

ಗೋಣಿಕೊಪ್ಪ: ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳಲು ಮೌಲ್ಯಯುತ ಶಿಕ್ಷಣ ಅಗತ್ಯ ಎಂದು ಮೂರ್ನಾಡು ಪದವಿ ಪೂರ್ವ ಕಾಲೇಜು ಪ್ರಾಂಶುಪಾಲೆ ಪಿ.ಎಂ.ದೇವಕಿ ತಿಳಿಸಿದರು.
ಕಾವೇರಿ ಶಿಕ್ಷಣ ಸಂಸ್ಥೆಗಳು ಮತ್ತು ವಿರಾಜಪೇಟೆ ಕಾವೇರಿ ಪದವಿ ಪೂರ್ವ ಕಾಲೇಜು ಸಹಯೋಗದಲ್ಲಿ ಬುಧವಾರ ಕಾಲೇಜಿನ ಆವರಣದಲ್ಲಿ ಆಯೋಜಿಸಿದ್ದ ಪ್ರತಿಭೋತ್ಸವ ಸಮಾರಂಭದಲ್ಲಿ ಮಾತನಾಡಿದರು.
ಪ್ರಸ್ತುತ ಸಮಾಜವು ಆಧುನಿಕತೆಯ ಅಂಧಕಾರದಲ್ಲಿದೆ. ಶಿಕ್ಷಣ ಪಡೆದ ವ್ಯಕ್ತಿಯು ಶಿಕ್ಷಿತನಾಗಬಹುದು. ಆದರೆ ಸಮಾಜ ರೂಪಿಸಲು ಅಶಕ್ತನಾಗುತ್ತಾನೆ. ಸಮಾಜದಲ್ಲಿ ಮೌಲ್ಯಗಳಿಗೆ ಮಾತ್ರ ಬೆಲೆ. ಮೌಲ್ಯಗಳನ್ನು ಮೈಗೂಡಿಸಿಕೊಂಡು ಮುಂದುವರಿದಲ್ಲಿ ಮಾತ್ರ ಉತ್ತಮ ಸಮಾಜ, ದೇಶ ಕಟ್ಟಲು ಸಾಧ್ಯವಾಗುತ್ತದೆ ಎಂದರು.
ಕಾವೇರಿ ವಿದ್ಯಾಸಂಸ್ಥೆಗಳ ಪ್ರಧಾನ ಕಾರ್ಯದರ್ಶಿ ಕುಲ್ಲಚಂಡ ಪಿ. ಬೋಪಣ್ಣ ಮಾತನಾಡಿ, ವಿದ್ಯಾರ್ಥಿಗಳು ಗುರಿ ತಲುಪಲು ಕಠಿಣ ಪರಿಶ್ರಮ ಪಡಬೇಕು. ಉತ್ತಮ ಭವಿಷ್ಯ ನಿರ್ಮಾಣಕ್ಕೆ ಕಲಿಕೆಯೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಪಾಲ್ಗೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಕಾವೇರಿ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಆನಂದ್ ಕಾರ್ಲ, ಕಾವೇರಿ ವಿದ್ಯಾಸಂಸ್ಥೆಗಳ ಅಧ್ಯಕ್ಷ ಪ್ರೊ. ಇಟ್ಟಿರ ಬಿದ್ದಪ್ಪ, ಕಾವೇರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಸಂಚಾಲಕಿ ಡೈನಾ ಸೋಮಯ್ಯ, ಕಾವೇರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎನ್.ಎಂ ನಾಣಯ್ಯ ಹಾಜರಿದ್ದರು.