ಮುಸುಕುಧಾರಿಗಳ ಅಟ್ಟಹಾಸಕ್ಕೆ ಬ್ರೇಕ್, ಗುಂಡು ಹಾರಿಸಿ ದರೋಡೆಕೋರನ ಬಂಧನ, ಪೊಲೀಸರ ಕಾರ್ಯಾಚರಣೆಗೆ ಜನಮೆಚ್ಚುಗೆ

POLICE FIRING (1)
ವಿಜಯಪುರ ನಗರ ಹೊರವಲಯದಲ್ಲಿ ನಡೆದ ಪೊಲೀಸರ ಕಾರ್ಯಾಚರಣೆ ಸ್ಥಳವನ್ನು ಎಸ್‌ಪಿ ಲಕ್ಷ್ಮಣ ನಿಂಬರಗಿ ಪರಿಶೀಲಿಸಿದರು. ಎಸ್‌ಪಿ ರಾಮನಗೌಡ ಹಟ್ಟಿ ಹಾಗೂ ಸಿಬ್ಬಂದಿ ಇದ್ದಾರೆ.
Published on

ವಿಜಯಪುರ: ಮಧ್ಯರಾತ್ರಿ ಮನೆಗಳ ಬಾಗಿಲು ಮುರಿದು, ಚಾಕು ಇರಿದು ದರೋಡೆ ಮಾಡುತ್ತಿದ್ದ ಭಯಾನಕ ಕಳ್ಳರ ಗ್ಯಾಂಗ್ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದು, ಓರ್ವ ಗಾಯಗೊಂಡು ಸಿಕ್ಕಿಬಿದ್ದಿದ್ದರೆ ಮೂವರು ಪರಾರಿಯಾಗಿದ್ದಾರೆ.

ಇಲ್ಲಿನ ನಗರ ಹೊರವಲಯದ ಟೋಲ್ ಪ್ಲಾಜಾ ಬಳಿ ಶುಕ್ರವಾರ ನಸುಕಿನ ಜಾವ ಈ ಘಟನೆ ನಡೆದಿದ್ದು, ಗಾಯಾಳು ದರೋಡೆಕೋರನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಈತ ಮಧ್ಯ ಪ್ರದೇಶದ ಧಾರ್ ಜಿಲ್ಲೆಯ ಮಹೇಶ ಎಂದು ಗೊತ್ತಾಗಿದೆ. ತಪ್ಪಿಸಿಕೊಂಡಿರುವ ಇನ್ನುಳಿದ ಮೂವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಸ್ಥಳಕ್ಕೆ ಎಸ್‌ಪಿ ಲಕ್ಷ್ಮಣ ನಿಂಬರಗಿ, ಎಎಸ್‌ಪಿಗಳಾದ ಶಂಕರ ಮಾರಿಹಾಳ ಹಾಗೂ ರಾಮನಗೌಡ ಹಟ್ಟಿ ನೇತೃತ್ವದ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲಿಸಿತು.

ಘಟನೆ ಹಿನ್ನೆಲೆ

ಕಳೆದ ಹಲವು ದಿನಗಳಿಂದ ಜಿಲ್ಲೆಯಲ್ಲಿ ಬೀಡುಬಿಟ್ಟಿದ್ದ ಕಳ್ಳರ ಗ್ಯಾಂಗ್ ಸಾರ್ವಜನಿಕರ ನಿದ್ದೆ ಕೆಡಿಸಿತ್ತು. ಹಗಲು ಹೊತ್ತಿನಲ್ಲಿಯೇ ಮನೆಗಳಿಗೆ ನುಗ್ಗಿ ದರೋಡೆ ನಡೆಸುತ್ತಿತ್ತು. ಗುರುವಾರವಷ್ಟೇ ಜೈನಾಪುರ ಲೇಔಟ್‌ನ ಮನೆಯೊಂದಕ್ಕೆ ನುಗ್ಗಿ ಸಂತೋಷ ಕನ್ನಾಳ ಹಾಗೂ ಆತನ ಕುಟುಂಬಸ್ಥರ ಮೇಲೆ ಹಲ್ಲೆ ನಡೆಸಿತ್ತು. ಬಡಾವಣೆಯ ಎಲ್ಲ ಮನೆಗಳಿಗೆ ಹೊರಗಿನಿಂದ ಚಿಲಕ ಹಾಕಿ ಸಂತೋಷ ಕನ್ನಾಳ ಅವರ ಮನೆ ಬಾಗಿಲು ಮುರಿದು ಒಳನುಗ್ಗಿದ್ದ ಕಳ್ಳರು ಸಂತೋಷ ಮತ್ತು ಭಾಗ್ಯಜ್ಯೋತಿ ಕನ್ನಾಳಗೆ ಚಾಕುವಿನಿಂದ ಇರಿದಿದ್ದರು. ಮನೆಯ ಮಹಡಿ ಮೇಲಿಂದ ಕೆಳಗೆ ಎಸೆದಿದ್ದಲ್ಲದೇ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಸಹಜವಾಗಿಯೇ ಈ ಪ್ರಕರಣದಿಂದ ಜನ ಬೆಚ್ಚಿ ಬಿದ್ದಿದ್ದರು.

ಚುರುಕಿನ ಕಾರ್ಯಾಚರಣೆ

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಎಸ್‌ಪಿ ಲಕ್ಷ್ಮಣ ನಿಂಬರಗಿ ದರೋಡೆಕೋರರ ಪತ್ತೆಗಾಗಿ ವಿಶೇಷ ತಂಡ ರಚಿಸಿದ್ದರು. ರಾತ್ರಿ ಗಸ್ತು ಹೆಚ್ಚಿಸಿದ್ದರು. ಶುಕ್ರವಾರ ಮಧ್ಯರಾತ್ರಿ ಕನಕದಾಸ ಬಡಾವಣೆಯಲ್ಲಿ ದರೋಡೆಕೋರರು ಕಳ್ಳತನಕ್ಕೆ ಯತ್ನಿಸಿದ್ದಾರೆ. ಮನೆಯೊಂದಕ್ಕೆ ನುಗ್ಗಲು ಯತ್ನಿಸಿದಾಗ ಕುಟುಂಬಸ್ಥರು ಚೀರಾಡಿದ್ದಾರೆ. ಅಷ್ಟರಲ್ಲಿಯೇ ಕಳ್ಳರು ಪರಾರಿಯಾಗಿದ್ದು, ಬಡಾವಣೆಯ ಜನ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಎಚ್ಚೆತ್ತುಕೊಂಡ ಪೊಲೀಸರು ನಾಕಾ ಬಂದಿ ಮಾಡಿದ್ದಾರೆ.

ನಗರ ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಟೋಲ್‌ಪ್ಲಾಜಾ ಬಳಿ ಒಂದೇ ಬೈಕ್‌ನಲ್ಲಿ ನಾಲ್ವರು ಸಂಚಾರಿ ನಿಯಮ ಉಲ್ಲಂಘಿಸಿ ವಿರುದ್ಧ ಧಿಕ್ಕಿನಲ್ಲಿ ಸಾಗುತ್ತಿರಬೇಕಾದರೆ ಪೊಲೀಸರು ಅಟ್ಟಿಸಿಕೊಂಡು ಹೋಗಿದ್ದಾರೆ. ಈ ವೇಳೆ ಬೈಕ್ ಸ್ಕಿಡ್ ಆಗಿ ಕಳ್ಳರು ಬಿದ್ದಿದ್ದಾರೆ. ಅಲ್ಲಿಂದ ಎದ್ದು ಜಮೀನಿನಲ್ಲಿ ಓಡುತ್ತಿದ್ದ ವೇಳೆ ಕೂಡಲೇ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಒಟ್ಟು ಐದು ಸುತ್ತು ಗುಂಡು ಹಾರಿಸಿದ್ದು ಓರ್ವನ ಕಾಲಿಗೆ ಗುಂಡು ತಗುಲಿ ಗಾಯಗೊಂಡಿದ್ದಾನೆ. ಕತ್ತಲಾದ್ದರಿಂದ ಹುಡುಕಾಟದಲ್ಲಿದ್ದ ಪೊಲೀಸರಿಗೆ ಗಾಯಾಳುವಾಗಲಿ ಇನ್ನುಳಿದವರಾಗಲಿ ಸಿಕ್ಕಿಲ್ಲ. ಬಳಿಕ ಬೆಳಗ್ಗೆ 8.30ರ ಸುಮಾರಿಗೆ ಘಟನಾ ಸ್ಥಳಕ್ಕೆ ಹತ್ತಿರದಲ್ಲಿರುವ ಸ್ಪಂದನಾ ಆಸ್ಪತ್ರೆ ಹಿಂಭಾಗದಲ್ಲಿ ಗಾಯಾಳು ಕಳ್ಳ ನರಳುತ್ತಾ ಬಿದ್ದಿರುವುದನ್ನು ಕಂಡು ಪೊಲೀಸರು ಆತನನ್ನು ವಶಕ್ಕೆ ಪಡೆದು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಚಿಕಿತ್ಸೆ ಮುಂದುವರಿದಿದ್ದು ತಪ್ಪಿಸಿಕೊಂಡವರ ಶೋಧ ಕಾರ್ಯ ಮುಂದುವರಿಸಲಾಗಿದೆ.

ಪೊಲೀಸರ ಈ ಕಾರ್ಯಾಚರಣೆಯಿಂದಾಗಿ ಸಾರ್ವಜನಿಕರು ನೆಮ್ಮದಿಯ ನಿಟ್ಟುಸಿರುವ ಬಿಡುವಂತಾಗಿದೆ. ಆತಂಕದಲ್ಲಿಯೇ ಇದ್ದ ನಗರ, ಪಟ್ಟಣ ಹಾಗೂ ಹಳ್ಳಿಗಾಡಿನ ಜನರಿಗೆ ಕೊಂಚ ಸಮಾಧಾನ ತರಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net