

ಬೆಂಗಳೂರು: ಚಾಲಕರಿಗೆ ಮೀಸಲಿಟ್ಟಿದ್ದ ಅನುದಾನವನ್ನು ಮರಾಠ ಅಭಿವೃದ್ಧಿ ಪ್ರಾಧಿಕಾರಕ್ಕೆ ನೀಡಿರುವುದನ್ನು ಇಂಡಿಯನ್ ವೆಹಿಕಲ್ಸ್ ಡ್ರೈವರ್ಸ್ ಟ್ರೇಡ್ ಯೂನಿಯನ್ ತೀವ್ರವಾಗಿ ಖಂಡಿಸಿದೆ.
ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಚಾಲಕರ ದಿನಾಚರಣೆ ಹಾಗೂ ಸಾರಥಿ ಸೂರಿಗೆ 60 ಕೋಟಿ ರೂ. ಅನುದಾನವನ್ನು ಬಜೆಟ್‌ನಲ್ಲಿ ಮೀಸಲಿಟ್ಟಿದ್ದರು. ಆದರೆ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವು ಮರಾಠ ಅಭಿವೃದ್ಧಿ ಪ್ರಾಧಿಕಾರಕ್ಕೆ 50 ಕೋಟಿ ರೂ. ನೀಡಿರುವುದು ಸರಿಯಲ್ಲ. ಕೂಡಲೇ, ಈ ಅನುದಾವನ್ನು ವಾಪಸ್ ಪಡೆಯಬೇಕು. ಇಲ್ಲದಿದ್ದಲ್ಲಿ, ಉಗ್ರ ಹೋರಾಟ ನಡೆಸಲಾಗುವುದು. ಮಹಾರಾಷ್ಟ್ರ ನೋಂದಣಿಯ ವಾಹನಗಳನ್ನು ಕರ್ನಾಟಕಕ್ಕೆ ಪ್ರವೇಶಿದಂತೆ ತಡೆಹಿಡಿಯಲಾಗುವುದು ಎಂದು ಯೂನಿಯನ್ ಅಧ್ಯಕ್ಷ ಗಂಡಸಿ ಸದಾನಂದಸ್ವಾಮಿ ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.
ಮಹಾಮಾರಿ ಕರೊನಾದಿಂದಾಗಿ ಟ್ಯಾಕ್ಸಿಗಳಿಗೆ ಸರಿಯಾಗಿ ಬಾಡಿಗೆ ಸಿಗದೆ ಸಾವಿರಾರು ಚಾಲಕರು ಊರು ಬಿಟ್ಟಿದ್ದಾರೆ. ಸಾಲದ ಕಂತು ಕಟ್ಟಲಾಗದೆ ಹಾಗೂ ಸಾಲ ನೀಡಿರುವ ಕಂಪನಿಗಳು ಕಿರುಕುಳಕ್ಕೆ ಬೇಸತ್ತು ಒಪ್ಪತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಚಾಲಕರ ಸಂಕಷ್ಟವನ್ನು ಬಗೆಹರಿಸುವ ಬದಲು ಮರಾಠ ಅಭಿವೃದ್ಧಿಗೆ ಅನುದಾನ ನೀಡಿರುವುದು ಖಂಡನೀಯ ಎಂದು ಸದಾನಂದಸ್ವಾಮಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.