

ರಾಮನಗರ : ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಪೌರ ನೌಕರರು ಕರ್ತವ್ಯಕ್ಕೆ ಹಾಜರಾಗದೆ ಮಂಗಳವಾರದಿಂದ ರಾಜ್ಯ ಪೌರ ನೌಕರರ ಜಿಲ್ಲಾ ಸಂಘದ ನೇತೃತ್ವದಲ್ಲಿ ರಾಮನಗರ ನಗರಸಭೆ ಕಚೇರಿ ಮುಂದೆ ಧರಣಿ ಕುಳಿತು ಅನಿರ್ದಿಷ್ಟಾವಧಿ ಮುಷ್ಕರ ಪ್ರಾರಂಭಿಸಿದ್ದಾರೆ.
ರಾಜ್ಯದ ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ನೌಕರರನ್ನು ರಾಜ್ಯ ಸರ್ಕಾರಿ ನೌಕರರು ಎಂದು ಪರಿಗಣಿಸಬೇಕು. ಜ್ಯೋತಿ ಸಂಜೀವಿನಿ, ಕೆ.ಜಿ.ಐ.ಡಿ, ಸೇರಿ ಸರ್ಕಾರಿ ನೌಕರರಿಗೆ ಸಲ್ಲುವ ಎಲ್ಲ ಸೌಲಭ್ಯಗಳನ್ನು ವಿಸ್ತರಿಸಬೇಕು. ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ನೀರು ಸರಬರಾಜು ವ್ಯವಸ್ಥೆಯ ನೌಕರರು, ವಾಹನ ಚಾಲಕರು, ಲೋಡರ್‌ಗಳು, ಕ್ಲೀನರ್‌ಗಳು, ಗಾರ್ಡನರ್‌ಗಳು, ಸ್ಯಾನಿಟರಿ ಸೂಪರ್ ವೈಸರ್‌ಗಳು, ಯುಜಿಡಿ ಸಹಾಯಕರು ಸೇರಿ ವಿವಿಧ ವೃಂದದ ಹೊರಗುತ್ತಿಗೆ ನೌಕರರನ್ನು ನೇರ ಪಾವತಿಗೆ ಒಳಪಡಿಸಬೇಕು ಎಂದರು.
ದಿನಗೂಲಿ ನೌಕರರನ್ನು ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಹಾಗೂ ಖಾಯಂಗೊಳಿಸಬೇಕು. ಎಲ್ಲ ನೌಕರರಿಗೆ ಎಸ್‌ಎಫ್‌ಸಿ ಮುಕ್ತನಿಧಿಯಿಂದ ವೇತನ ನೀಡಬೇಕು ಸೇರಿ ಇನ್ನಿತರ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದೇವೆ. ಆದರೆ, ತಮ್ಮ ನ್ಯಾಯುತವಾದ ಬೇಡಿಕೆಗಳು ಈವರೆವಿಗೂ ಈಡೇರಿಲ್ಲ. ಮುಖ್ಯಮಂತ್ರಿಗಳು, ಪೌರಾಡಳಿತ ಸಚಿವರು, ನಗರಾಭಿವೃದ್ಧಿ ಸಚಿವರು, ಇಲಾಖೆಗಳ ಕಾರ್ಯದರ್ಶಿಗಳು, ಪೌರಾಡಳಿತ ನಿರ್ದೇಶಕರು ಸೇರಿ ವಿವಿಧ ಹಂತಗಳ ಅಧಿಕಾರಿಗಳನ್ನು ಹಲವು ಮನವಿ ಕೊಟ್ಟರೂ ಸ್ಪಂದನೆ ಸಿಕ್ಕಿಲ್ಲ. ಹೀಗಾಗಿ ಅನಿವಾರ್ಯವಾಗಿ ಅನಿರ್ದಿಷ್ಟಾವಧಿಗೆ ಮುಷ್ಕರ ಆರಂಭಿಸಿದ್ದೇವೆ ಎಂದು ಪ್ರತಿಭಟನಾ ನೌಕರರು ತಿಳಿಸಿದ್ದಾರೆ.
ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸರ್ಕಾರಕ್ಕೆ ಅಂತಿಮವಾಗಿ ಮಾಡಿಕೊಂಡ ಮನವಿಗೆ ಸ್ಪಂದಿಸಲು 45 ದಿನಗಳ ಗಡುವು ನೀಡಲಾಗಿತ್ತು. ಆಗ ತೋಳಿಗೆ ಕಪ್ಪುಪಟ್ಟಿ ಧರಿಸಿ ಹಾಗೂ ಮೇಣದಬತ್ತಿ, ಪಂಜಿನ ಮೆರವಣಿಗೆಯನ್ನು ನಡೆಸಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದ್ದೆವು. ಆದರೂ ಸರ್ಕಾರ ನಮ್ಮ ಮನವಿಗೆ ಸ್ಪಂದಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕಚೇರಿಗಳಲ್ಲಿ ಕೆಲಸ ಮಾಡುವ ನೌಕರರಿಗೆ ಸಂಜೀವಿನಿ ಚಿಕಿತ್ಸಾ ಸೌಲಭ್ಯವಿದೆ. ಆದರೆ, ಸಾಂಕ್ರಾಮಿಕ ರೋಗಗಳನ್ನು ಲೆಕ್ಕಿಸದೆ ಮಳೆ, ಗಾಳಿ, ಬಿಸಿಲಿನಲ್ಲೂ ಶ್ರಮ ಪಡುತ್ತಿರುವ ಪೌರ ಕಾರ್ಮಿಕರರಿಗೆ, ನೀರು ಸರಬರಾಜು ನೌಕರರು, ಯುಜಿಡಿ ನೌಕರರಿಗೆ ಈ ನಗದು ರಹಿತ ಆರೋಗ್ಯ ಸೌಲಭ್ಯವಿಲ್ಲ. ಈ ಕಾರಣದಿಂದ ನಮ್ಮ ಬೇಡಿಕೆ ಈಡೆರುವವರೆಗೂ ಅನಿರ್ಧಿಷ್ಟಾವಧಿ ಮುಷ್ಕರ ನಡೆಸುತ್ತೇವೆ ಎಂದರು.
ಪೌರ ನೌಕರರ ಸಂಘದ ಜಿಲ್ಲಾಧ್ಯಕ್ಷ ವಿ. ವೆಂಕಟೇಶ್, ರಾಮನಗರ ಘಟಕದ ಅಧ್ಯಕ್ಷ ದೇವೇಂದ್ರ, ಪ್ರಮುಖರಾದ, ಲಕ್ಷ್ಮೀದೇವಿ, ರೇಖಾ, ಕೆ.ಎಸ್. ನಾಗರಾಜು, ದಸ್ತಗೀರ್, ಗುರುಸ್ವಾಮಿ, ರಾಮು, ರಾಜು, ಗಂಗಾ.ವಿ, ಚಂದ್ರ ಹಾಗೂ ಸಂಘದ ಪದಾಧಿಕಾರಿಗಳು, ಪೌರ ನೌಕರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.