

ಆಲೂರು: ಜಗತ್ತಿನ ವಿವಿಧ ದೇಶಗಳಿಗೆ ಮಾದರಿಯಾಗಬಲ್ಲ ಸಾಂಸ್ಕೃತಿಕ ಹಿರಿಮೆ ಭಾರತದ್ದು ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
ಪಟ್ಟಣದ ಪ್ರಥಮ ದರ್ಜೆ ಕಾಲೇಜಿನಲ್ಲಿ ಐಕ್ಯೂಎಸಿ ಹಾಗೂ ಸಾಂಸ್ಕೃತಿಕ ವೇದಿಕೆ ವತಿಯಿಂದ ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ ಎಂಬ ಶೀರ್ಷಿಕೆಯಡಿಯಲ್ಲಿ ಆಯೋಜಿಸಿದ್ದ ಜಾನಪದ ಉತ್ಸವ-2025ರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಭಾರತದ ಪ್ರತಿಯೊಂದು ಸಾಂಸ್ಕೃತಿಕ ಆಚರಣೆಗೂ ನಿರ್ದಿಷ್ಟ ಅರ್ಥವಿದೆ. ಈ ಕಾರಣಕ್ಕಾಗಿಯೇ ಭಾರತದ ಸಾಂಸ್ಕೃತಿಕ ಆಚರಣೆಗಳು ಉಡುಗೆ ತೊಡುಗೆಗಳು ಜಗತ್ತಿನ ವಿವಿಧ ದೇಶಗಳನ್ನು ಸೆಳೆದಿವೆ. ಪ್ರಾಚೀನ ಭಾರತದ ಇತಿಹಾಸ, ಕೌಟುಂಬಿಕ ಹಿನ್ನೆಲೆಗಳತ್ತ ದೃಷ್ಟಿ ಹಾಯಿಸಿದಾಗ ಇವು ಅವಿಭಕ್ತ ಕುಟುಂಬಗಳ ಹಿತಾಸಕ್ತಿಗೆ ಹೆಚ್ಚಿನ ಮಹತ್ವ ಮತ್ತು ರಕ್ಷಣೆ ನೀಡುತ್ತ ಬಂದಿರುವುದನ್ನು ನಾವು ಕಾಣಬಹುದು. ಅವಿಭಕ್ತ ಕುಟುಂಬಗಳು ಆರ್ಥಿಕವಾಗಿ, ಸಾಮಾಜಿಕವಾಗಿ ಹೆಚ್ಚು ಸ್ವಾವಲಂಬಿಯಾಗಿದ್ದವು. ಆದರೆ, ಇಂದು ಎಲ್ಲೋ ಮನಸ್ಸಿನ ಮೂಲೆಯಲ್ಲಿ ಅಡಗಿದ ಸಂಶಯ, ಅಹಂಕಾರ, ಅಸೂಯೆ ಎಂಬ ಮಾಯಾಜಾಲದಲ್ಲಿ ಸಿಲುಕಿ, ಒಟ್ಟಾಗಿ ಬಾಳಿ ಬದುಕ ಬೇಕಾದ ಅವಿಭಕ್ತ ಕುಟುಂಬಗಳು ವಿಭಕ್ತವಾಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಹಾಸನ ಜಿಲ್ಲಾ ಜಾನಪದ ಪರಿಷತ್ತಿನ ಅಧ್ಯಕ್ಷ ಡಾ.ಹಂಪನಹಳ್ಳಿ ತಿಮ್ಮೇಗೌಡ ಮಾತನಾಡಿ, ನಮ್ಮ ನಾಡಿನ ಸಂಸ್ಕೃತಿಯನ್ನು ಪ್ರತಿಬಿಂಬಿಸುವಂತಿದ್ದ ಅಪ್ಪಟ ಗ್ರಾಮೀಣ ಕ್ರೀಡೆಗಳು ದಿನದಿಂದ ದಿನಕ್ಕೆ ನಶಿಸಿ ಹೋಗುತ್ತಿದ್ದು, ಮುಂದಿನ ದಿನಗಳಲ್ಲಿ ಇತಿಹಾಸದ ಪುಟವನ್ನು ಸೇರುವ ಎಲ್ಲ ಸ್ಪಷ್ಟ ಲಕ್ಷಣಗಳು ಕಂಡುಬರುತ್ತಿದೆ. ಆದ್ದರಿಂದ ಗ್ರಾಮೀಣ ಸೊಗಡು, ಸಂಸ್ಕೃತಿಯನ್ನು ನಶಿಸಿ ಹೋಗಲು ಬಿಡಬಾರದು. ಹಳ್ಳಿಗಳಲ್ಲಿ ನಡೆಯುವ ಉತ್ಸವ, ಜಾತ್ರೋತ್ಸವ ಮುಂತಾದ ಸಂಸ್ಕೃತಿ ಗ್ರಾಮೀಣ ಭಾಗದ ಸೊತ್ತಾಗಿದೆ. ಗ್ರಾಮೀಣ ಭಾಗದಲ್ಲಿ ನಡೆಯುವ ಉತ್ಸವಗಳಿಗೆ ಹಲವಾರು ಅರ್ಥಗಳಿರುತ್ತದೆ. ಈ ದಿಸೆಯಲ್ಲಿ ನೂರಾರು ವರ್ಷಗಳಿಂದ ಹಿರಿಯರು ಹಾಕಿಕೊಟ್ಟ ಗ್ರಾಮೀಣ ಭಾಗದ ಆಚಾರ, ವಿಚಾರಗಳನ್ನು ಮುಂದಿನ ಪೀಳಿಗೆಗೆ ಬೆಳೆಸಿಕೊಂಡು ಹೋಗುವಂತೆ ಸಲಹೆ ನೀಡಿದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಆಲೂರು ಬಸ್ ನಿಲ್ದಾಣದಿಂದ ಕಾಲೇಜಿನವರೆಗೂ ಎತ್ತಿನಗಾಡಿಯ ಮೆರವಣಿಗೆ ನಡೆಯಿತು. ಈ ಸಂದರ್ಭ ಕಾಲೇಜು ವಿದ್ಯಾರ್ಥಿನಿಯರು ಕುಂಭಕಳಸ ಹೊತ್ತು ಸಾಗಿದರೆ ವಿದ್ಯಾರ್ಥಿಗಳು ಡೊಳ್ಳು ಕುಣಿತಕ್ಕೆ ಹೆಜ್ಜೆ ಹಾಕಿದರು, ವೇದಿಕೆ ಕಾರ್ಯಕ್ರಮದಲ್ಲಿ ಶಿಕ್ಷಕಿ ವೇದಾವತಿ ಜಾನಪದ ಹಾಡುಗಳನ್ನು ಹಾಡುವ ಮೂಲಕ ಎಲ್ಲರ ಗಮನ ಸೆಳೆದರು.
ಇದೇ ಕಾಲೇಜಿನಲ್ಲಿ ಸುದೀರ್ಘ ಸೇವೆ ಸಲ್ಲಿಸಿ ಬೇರೆಡೆಗೆ ವರ್ಗಾವಣೆಯಾದ ಉಪನ್ಯಾಸಕ ಮೋಹನ್ ಕುಮಾರ್, ಶಿವಪ್ರಸಾದ್, ಕರವೇ ಜಿಲ್ಲಾ ಕಾರ್ಯದರ್ಶಿ ರಘು ಪಾಳ್ಯ ಅವರನ್ನು ಸನ್ಮಾನಿಸಲಾಯಿತು.
ನಂತರ ವಿಶ್ವ ಜಲದಿನ-2025 ಅಂಗವಾಗಿ ಜಲ ಸಂರಕ್ಷಣೆ ಕುರಿತು ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಕಾರ್ಯಕ್ರಮದಲ್ಲಿ ಕಾಲೇಜು ಪ್ರಾಂಶುಪಾಲ ಟಿ.ಪಿ ಪುಟ್ಟರಾಜು, ಉಪನ್ಯಾಸಕ ರಾಘವೇಂದ್ರ, ರಮೇಶ್, ವೆಂಕಟೇಶ್, ಪುರುಷೋತ್ತಮ್, ಮಾರುತಿ, ನಟರಾಜ್, ಗ್ರಾಮ ಪಂಚಾಯಿತಿ ಸದಸ್ಯ ನಂಜುಂಡಪ್ಪ, ಮೋಹನ್ ಕುಮಾರ್, ನಂಜೇಶಣ್ಣ, ಹರೀಶ್, ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯ ಬಾಲಲೋಚನ ವಿದ್ಯಾರ್ಥಿ ಇದ್ದರು.