

ಸಿದ್ದಾಪುರ: ಗ್ರಾಪಂನ ಆರು ವೃಂದದ ನೌಕರರನ್ನು ಸಿ ಮತ್ತು ಡಿ ದರ್ಜೆಗೇರಿಸುವಂತೆ ಒತ್ತಾಯಿಸಿ ಗ್ರಾಪಂ ನೌಕರರ ಶ್ರೇಯೋಭಿವೃದ್ಧಿ ಸಂಘದಿಂದ ಬೆಂಗಳೂರಿನಲ್ಲಿ ನ. 27ರಿಂದ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ತಾಲೂಕು ಘಟಕದ ಅಧ್ಯಕ್ಷ ಗುರು ಎಂ. ನಾಯ್ಕ ಹೇಳಿದರು.
ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನ ವಿವಿಧ ಗ್ರಾಪಂಗಳಲ್ಲಿ ಕಾರ್ಯನಿರ್ವಹಿಸುವ ಬಿಲ್ ಕಲೆಕ್ಟರ್, ವಾಟರ್ ಮ್ಯಾನ್ , ಕ್ಲರ್ಕ್, ಡಾಟಾ ಎಂಟ್ರಿ ಆಪರೇಟರ್, ಕ್ಲೀನರ್ ಸೇರಿ ತಾಲೂಕಿನಲ್ಲಿ 210ಕ್ಕೂ ಹೆಚ್ಚು ನೌಕರರಿದ್ದಾರೆ, ಸರ್ಕಾರದಿಂದ ಅವರಿಗೆ ಯಾವುದೇ ಸೇವಾ ಭದ್ರತೆ ಇಲ್ಲ, ಸರ್ಕಾರದ ಯೋಜನೆಯನ್ನು ಗ್ರಾಮೀಣ ಭಾಗದ ಮನೆಮನೆಗೂ ತಲುಪಿಸುವ ನಮ್ಮನ್ನು ಸರ್ಕಾರಿ ನೌಕರರೆಂದು ಪರಿಗಣಿಸಿಲ್ಲ, ಕನಿಷ್ಠ ವೇತನದಲ್ಲಿ ಜೀವನ ನಡೆಸುವ ಪರಿಸ್ಥಿತಿ ನಮ್ಮದಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ನ. 27ರಿಂದ ರಾಜ್ಯ ಮಟ್ಟದಲ್ಲಿ ಎಲ್ಲ ನೌಕರರು ನೀರು ಸರಬರಾಜು, ಶುಚಿತ್ವ ಕಾರ್ಯ ನಿಲ್ಲಿಸಿ ಆಹೋ ರಾತ್ರಿ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.
ಸದ್ಯ ಕಾರ್ವಿುಕ ಇಲಾಖೆಯಿಂದ ಕಾಲಕಾಲಕ್ಕೆ ನಿಗದಿಪಡಿಸಿದ ಕನಿಷ್ಠ ವೇತನವನ್ನು ಗ್ರಾಪಂ ನೌಕರರಿಗೆ ನೀಡುತ್ತಿದೆ. ಇದರಿಂದ ಹತ್ತಿಪ್ಪತ್ತು ವರ್ಷಗಳಿಂದ ಸೇವೆ ಸಲ್ಲಿಸಿದ ನೌಕರನಿಗೂ ಇತ್ತೀಚೆಗೆ ಸೇರಿದ ನೌಕರರಿಗೂ ಒಂದೇ ರೀತಿಯ ಕನಿಷ್ಠ ವೇತನ ಲಭ್ಯವಾಗಿ ಸೇವಾ ಹಿರಿತನದ ಸಿಬ್ಬಂದಿಗೆ ಅನ್ಯಾಯವಾಗುತ್ತಿದೆ ಎಂದರು.
ಸಂಘದ ಉಪಾಧ್ಯಕ್ಷೆ ಗೀತಾ ಗೌಡ, ಸಂಘಟನಾ ಕಾರ್ಯದರ್ಶಿ ಕೇಶವ ನಾಯ್ಕ, ಸದಸ್ಯ ವಸಂತ ನಾಯ್ಕ ಇತರರಿದ್ದರು.