ಹೆಚ್ಚುತ್ತಿರುವ ಕಳ್ಳತನ ಪ್ರಕರಣ, ಮತ್ತೆ ಮೂವರು ದರೋಡೆಕೋರರ ಬಂಧನ, ಪೊಲೀಸರ ಕಾರ್ಯಕ್ಕೆ ಜನ ಮೆಚ್ಚುಗೆ

POLICE KARYACHARANE
ಪೊಲೀಸರ ಕಾರ್ಯಾಚರಣೆ
Published on

ವಿಜಯಪುರ: ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಜೈನಾಪುರ ಲೇಔಟ್‌ನಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತೆ ಮೂವರನ್ನು ಬಂಧಿಸಿದ್ದಾರೆ.

ಈಗಾಗಲೇ ಓರ್ವನನ್ನು ಕಾಲಿಗೆ ಗುಂಡಿಕ್ಕಿ ಹೆಡೆಮುರಿ ಕಟ್ಟಿ ತಂದಿದ್ದ ಪೊಲೀಸರು ಇದೀಗ ಮತ್ತೆ ಮೂವರನ್ನು ಬಂಧಿಸುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಏಕತಾ ನಗರದ ನಿವಾಸಿ ಸುರೇಶ ಊರ್ಫ್ ವಿಶ್ವಲ ಮದುಕರ ಚವಾಣ್ (42), ಜತ್ತನ ಸೂರಜ್ ತುಳಸಿರಾಮ ಚವಾಣ್ (32) ಹಾಗೂ ಆಕಾಶ ಊರ್ಫ್ ಅಕ್ಷಯ ಸುಖದೇವ ರಾವತ್ (31) ಬಂಧಿತ ಆರೋಪಿಗಳು. ಬಂಧಿತರನ್ನು ಈಗಾಗಲೇ ನ್ಯಾಯಾಲಯದ ವಶಕ್ಕೆ ನೀಡಲಾಗಿದೆ ಎಂದು ಎಸ್‌ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.

ಘಟನೆ ಹಿನ್ನೆಲೆ

ಕಳೆದ ಜ.16ರಂದು ರಾತ್ರಿ 1 ರ ಸುಮಾರಿಗೆ ವಿಜಯಪುರ ನಗರದ ಜೈನಾಪುರ ಲೇಔಟ್‌ನಲ್ಲಿ ಸಂತೋಷ ಕನ್ನಾಳ ಎಂಬುವರ ಬಾಡಿಗೆ ಮನೆಗೆ ನುಗ್ಗಿದ್ದ ನಾಲ್ವರು ದರೋಡೆಕೋರರು ಬಾಗಿಲು ಮುರಿದು, ಒಳಗೆ ನುಗ್ಗಿದ್ದರು. ಸಂತೋಷಗೆ ಚಾಕುವಿನಿಂದ ಇರಿದು ಒಂದನೇ ಮಹಡಿಯಿಂದ ಎತ್ತಿ ಬೀಸಾಕಿದ್ದರು. ನಂತರ ಅವರ ಪತ್ನಿ ಭಾಗ್ಯಜ್ಯೋತಿಯ ಕೊರಳಿನಲ್ಲಿದ್ದ 15 ಗ್ರಾಂ ಬಂಗಾರದ ತಾಳಿಸರ ಕಿತ್ತುಕೊಂಡು ಹೋಗಿದ್ದರು. ಈ ಘಟನೆಯಿಂದ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಗಾಂಧಿ ಚೌಕ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.

ಚುರುಕಿನ ಕಾರ್ಯಾಚರಣೆ

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ ಅವರು, ಎಎಸ್‌ಪಿಗಳಾದ ಶಂಕರ ಮಾರಿಹಾಳ, ರಾಮನಗೌಡ ಹಟ್ಟಿ ಮಾರ್ಗದರ್ಶನ ಹಾಗೂ ಡಿವೈಎಸ್‌ಪಿ ಬಸವರಾಜ ಯಲಿಗಾರ, ಸುನೀಲ ಕಾಂಬಳೆ ನೇತೃತ್ವದಲ್ಲಿ ಪಿಎಸ್ ಪ್ರದೀಪ ತಳಕೇರಿ, ಪಿಎಸ್‌ಐ ರಾಜು ಮಮದಾಪುರ, ಸೋಮೇಶ ಗೆಜ್ಜಿ, ವಿನೋದ ಪೂಜಾರಿ ಮತ್ತಿತರರನ್ನು ಒಳಗೊಂಡ ತಂಡ ರಚಿಸಿದ್ದರು.

ಚುರುಕಿನ ಕಾರ್ಯಾಚರಣೆ ನಡೆಸಿದ್ದ ಈ ತಂಡ ನಗರ ಹೊರವಲಯದ ಟೋಲ್ ಪ್ಲಾಜಾ ಬಳಿ ಗುಂಡಿನ ದಾಳಿ ನಡೆಸಿ ಮಧ್ಯ ಪ್ರದೇಶದ ಧಾರ್ ಜಿಲ್ಲೆಯ ಮಹೇಶ ಎಂಬಾತನನ್ನು ಹೆಡೆಮುರಿ ಕಟ್ಟಿ ತಂದಿದ್ದರು. ಈತನೊಂದಿಗೆ ಒಂದೇ ಬೈಕ್‌ನಲ್ಲಿ ಬಂದಿದ್ದ ಮೂವರು ಪರಾರಿಯಾಗಿದ್ದರು. ಇದೀಗ ಮೂವರನ್ನು ಬಂಧಿಸಿದ್ದು ತನಿಖೆ ಪ್ರಗತಿಯಲ್ಲಿದೆ ಎಂದು ಎಸ್‌ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net