

ಹಾಸನ: ನಗರದ ಹೊರವಲಯ ಕೈಗಾರಿಕಾ ಪ್ರದೇಶದಲ್ಲಿನ ಪ್ರಿಕಾಟ್ ಲಿಮಿಟೆಡ್ ಸಂಸ್ಥೆಯ ಗುತ್ತಿಗೆ ಕಾರ್ಮಿಕರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾರ್ಖಾನೆ ಎದುರು ಎಐಟಿಯುಸಿ ನೇತೃತ್ವದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ.
ಪ್ರಿಕಾಟ್ ಲಿಮಿಟೆಡ್ ವರ್ಕರ್ಸ್ ಮತ್ತು ಎಂಪ್ಲಾಯೀಸ್ ಯೂನಿಯನ್‌ನ ಸಹ ಕಾರ್ಯದರ್ಶಿ ಜಿ.ಪಿ. ಪ್ರವೀಣ್ ಮಾತನಾಡಿ, ಕಳೆದ ಹಲವು ವರ್ಷಗಳಿಂದ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದರೂ ನಮ್ಮ ಸಂಬಳದಲ್ಲಿ ಯಾವುದೇ ಹೆಚ್ಚಳವಾಗಿಲ್ಲ. 2025 ಮಾರ್ಚ್‌ನಲ್ಲಿ ಪ್ರಸ್ತುತ ವೇತನ ಒಪ್ಪಂದ ಮುಗಿಯುತ್ತಿರುವುದರಿಂದ, ಮುಂದಿನ ಮೂರು ವರ್ಷಗಳ ಅವಧಿಗೆ ಹೊಸ ವೇತನ ಇತ್ಯರ್ಥ ಮತ್ತು ಸೇವಾ ಷರತ್ತುಗಳನ್ನು ನಿಗದಿಪಡಿಸಲು ಬೇಡಿಕೆ ಪತ್ರವನ್ನು ಸಲ್ಲಿಸಲಾಗಿದೆ ಎಂದರು.
2023ರ ಜನವರಿ 20ರಂದು ನಡೆದ ವೇತನ ಒಪ್ಪಂದವು 2025ರ ಮಾರ್ಚ್ 31ರಂದು ಕೊನೆಗೊಳ್ಳಲಿದೆ. ಆ ಸಮಯದಲ್ಲಿ ಆಡಳಿತ ಮಂಡಳಿ ಹಾಗೂ ಕಾರ್ಮಿಕ ಸಂಘಟನೆಯ ನಡುವೆ ಒಪ್ಪಂದವಾಗಿ, ಮುಂದಿನ ಇತ್ಯರ್ಥಕ್ಕೆ ಕನಿಷ್ಠ ಆರು ತಿಂಗಳ ಮುಂಚಿತವಾಗಿ ಬೇಡಿಕೆ ಪತ್ರ ಸಲ್ಲಿಸುವ ಕುರಿತು ಒಪ್ಪಿಗೆ ದೊರಕಿತ್ತು. ಅದರಂತೆ, ಈಗ ಹೊಸ ಬೇಡಿಕೆ ಪತ್ರವನ್ನು ಕೈಗಾರಿಕಾ ವಿವಾದ ಕಾಯ್ದೆ 1947ರ ಸೆಕ್ಷನ್ 19(2) ಅಡಿಯಲ್ಲಿ ಸಲ್ಲಿಸಲಾಗಿದೆ. ಈ ಕುರಿತು ಎಐಟಿಯುಸಿ ಹಾಸನ ಜಿಲ್ಲಾ ಸಮಿತಿಯ ಕಚೇರಿಯಲ್ಲಿ ನಡೆದ ಒಕ್ಕೂಟದ ಮಹಾಸಭೆಯಲ್ಲಿ ಎಂ.ಸಿ. ಡೋಂಗ್ರೆ ಅವರ ಅಧ್ಯಕ್ಷತೆಯಲ್ಲಿ ಬೇಡಿಕೆಗಳ ಪಟ್ಟಿಯನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು ಎಂದರು.
2025 ಏಪ್ರಿಲ್ 1ರಿಂದ ಸಂಬಳದಲ್ಲಿ ಶೇ. 40 ಹೆಚ್ಚಳ, 2026 ಏಪ್ರಿಲ್ 1 ರಿಂದ ಶೇ. 30 ಹೆಚ್ಚಳ, 2027 ಏಪ್ರಿಲ್ 1ರಿಂದ ಮತ್ತೊಂದು ಶೇ. 30 ಹೆಚ್ಚಳ, ಕಂಪನಿ ಸಾರಿಗೆ ಬಳಸದೆ ಬರುವ ಕಾರ್ಮಿಕರಿಗೆ ಪ್ರತಿ ತಿಂಗಳು 2,000 ರೂ. ಪೆಟ್ರೋಲ್ ಭತ್ಯೆ, ಮೂಲ ವೇತನ ಮತ್ತು ಡಿಎಯ ಶೇ. 30 ಬೋನಸ್, ಪ್ರತಿ ವರ್ಷ 10,000 ರೂ. ರಜೆ ಪ್ರಯಾಣ ಸಹಾಯ, ಕುಟುಂಬ ಸದಸ್ಯರಿಗೂ ನಗದು ರಹಿತ ವೈದ್ಯಕೀಯ ಸೌಲಭ್ಯ ಹಾಗೂ ಅನಾರೋಗ್ಯದ ಅವಧಿಯ ಸಂಬಳ ಪಾವತಿ, ಪಿತೃತ್ವ ರಜೆಯನ್ನು 10 ದಿನಗಳಿಗೆ ಹೆಚ್ಚಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಎಐಟಿಯುಸಿ ಮುಖಂಡ ಬಿ.ಎಂ. ಮಧು, ಪ್ರಧಾನ ಕಾರ್ಯದರ್ಶಿ ಎ.ಎಸ್. ಕಿರಣ್ ಕುಮಾರ್, ಸಹ ಕಾರ್ಯದರ್ಶಿ ಎಲ್.ಬಿ. ಗಿರೀಶ್, ಎಂ.ಟಿ. ಪ್ರತಾಪ್, ಹಾಗೂ ಸಂಘಟನಾ ಕಾರ್ಯದರ್ಶಿ ಸೋಮನಾಥ್, ಪಡೆಸೂರು ಸೇರಿದಂತೆ ಅನೇಕ ಕಾರ್ಮಿಕರು ಭಾಗವಹಿಸಿದ್ದರು.