ನಿತ್ಯ 12 ಸಾವಿರ ಮಂದಿ ರಕ್ತದ ಕೊರತೆಯಿಂದ ಸಾವು: ಲೋಕಾಯುಕ್ತ ನ್ಯಾ.ಬಿ.ಎಸ್. ಪಾಟೀಲ್ ಕಳವಳ

Red cross
Published on

ಬೆಂಗಳೂರು: ರಕ್ತದಾನ ಅತ್ಯಂತ ಶ್ರೇಷ್ಠದಾನವಾಗಿದ್ದು, ಈ ನಿಟ್ಟಿನಲ್ಲಿ ಯುವಜನರು ಸ್ವಯಂಪ್ರೇರಿತರಾಗಿ ರಕ್ತದಾನ ಮನೋಭಾವ ಮೆರೆಯಬೇಕು ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಹೇಳಿದ್ದಾರೆ.

ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕರ್ನಾಟಕ ರಾಜ್ಯ ಶಾಖೆಯ ಜೀನ್ ಹೆನ್ರಿ ಡ್ಯುನಾಂಟ್ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ದೇಶದಲ್ಲಿ ಪ್ರತಿನಿತ್ಯ 12 ಸಾವಿರ ಮಂದಿ ರಕ್ತದ ಕೊರತೆಯಿಂದ ಸಾವನ್ನಪ್ಪುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ರಕ್ತನಿಧಿ ಕೇಂದ್ರಗಳು ದಿನದ 24 ಗಂಟೆಯೂ ಸೇವೆ ಒದಗಿಸಲಿದೆ. ಇದರಲ್ಲಿ ಕ್ಷಾಂತರ ನಿಸ್ವಾರ್ಥ ಸ್ವಯಂಸೇವಕರು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಸಂಸ್ಥೆಯ ಸೇವಾ ಕಾರ್ಯಗಳ ಕುರಿತು ಪ್ರಶಂಸೆ ವ್ಯಕ್ತಪಡಿಸಿದರು.

ರಾಜ್ಯಾದ್ಯಂತ ರಕ್ತನಿಧಿ: ಭಾರತೀಯ ರೆಡ್ ಕ್ರಾಸ್ ಸಂಸ್ಥೆ ರಾಜ್ಯ ಶಾಖೆಯ ಸಭಾಪತಿ ವಿಜಯ್ ಕುಮಾರ್ ಪಾಟೀಲ್ ಶಾವಂತಗೇರಾ ಮಾತನಾಡಿ, ಸಂಸ್ಥೆಯು ರಾಜ್ಯದಲ್ಲಿ 9 ರಕ್ತನಿಧಿಗಳನ್ನು ಹೊಂದಿದ್ದು, ಮುಂದಿನ ದಿನಗಳಲ್ಲಿ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ರಕ್ತ ನಿಧಿಗಳನ್ನು ಸ್ಥಾಪಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

25ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿದ ಶ್ರೀನಿವಾಸ್ ಎಸ್. ಪಂಡಿತ್ (ಕೊಪ್ಪಳ), ದೇವದಾಸ ಪಾಟ್ಕರ್ (ಉಡುಪಿ), ಬಿ.ಪಿ. ರಾಜು (ಮಂಡ್ಯ), ಆರ್. ಹರೀಶ್ ಕುಮಾರ್ (ಧಾರವಾಡ), ಮೆಹಬೂಬ್ ಬಾಷಾ (ಬಳ್ಳಾರಿ), ಕೆ.ಎ. ರಮೇಶ್ (ಶಿವಮೊಗ್ಗ), ಅವನೀಶ್ (ದಕ್ಷಿಣ ಕನ್ನಡ) ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ರೆಡ್ ಕ್ರಾಸ್ ಸಂಸ್ಥೆ ರಾಜ್ಯ ಶಾಖೆಯ ಉಪಾಧ್ಯಕ್ಷ ಗೋಪಾಲ್ ಹೊಸೂರ್, ಉಪ ಸಭಾಪತಿ ಆನಂದ್ ಎಸ್. ಜಿಗಜಿನ್ನಿ, ಕೋಶಾಧ್ಯಕ್ಷ ಯತೀಶ್ ಬೈಕಂಪಾಡಿ, ರಕ್ತದಾನ ಉಪಸಮಿತಿ ನಿರ್ದೇಶಕ ಟಿ.ಎನ್. ರವಿಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net