡದ ಅಭಿಮಾನಿ ಸಂಘದ ಅಧ್ಯಕ್ಷ ಎಚ್.ಎ.ನಾಗರಾಜ್ ಮತ್ತು ಆಡಳಿತ ಮಂಡಳಿ ಸದಸ್ಯರು ಶಾಸಕ ಡಾ.ಮಂತರ್‌ಗೌಡ ಅವರಿಗೆ ಮತ್ತೊಂದು ಅರ್ಜಿ ಕೊಟ್ಟು ಇಂದಿರಾ ಕ್ಯಾಂಟಿನ್ ಪ್ರಾರಂಭಕ್ಕೆ ಮನವಿ ಮಾಡಿದರು. ಶಾಸಕರು ಮನವಿಗೆ ಮನ್ನಣೆ ನೀಡಿದರು. ಇಂದಿರಾ ಕ್ಯಾಂಟಿನ್ ಪ್ರಾರಂಭವಾಗಿದೆ.
ಸೋಮವಾರಪೇಟೆ ಬಹುತೇಕ ಗ್ರಾಮಗಳು ಗುಡ್ಡಗಾಡು ಪ್ರದೇಶದಲ್ಲಿವೆ. ಕೆಲವು ಗ್ರಾಮಗಳಿಗೆ ಬಸ್‌ಗಳ ಸೌಕರ್ಯವಿಲ್ಲ. ಕೆಲ ಗ್ರಾಮಗಳಿಗೆ ಬೆಳಗ್ಗೆ ಮತ್ತು ಸಂಜೆ ಬಸ್‌ಗಳು ಸಂಚರಿಸುತ್ತವೆ. ಗ್ರಾಮೀಣ ಭಾಗದಿಂದ ಪಟ್ಟಣಕ್ಕೆ ಬರುವ ಜನರಿಗೆ ಮಧ್ಯಾಹ್ನದ ಊಟವನ್ನು ಪಟ್ಟಣದಲ್ಲಿ ಮಾಡಲೇಬೇಕಾದ ಅನಿವಾರ್ಯವಿದೆ. ಇಂದಿರಾ ಕ್ಯಾಂಟಿನ್‌ನಲ್ಲಿ ಶುಚಿ ರುಚಿಯಾದ ತಿಂಡಿ ಮತ್ತು ಊಟ ದೊರೆತರೆ, ಉಪಯೋಗವಾಗುತ್ತದೆ ಎಂಬುದು ಗ್ರಾಮೀಣ ಭಾಗದ ರೈತರ ಅಭಿಪ್ರಾಯವಾಗಿದೆ.