

ಗಜೇಂದ್ರಗಡ: ಪಟ್ಟಣದಲ್ಲಿ ಬಹುದಿನಗಳ ಬೇಡಿಕೆಯಾಗಿದ್ದ ಇಂದಿರಾ ಕ್ಯಾಂಟೀನ್ ಇನ್ನೆರಡು ತಿಂಗಳಲ್ಲಿ ಪ್ರಾರಂಭವಾಗಲಿದ್ದು, ಇದನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಪಟ್ಟಣದ ಬಸ್ ನಿಲ್ದಾಣದಲ್ಲಿ ಸರ್ಕಾರದಿಂದ ಪುರಸಭೆಗೆ ಮಂಜೂರಾದ 87 ಲಕ್ಷ ರೂ. ವೆಚ್ಚದಲ್ಲಿ ಇಂದಿರಾ ಕ್ಯಾಂಟೀನ್ಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಬಡವರಿಗೆ, ಕೂಲಿಕಾರರಿಗೆ ರಿಯಾಯಿತಿ ದರದಲ್ಲಿ ಊಟ ಉಪಾಹಾರ ನೀಡುವ ಇಂದಿರಾ ಕ್ಯಾಂಟೀನ್ ಅನ್ನು ಬಿಜೆಪಿ ಸರ್ಕಾರ ದುರುದ್ದೇಶದಿಂದ ಆರಂಭಿಸಿರಲಿಲ್ಲ. ಆದರೆ, ನಮ್ಮ ಕಾಂಗ್ರೆಸ್ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದ ಮೇಲೆ ಪುನಃ ಪ್ರಾರಂಭಿಸಿದ್ದೇವೆ. 87 ಲಕ್ಷ ರೂ. ವೆಚ್ಚದಲ್ಲಿ ಕಟ್ಟಡವಾಗಲಿದ್ದು, 2 ತಿಂಗಳಲ್ಲಿ ಕಟ್ಟಡ ಪೂರ್ಣಗೊಂಡು ಕಾರ್ಯಾರಂಭ ಮಾಡಲಿದೆ. ಬಸ್ ನಿಲ್ದಾಣದಲ್ಲಿ ಕ್ಯಾಂಟೀನ್ ಪ್ರಾರಂಭಿಸಿರುವುದು ಪ್ರಯಾಣಿಕರಿಗೆ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲಕರವಾಗಲಿದೆ ಎಂದರು.
ಪುರಸಭೆ ಅಧ್ಯಕ್ಷ ಸುಭಾಸ ಮ್ಯಾಗೇರಿ, ಉಪಾಧ್ಯಕ್ಷೆ ಸವಿತಾ ಬಿದರಳ್ಳಿ, ಸಿದ್ದಣ್ಣ ಬಂಡಿ, ಶಿವರಾಜ ಘೊರ್ಪಡೆ, ಮುದಿಯಪ್ಪ ಮುಧೋಳ, ರಾಜು ಸಾಂಗ್ಲಿಕರ, ತಾರಸಿಂಗ್ ರಾಠೊಡ, ಯಲ್ಲಪ್ಪ ಬಂಕದ, ಮಲ್ಲಿಕಾರ್ಜುನ ಗಾರಗಿ, ಮಂಜುಳಾ ರೇವಡಿ, ಶಾರದಾ ರಾಠೋಡ, ಸಿದ್ದು ಗೊಂಗಡಶೆಟ್ಟಿಮಠ, ನೀಲಮ್ಮ ಬಳೂಟಗಿ, ಗುರು ಕಲ್ಲೊಡ್ಡರ ಇದ್ದರು.