

ಬೈಂದೂರು: ದೇಶದ ಗಡಿಯಲ್ಲಿ ಎದುರಿನಿಂದ ಶತ್ರುಗಳು, ಆಂತರಿಕವಾಗಿ ಉಗ್ರವಾದಿಗಳ ಜತೆಯಲ್ಲಿ ಹವಾಮಾನ ವೈಪರೀತ್ಯದ ಕಠಿಣ ಸವಾಲು ಎದುರಿಸುವ ಸೈನಿಕರಿಗೆ ನಾಗರಿಕ ಸಮಾಜದ ಆದರ ಮನೋಬಲ ಹೆಚ್ಚಿಸುತ್ತದೆ. ಭಾರತೀಯ ಸೇನೆಯಿಂದ ಸಾಮಾನ್ಯ ನಾಗರಿಕರ ಬದುಕು ನೆಮ್ಮದಿಯುತವಾಗಿದೆ ಎಂದು ಮಾಜಿ ಸೈನಿಕ ಬೈಂದೂರು ಚಂದ್ರಶೇಖರ ನಾವಡ ಅಭಿಪ್ರಾಯಪಟ್ಟರು.
ಶಿರೂರಿನ ಜೋಗೂರು ಗ್ರಾಮದಲ್ಲಿ ಸಮರ ಭೈರವ ವೀರ ಸೈನಿಕ ಸ್ಮರಣ ಸಮಿತಿ ವತಿಯಿಂದ ಸೈನಿಕರನ್ನು ಸನ್ಮಾನಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಮಿತಿ ವತಿಯಿಂದ ಮಾಜಿ ಸೈನಿಕರಾದ ಗಣಪತಿ ಗೌಡ, ಮಹಾಬಲ ಮದ್ದೋಡಿ, ಬಾಬು ಪೂಜಾರಿ, ಪ್ರಭಾಕರ ನಾಯಕ್, ಜಾನ್ಸಿ ಥಾಮಸ್, ಗಣಪತಿ ಖಾರ್ವಿ, ರಾಘವೇಂದ್ರ ಖಾರ್ವಿ, ಚಂದ್ರಶೇಖರ ನಾವಡ ಅವರನ್ನು ಸನ್ಮಾನಿಸಲಾಯಿತು. ಸೈನಿಕರನ್ನು ಗೌರವಿಸುವ ಕಾರ್ಯಕ್ರಮದಿಂದ ಸಮಾಜಕ್ಕೆ ಒಳ್ಳೆಯ ಸಂದೇಶ ಹೋದಂತಾಗಿದೆ ಎಂದು ಸನ್ಮಾನಿತ ಸೈನಿಕರು ತಮ್ಮ ಅನಿಸಿಕೆ ಹಂಚಿಕೊಂಡರು. ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು.
ಸಮಿತಿ ಅಧ್ಯಕ್ಷ ಮಧುಕರ ಬಿಲ್ಲವ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜೇಶ್ ತೊಂಡೆ ಮಕ್ಕಿ ಕಾರ್ಯಕ್ರಮ ನಿರೂಪಿಸಿದರು. ಓಂಕಾರ ಕಲಾವಿದರು ಕನ್ನುಕೇರಿ ತೆಕ್ಕಟ್ಟೆ ಅವರಿಂದ ನಗೆ ನಾಟಕ ಪ್ರದರ್ಶನಗೊಂಡಿತು.