

ಹನೂರು: ತಾಲೂಕಿನ ಪೆದ್ದನಪಾಳ್ಯದ ಗ್ರಾಮಸ್ಥರು ಶುಕ್ರವಾರ ಗ್ರಾಮದ ದೇಗುಲದ ಮುಂಭಾಗ ಶಿಕ್ಷಕರು ಹಾಗೂ ಮಕ್ಕಳೊಂದಿಗೆ ಸ್ವಾತಂತ್ರ್ಯ ದಿನವನ್ನು ಸಂಭ್ರಮದಿಂದ ಆಚರಿಸಿದರು.
ಗ್ರಾಮದಲ್ಲಿ ಶಾಲಾ ಜಾಗಕ್ಕೆ ಸಂಬಂಧಿಸಿದಂತೆ ಮಾರ್ಕಂಡ ಎಂಬುವರು ದಾವೆ ಹೂಡಿದ್ದು, ಪ್ರಕರಣ ನ್ಯಾಯಾಲಯದಲ್ಲಿದೆ. ಹಾಗಾಗಿ ಶಾಲೆಯು ತೀವ್ರ ಶಿಥಿಲಗೊಂಡಿದ್ದರೂ ಕೊಠಡಿ ನಿರ್ಮಿಸಲು ಸಾಧ್ಯವಾಗಿಲ್ಲ. ಶಾಲಾ ಆವರಣದಲ್ಲಿ ಗಿಡಗಂಟಿಗಳು ಬೆಳೆದು ನಿಂತಿದ್ದರೂ ತೆರೆವುಗೊಳಿಸಲು ಸಾಧ್ಯವಾಗಿಲ್ಲ. ಇತ್ತ ಕುಡಿಯುವ ನೀರು ಹಾಗೂ ಶೌಚಗೃಹವಿಲ್ಲದ ಪರಿಣಾಮ ಬೇಸತ್ತ ಪಾಲಕರು ಕಳೆದ 4 ದಿನಗಳಿಂದಲೂ ಮಕ್ಕಳನ್ನು ಶಾಲೆಗೆ ಕಳಹಿಸದೇ ಪ್ರತಿಭಟನೆ ನಡೆಸಿದ್ದರು. ಜತೆಗೆ ಮಕ್ಕಳನ್ನು ಶಾಲೆಗೆ ಕಳಹಿಸದೇ ಸ್ವಾತಂತ್ರ್ಯ ದಿನಾಚರಣೆಯನ್ನು ಬಹಿಷ್ಕರಿಸುವುದಾಗಿ ಎಚ್ಚರಿಸಿದ್ದರು.
ಈ ಹಿನ್ನೆಲೆ ಗುರುವಾರ ಜಿಪಂ ಸಿಇಒ ಮೋನಾರೋತ್, ಡಿಡಿಪಿಐ ರಾಮಚಂದ್ರರಾಜೇ ಅರಸ್, ತಹಸೀಲ್ದಾರ್ ಕೆ.ಎನ್ ಚೈತ್ರಾ, ಬಿಇಒ ಗುರುಲಿಂಗಯ್ಯ ಹಾಗೂ ತಾಪಂ ಇಒ ಉಮೇಶ್ ಅವರು ಗ್ರಾಮಕ್ಕೆ ಭೇಟಿ ನೀಡಿದ್ದರು.
ಈ ವೇಳೆ ಕೋರ್ಟ್‌ನಲ್ಲಿರುವ ಶಾಲಾ ಜಾಗದ ಸಮಸ್ಯೆಯನ್ನು ಬಗೆಹರಿಸುವಂತೆ ಗ್ರಾಮಸ್ಥರು ಮನವಿ ಮಾಡಿದ್ದರು. ಹಾಗೆಯೇ ಶಿಕ್ಷಣ ಪಡೆಯಲು ಮಕ್ಕಳನ್ನು ಪರ್ಯಾಯ ಶಾಲೆಗೆ ಕಳಹಿಸುವುದಾಗಿ ಒಪ್ಪಿಕೊಂಡಿದ್ದರು. ಶಾಲೆ ನಡೆಸುವ ಸ್ಥಳದ ತೀರ್ಮಾನವನ್ನು ಗ್ರಾಮಸ್ಥರಿಗೆ ಬಿಡಲಾಗಿದೆ. ಈ ವೇಳೆ ಗ್ರಾಮಸ್ಥರು ಪ್ರಸ್ತುತ ಶಾಲೆಯಲ್ಲಿ ಆಚರಿಸುವ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸುವುದಿಲ್ಲ. ಬದಲಾಗಿ ದೇಗುಲದ ಮುಂಭಾಗ ಆಚರಿಸುವುದಾಗಿ ಅಧಿಕಾರಿಗಳ ಮುಂದೆ ತಿಳಿಸಿದ್ದರು. ಇದಕ್ಕೆ ಸಮ್ಮತಿಯನ್ನು ನೀಡಲಾಗಿತ್ತು. ಅದರಂತೆಯೇ ಶುಕ್ರವಾರ ದೇಗುಲದ ಮುಂಭಾಗ ಗ್ರಾಮಸ್ಥರು ಶಿಕ್ಷಕರು ಹಾಗೂ ಮಕ್ಕಳ ಜತೆಗೂಡಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದರು. ಇದಕ್ಕೂ ಮುನ್ನ ಶಾಲೆಯಲ್ಲಿ ಶಿಕ್ಷಕರು ಹಾಗೂ ಅಡುಗೆ ಸಿಬ್ಬಂದಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದ್ದರು.