

ಕೊಳ್ಳೇಗಾಲ: ಹೆಣ್ಣು ಮಗು ಬೇಡ, ಗಂಡು ಮಕ್ಕಳೇ ಹುಟ್ಟಬೇಕೆಂಬ ಮನಸ್ಥಿತಿ ಜಿಲ್ಲೆಯಲ್ಲಿ ಹೆಚ್ಚಾಗಿರುವುದು ನೋವಿನ ಸಂಗತಿಯಾಗಿದೆ. ಹಾಗಾಗಿ ಜಿಲ್ಲೆಯಲ್ಲಿ ದೊಡ್ಡ ಮಟ್ಟದ ಅರಿವು ಕಾರ್ಯಕ್ರಮ ಜಿಲ್ಲಾಡಳಿತ ನಡೆಸಬೇಕೆಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಸೂಚನೆ ನೀಡಿದರು.
ಗುರುವಾರ ಪಟ್ಟಣದ ಸರ್ಕಾರಿ ಉಪವಿಭಾಗ ಆಸ್ಪತ್ರೆಯ ಮಹಿಳೆಯರ ಒಳ ರೋಗಿಗಳ ವಿಭಾಗ, ಶಸ್ತ್ರಚಿಕಿತ್ಸಾ ನಂತರ ಕೊಠಡಿಗೆ ಭೇಟಿ ನೀಡಿದ ಬಳಿಕ ಅವರು ಮಾತನಾಡಿದರು. ಹೆಣ್ಣು ಮಗು ಜನಿಸಿದರೆ ಅಸಡ್ಡೆ ತೋರುವ ಮನಸ್ಥಿತಿ ಚಾಮರಾಜನಗರ ಜಿಲ್ಲೆಯಲ್ಲಿ ಹೆಚ್ಚಾಗಿದೆ ಎಂಬುದು ಆಸ್ಪತ್ರೆಯಲ್ಲಿದ್ದ ಬಾಣಂತಿ ಮಹಿಳೆಯರನ್ನು ಮಾತಿಗೆಳೆದಾಗ ತಿಳಿದು ಬಂದಿದೆ. ಕುಟುಂಬಸ್ಥರ ಒತ್ತಡದಿಂದ ಈ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಹೆಣ್ಣು ಮಕ್ಕಳು ಬೇಡ ಗಂಡು ಮಗು ಬೇಕೆಂಬ ಮನಸ್ಥಿತಿ ಘೋರವಾದದ್ದು. ಮಗುವಿನ ಜನನ ವಿಚಾರದಲ್ಲಿ ಪ್ರಕೃತಿ ದತ್ತವಾಗಿಯೇ ನಡೆಯಬೇಕು. ಅದಕ್ಕೆ ಯಾರೂ ಅಡ್ಡಿಪಡಿಸಬಾರದು. ಚಾಮರಾಜನಗರ ಡಿಸಿ, ಎಸ್ಪಿ, ಸಿಇಒ ಆದಿಯಾಗಿ ನಾನು ಹೆಣ್ಣೆ, ನಮ್ಮ ಹೆತ್ತವಳು ಹೆಣ್ಣೆ ಈ ಬಗ್ಗೆ ದೊಡ್ಡ ಜಾಗೃತಿ ಆಗಬೇಕು. ಜವಾಬ್ದಾರಿ ಹೊತ್ತ ಅಧಿಕಾರಿಗಳು ಈ ಕೆಲಸ ಮಾಡಬೇಕು ಎಂದರು.
ರೇಡಿಯಾಲಾಜಿಸ್ಟ್ ಸೇವೆಗೆ ಕ್ರಮ: ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಯಲ್ಲಿ ರೇಡಿಯಾಲಾಜಿಸ್ಟ್ ನೇಮಕ ಆಗಿಲ್ಲ, ಜನರಿಗೆ ಸ್ಕ್ಯಾನಿಂಗ್ ಸೌಲಭ್ಯ ಸಿಗುತ್ತಿಲ್ಲ, ಪ್ರತ್ಯೇಕ ಮಹಿಳಾ ಆಸ್ಪತ್ರೆ ಬೇಡಿಕೆ ಇದೆ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ನಾಗಲಕ್ಷ್ಮೀ ಚೌಧರಿ, ಕಳೆದ ಬಾರಿಯೂ ಆಸ್ಪತ್ರೆಗೆ ಭೇಟಿ ನೀಡಿದಾಗ ಈ ಮೂರು ವಿಚಾರವೂ ಗಮನಕ್ಕೆ ಬಂದಿತ್ತು. ಅಂತೆಯೇ ಸರ್ಕಾರಕ್ಕೆ ಪತ್ರ ಬರೆದಿದ್ದೆ. ಇದೀಗ ಮತ್ತೆ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ. ಸಂಬಂಧಪಟ್ಟವರನ್ನು ಖುದ್ದು ಭೇಟಿ ಮಾಡಿ ಚರ್ಚಿಸುತ್ತೇನೆ. ಆಯೋಗ ಭೇಟಿ ನೀಡಿದ ಕೂಡಲೇ ಛೂ ಮಂತ್ರ ಎಂಬಂತೆ ಕೆಲಸವಾಗುವುದಿಲ್ಲ. ಪತ್ರ ಬರೆದರೆ ಅದರ ಫಾಲೋಅಪ್ ನಡೆಯುತ್ತಿರುತ್ತದೆ. ಬಜೆಟ್‌ನಲ್ಲಿ 250 ಹಾಸಿಗೆ ಸಾಮರ್ಥ್ಯದ ಜಿಲ್ಲಾ ಮಟ್ಟದ ಆಸ್ಪತ್ರೆ ಕೊಳ್ಳೇಗಾಲಕ್ಕೆ ಘೋಷಣೆಯಾಗಿದೆ. ಆಸ್ಪತ್ರೆಯಲ್ಲಿ ನರ್ಸ್, ಡಿ ಗ್ರೂಪ್ ನೌಕರರ ಕೊರತೆ ಎಂಬ ಮಾಹಿತಿ ಇದೆ. ಜಿಲ್ಲಾಸ್ಪತ್ರೆಯಲ್ಲಿರುವ ರೇಡಿಯಾಲಾಜಿಸ್ಟ್‌ಗಳನ್ನು ವಾರದಲ್ಲಿ ಎರಡು ದಿನ ಕೊಳ್ಳೇಗಾಲದಲ್ಲಿ ಕರ್ತವ್ಯ ನಿರ್ವಹಿಸುವ ನಿಟ್ಟಿನಲ್ಲಿ ಕ್ರಮವಹಿಸುತ್ತೇನೆ ಎಂದರು.
ಸ್ವಚ್ಛತೆಗೆ ಆದ್ಯತೆ ನೀಡಿ: ಶೌಚಗೃಹಕ್ಕೆ ಭೇಟಿ ನೀಡಿದ ಡಾ.ನಾಗಲಕ್ಷ್ಮೀ ಚೌಧರಿ ಅವರು ಇನ್ನು ಹೆಚ್ಚಿನ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಬಾಗಿಲು, ನಲ್ಲಿಗಳು ಸುಸ್ಥಿತಿಯಲ್ಲಿಡಬೇಕು ಎಂದು ವ್ಯೆದ್ಯಾಧಿಕಾರಿಗಳಿಗೆ ಸೂಚಿಸಿದರು. ಈ ವೇಳೆ ರೋಗಿಗಳ ಜತೆ ಮಾತನಾಡಿ, ವ್ಯೆದ್ಯರು ಚಿಕಿತ್ಸೆಗೆ ಹಣ ಕೇಳುತ್ತಾರೆಯೇ, ಊಟ, ತಿಂಡಿ ಗುಣಮಟ್ಟದಿಂದ ಸಿಗುತ್ತಿದೆಯೇ ಎಂದು ಪ್ರಶ್ನಿಸಿದ್ದಲ್ಲದೆ ಆರೋಗ್ಯದ ಬಗ್ಗೆ ಪ್ರತಿಯೊಬ್ಬರೂ ಕಾಳಜಿ ವಹಿಸಬೇಕು. ಸ್ತನ ಕ್ಯಾನ್ಸರ್ ಲಕ್ಷಣಗಳು ಕಂಡು ಬಂದರೆ ಕೂಡಲೇ ಆಸ್ಪತ್ರೆಗೆ ತೆರಳಬೇಕು. ನಿರ್ಲಕ್ಷ್ಯದಿಂದ ಜೀವ ಹಾನಿಗೊಳಗಾಗುತ್ತದೆ ಎಂದು ಕಿವಿಮಾತು ಹೇಳಿದರು.
ಹಾಲು, ಬ್ರೆಡ್ ಸಕಾಲಕ್ಕೆ ನೀಡುತ್ತಿಲ್ಲ: ಆರೋಗ್ಯ ರಕ್ಷಣಾ ಸಮಿತಿ ಸದಸ್ಯ ಕುಮಾರಸ್ವಾಮಿ ಮಾತನಾಡಿ, ರೋಗಿಗಳಿಗೆ ಹಾಲು, ಬ್ರೆಡ್ ಸಕಾಲಕ್ಕೆ ನೀಡುತ್ತಿಲ್ಲ. ಬೆಳಗ್ಗೆ 10 ಗಂಟೆ ಬಳಿಕ ನೀಡುತ್ತಿದ್ದಾರೆ. ನೀರಿನ ತೊಟ್ಟಿ ಸ್ವಚ್ಛವಾಗಿಲ್ಲ ಎಂದು ದೂರಿದರು. ಈ ವೇಳೆ ಡಿಎಚ್‌ಒ ಡಾ.ಚಿದಂಬರಂ ಅವರಿಗೆ ಪರಿಶೀಲಿಸಿ ಕ್ರಮವಹಿಸಿ ಎಂದು ಆಯೋಗದ ಅಧ್ಯಕ್ಷರು ಸೂಚನೆ ನೀಡಿದರು.