ಗ್ರಾಮ ಆಡಳಿತ ಅಧಿಕಾರಿಗಳ ಅನಿರ್ಧಿಷ್ಟಾವಧಿ ಮುಷ್ಕರ

26 NMG 02 (6)
Published on

ನಾಗಮಂಗಲ: ಸೇವಾ ಹಾಗೂ ಮೂಲ ಸೌಲಭ್ಯಗಳನ್ನು ಈಡೇರಿಸುವಂತೆ ಹಾಗೂ ಕರ್ತವ್ಯದ ಒತ್ತಡವನ್ನು ನಿಲ್ಲಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ತಾಲೂಕು ಘಟಕದಿಂದ ಪಟ್ಟಣದ ಮಿನಿ ವಿಧಾನಸೌಧದ ಆವರಣದಲ್ಲಿ ಅನಿರ್ಧಿಷ್ಟಾವಧಿ ಮುಷ್ಕರ ನಡೆಯಿತು.


ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ಕಾರ್ಯಕಾರಿಣಿ ಸಭೆಯ ನಿರ್ಣಯದಂತೆ ಗುರುವಾರ ಬೆಳಗ್ಗೆಯಿಂದಲೇ ಕರ್ತವ್ಯಕ್ಕೆ ಗೈರು ಹಾಜರಾಗುವ ಮೂಲಕ ಕಪ್ಪು ಪಟ್ಟಿ ಧರಿಸಿ ಮೌನ ಮುಷ್ಕರ ನಡೆಸಿದರು. ಮುಷ್ಕರದ ನೇತೃತ್ವ ವಹಿಸಿದ್ದ ಸಂಘದ ಜಿಲ್ಲಾಧ್ಯಕ್ಷ ಹಾಗೂ ರಾಜ್ಯ ಸಂಘದ ಉಪಾಧ್ಯಕ್ಷ ಹರೀಶ್ ಮಾತನಾಡಿ, ಗ್ರಾಮ ಆಡಳಿತಾಧಿಕಾರಿಗಳಿಗೆ ಅತ್ಯಗತ್ಯವಿರುವ ವೃತ್ತಕ್ಕೊಂದು ಕಚೇರಿ, ಗಣಕೀಕೃತ ಕರ್ತವ್ಯ ನಿರ್ವಹಿಸಲು ಅಗತ್ಯವಿರುವ ಲ್ಯಾಪ್‌ಟಾಪ್ ಹಾಗೂ ಪ್ರಿಂಟರ್ ಸೇರಿದಂತೆ ಕರ್ತವ್ಯಕ್ಕೆ ಅಗತ್ಯವಿರುವ ಮೂಲ ಸೌಲಭ್ಯಗಳಿಲ್ಲದೆ ಅರಳಿಕಟ್ಟೆ ಅಥವಾ ಜಗಲಿಗಳೇ ನಮ್ಮ ಕರ್ತವ್ಯ ಸ್ಥಳಗಳಾಗಿರುವುದು ವಿಪರ್ಯಾಸ ಎಂದರು.


ಪ್ರಸ್ತುತ ಕಾಲಘಟ್ಟಕ್ಕೆ ಅನುಗುಣವಾಗಿ ಸುಸಜ್ಜಿತ ಕಚೇರಿ, ಲ್ಯಾಪ್‌ಟಾಪ್ ಹಾಗೂ ಸ್ಕ್ಯಾನರ್‌ನೊಂದಿಗೆ ಪ್ರಿಂಟರ್, ಸಿಮ್ ಮತ್ತು ಡೆಟಾನೊಂದಿಗೆ ಮೊಬೈಲ್ ಸೇರಿದಂತೆ ಕರ್ತವ್ಯಕ್ಕೆ ಅಗತ್ಯವಿರುವ ಮೂಲ ಸೌಲಭ್ಯಗಳನ್ನು ಒದಗಿಸಬೇಕು. ಕೆಸಿಎಸ್‌ಆರ್ ನಿಯಮಾವಳಿಯಂತೆ ರಜಾ ದಿನಗಳಲ್ಲಿಯೂ ಹಾಜರಾಗುವಂತೆ ಮೆಮೋ ಹಾಕುವುದನ್ನು ನಿಲ್ಲಿಸಬೇಕು. ನ್ಯಾಯಾಲಯದ ತೀರ್ಪಿನಂತೆ ಪ್ರಥಮ ದರ್ಜೆ ಸಹಾಯಕ ಅಥವಾ ರಾಜಸ್ವ ನಿರೀಕ್ಷಕ ಹುದ್ದೆಗಳಿಗೆ ಪದೋನ್ನತಿ ನೀಡಲು ಕ್ರಮ ವಹಿಸಬೇಕು. ಅಂತರ ಜಿಲ್ಲಾ ಪತಿ-ಪತ್ನಿ ಪ್ರಕರಣಗಳ ವರ್ಗಾವಣೆಗಳಿಗೆ ಆಧ್ಯತೆ ನೀಡಬೇಕು. ಕರ್ತವ್ಯದ ಮತ್ತು ಕರ್ತವ್ಯ ಮುಗಿದ ನಂತರದ ಸಮಯದಲ್ಲಿ ನಡೆಸಲಾಗುವ ವರ್ಚುವಲ್ ಸಭೆಗಳನ್ನು ನಿಷೇಧಿಸಬೇಕು. ಪ್ರಕೃತಿ ವಿಕೋಪದಿಂದ ಆಗಬಹುದಾದ ವಾಸದ ಮನೆಗಳ ಹಾನಿ ಪ್ರಕರಣಗಳ ಜವಾಬ್ದಾರಿಯಿಂದ ಕೈಬಿಡಬೇಕು ಹಾಗೂ 500.00 ರೂ. ಗಳ ಪ್ರಯಾಣ ಭತ್ಯೆಯನ್ನು ರೂ.3000 ರೂ.ಗೆ ಹೆಚ್ಚುವರಿ ಮಾಡುವ ಜತೆಗೆ ಕಂದಾಯ ಇಲಾಖೆಯನ್ನೊರತುಪಡಿಸಿ ನೀಡಲಾಗಿರುವ ಇನ್ನಿತರ ಎಲ್ಲ ಹೆಚ್ಚುವರಿ ಕರ್ತವ್ಯಗಳಿಂದ ನಿಯುಕ್ತಿಗೊಳಿಸಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.


ಇದೇ ಸಂದರ್ಭ ಗ್ರೇಡ್ 2 ತಹಸೀಲ್ದಾರ್ ಹರ್ಷ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ತಾಲೂಕು ಘಟಕ ಗ್ರಾಮ ಆಡಳಿತಾಧಿಕಾರಿಗಳ ಸಂಘದ ಗೌರವಾಧ್ಯಕ್ಷ ಸಂತೋಷ್, ಉಪಾಧ್ಯಕ್ಷ ದೀಪಕ್, ಕಾರ್ಯದರ್ಶಿ ಬಸವರಾಜ್, ರಾಜಸ್ವ ನಿರೀಕ್ಷಕ ಮಧು, ಗ್ರಾಮ ಆಡಳಿತಾಧಿಕಾರಿಗಳಾದ ಲೋಹಿತ್, ಮಣಿಕಂಠ, ಪುಂಡಲಿಕ, ಸೌಮ್ಯಾ, ತೇಜಸ್ವಿನಿ ಸೇರಿದಂತೆ ತಾಲೂಕಿನ ಎಲ್ಲ ಗ್ರಾಮ ಆಡಳಿತಾಧಿಕಾರಿಗಳು ಮುಷ್ಕರದಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net