

ಹನೂರು: ತಾಲೂಕಿನ ಕೆರೆಗಳಿಗೆ ಕಾವೇರಿ ನದಿ ಮೂಲದಿಂದ ನೀರು ತುಂಬಿಸುವಂತೆ ಆಗ್ರಹಿಸಿ ಶುಕ್ರವಾರ ತಾಲೂಕು ಭಾರತೀಯ ಕಿಸಾನ್ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಯಿತು.
ಪಟ್ಟಣದ ರಾಮಾಪುರ ಎಲ್ಲೇಮಾಳ ವಿಭಜಕ ರಸ್ತೆಯ ಬಳಿ ನೆರೆದಿದ್ದ ನೂರಾರು ರೈತರು ಹಾಗೂ ಕಾರ್ಯಕರ್ತರು ಮೆರವಣಿಗೆಯ ಮೂಲಕ ದಿವಂಗತ ಎಚ್.ನಾಗಪ್ಪ ವೃತ್ತಕ್ಕೆ ಆಗಮಿಸಿ ಮಾನವ ಸರಪಳಿ ರಚಿಸಿ ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಸಂಘದ ದಕ್ಷಿಣ ಪ್ರಾಂತೀಯ ಅಧ್ಯಕ್ಷ ರಮೇಶ್‌ರಾಜು ಮಾತನಾಡಿ, ಹನೂರು ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತಾಪಿ ವರ್ಗವಿದ್ದು, ಕೃಷಿಯನ್ನೇ ಅವಲಂಬಿಸಿ ಜೀವನ ನಡೆಸುತ್ತಿದ್ದಾರೆ. ಆದರೆ ಸ್ವಾತಂತ್ರ್ಯ ಗಳಿಸಿ ಹಲವು ದಶಕಗಳೇ ಕಳೆದಿದ್ದರೂ ಸಮರ್ಪಕ ನೀರಾವರಿ ಸೌಕರ್ಯವಿಲ್ಲ. ಇದರಿಂದ ರೈತರು ಕೃಷಿಯಲ್ಲಿ ತುಂಬ ತೊಂದರೆಯನ್ನು ಅನುಭವಿಸುವಂತಾಗಿದೆ. ತಾಲೂಕಿನಲ್ಲಿ ಮಣಗಳ್ಳಿ, ಅಲಗಾಪುರ, ಹುತ್ತೂರು, ಪಿ.ಜಿ ಪಾಳ್ಯ, ಬೈಲೂರು, ಕುರಟ್ಟಿ ಹೊಸೂರು ಹಾಗೂ ಇನ್ನಿತರೆ ಗ್ರಾಮಗಳಲ್ಲಿ ಕೆರೆಗಳಿವೆ. ಅಜ್ಜೀಪುರ ಸಮೀಪದ ಉಡುತೊರೆ ಜಲಾಶಯ, ಮಂಗಲ ಬಳಿಯ ರಾಮನಗುಡ್ಡೆ, ಉದ್ದನೂರಿನ ಹುಬ್ಬೆಹುಣಸೆ, ಯರಂಬಾಡಿಯ ಮಿನ್ನತ್ತುಹಳ್ಳ, ಹೂಗ್ಯಂನ ಕೀರೆಪಾತಿ, ಲೊಕ್ಕನಹಳ್ಳಿಯ ಕೌಳಿಕಟ್ಟೆ ಡ್ಯಾಂಗಳಿಗೆ ನದಿ ಮೂಲದಿಂದ ನೀರು ತುಂಬಿಸುವ ಕೆಲಸವಾಗಿಲ್ಲ. ಇದರಿಂದ ಈ ಭಾಗವು ಒಣ ಪ್ರದೇಶವಾಗಿ ಮಾರ್ಪಟ್ಟಿದ್ದು, ಅಂತರ್ಜಲ ಮಟ್ಟ ಕುಸಿದಿದೆ. ಇದರಿಂದ ಬೋರ್ ಕೊರೆಸಿದರೂ ನೀರು ಸಿಗದಂತಹ ಸ್ಥಿತಿ ನಿರ್ಮಾಣವಾಗಿದೆ. ಇದೀಗ ಕೆಆರ್‌ಎಸ್ ಜಲಾಶಯ ಭರ್ತಿಯಾಗಿದ್ದು, ಹನೂರು ಭಾಗದ ಮೂಲಕ ಕಾವೇರಿ ನೀರು ತಮಿಳುನಾಡಿನ ಮೆಟ್ಟೂರು ಜಲಾಶಯ ಸೇರಿ ಭರ್ತಿಯಾಗಿ ಸಮುದ್ರಕ್ಕೆ ಸೇರುತ್ತಿದೆ. ಕಾವೇರಿ ನೀರು ಈ ಭಾಗದ ರೈತರಿಗೆ ಉಪಯೋಗಕ್ಕೆ ಬಾರದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಧಿಕಾರಕ್ಕೆ ಬರುವ ವೇಳೆ ರಾಜಕೀಯ ನಾಯಕರು ಮೇಕೆದಾಟು ಯೋಜನೆಯನ್ನು ಅನುಷ್ಠಾನಗೊಳಿಸುತ್ತೇವೆ. ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಅನೇಕ ನೀರಾವರಿ ಯೋಜನೆಯನ್ನು ಜಾರಿಗೊಳಿಸುತ್ತೇವೆ ಎಂದು ಭರವಸೆ ನೀಡುತ್ತಾರೆ. ಆದರೆ ಅಧಿಕಾರಕ್ಕೆ ಬಂದ ಮೇಲೆ ಯಾವುದೇ ಕೆಲಸಗಳಾಗುತ್ತಿಲ್ಲ. ಇದರಿಂದ ರೈತರು ಸಮರ್ಪಕ ನೀರಾವರಿ ಸೌಕರ್ಯವಿಲ್ಲದೆ ಕೃಷಿಯಲ್ಲಿ ಹಿನ್ನಡೆ ಸಾಧಿಸುವಂತಾಗಿದೆ. ಸರ್ಕಾರ ಈ ಬಗ್ಗೆ ಎಚ್ಚೆತ್ತು ಯೋಜನೆಯನ್ನು ಸಿದ್ಧಪಡಿಸಿ ತಾಲೂಕಿನ ಕೆರೆಗಳಿಗೆ ನೀರು ತುಂಬಿಸಬೇಕು. ಇಲ್ಲವೇ ಅಧಿಕಾರದಿಂದ ಕೆಳಗಿಳಿಯಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ರೈತ ವಿರೋಧಿ ಸರ್ಕಾರ:
ಈ ಹಿಂದೆ ಕಿಸಾನ್ ಸಮ್ಮಾನ್ ಯೋಜನೆಯಿಂದ ರೈತರಿಗೆ ಸಿಗುತ್ತಿದ್ದ 4 ಸಾವಿರ ರೂ. ಪ್ರೋತ್ಸಾಹ ಧನವನ್ನು ಸರ್ಕಾರ ಸ್ಥಗಿತಗೊಳಿಸಿದೆ. ಅಕ್ರಮ ಸಕ್ರಮದ ಟಿಸಿಗಳನ್ನು ತೆರೆವುಗೊಳಿಸಲಾಗುತ್ತಿದೆ. ರೈತ ಮಕ್ಕಳಿಗೆ ಸಿಗುತ್ತಿದ್ದ ವಿದ್ಯಾರ್ಥಿ ನಿಧಿಯನ್ನು ಸ್ಥಗಿತಗೊಳಿಸಿದೆ. ಆರ್‌ಟಿಸಿ, ಇ ಸ್ಟಾಂಪಿಂಗ್ ಶುಲ್ಕವನ್ನು ಏರಿಕೆ ಮಾಡಿದ್ದು, ರೈತರಿಗೆ ಅನ್ಯಾಯವೆಸಗಿದೆ. ಆದರೆ ವಿರೋಧ ಪಕ್ಷದವರು ಸರಿಯಾಗಿ ಕೆಲಸ ಮಾಡಿದ್ದರೆ ಈ ರೀತಿಯಾಗುತ್ತಿರಲಿಲ್ಲ. ಹಾಗಾಗಿ ರಾಜ್ಯದಲ್ಲಿನ ಸರ್ಕಾರ ರೈತ ವಿರೋಧಿ ಸರ್ಕಾರವಾಗಿದೆ ಎಂದು ಸಂಘದ ದಕ್ಷಿಣ ಪ್ರಾಂತೀಯ ಅಧ್ಯಕ್ಷ ರಮೇಶ್ ರಾಜು ಆರೋಪಿಸಿದರು.
ಬಳಿಕ ಮೆರವಣಿಗೆಯ ಮೂಲಕ ಘೋಷಣೆಯನ್ನು ಕೂಗುತ್ತಾ ತಹಸೀಲ್ದಾರ್ ಕಚೇರಿಯ ಮುಂಭಾಗ ಧರಣಿ ಕುಳಿತರು. ಈ ವೇಳೆ ರೈತರು ಸಮಸ್ಯೆಗಳನ್ನು ಹೇಳಿಕೊಂಡರು. ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸಮಸ್ಯೆಯನ್ನು ಬಗೆಹರಿಸುವಂತೆ ಒತ್ತಾಯಿಸಿದರು.
ಸ್ಥಳಕ್ಕಾಗಮಿಸಿ ತಹಸೀಲ್ದಾರ್ ವೈ.ಕೆ.ಗುರುಪ್ರಸಾದ್ ಅವರಿಗೆ ಮನವಿ ಸಲ್ಲಿಸಲಾಯಿತು. ಈ ಬಗ್ಗೆ ಅಧಿಕಾರಿಗಳ ಸಭೆ ಕರೆದು ಸಮಸ್ಯೆ ಬಗೆಹರಿಸಲು ಅಗತ್ಯ ಕ್ರಮವಹಿಸುವುದಾಗಿ ತಹಸೀಲ್ದಾರ್ ತಿಳಿಸಿದರೆ, ನೀರಾವರಿ ಇಲಾಖೆಯ ಎಇಇ ರಾಮಕೃಷ್ಣ ಅವರು ಹುಬ್ಬೆಹುಣಸೆ ಹಾಗೂ ರಾಮನಗುಡ್ಡೆ ಜಲಾಶಯಕ್ಕೆ ನೀರು ತುಂಬಿಸಲು ಮರು ಕ್ರಿಯಾಯೋಜನೆ ತಯಾರಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಹಾಗೆಯೇ ತಾಲೂಕಿನ 10 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಸಂಬಂಧ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಅನುದಾನ ದೊರೆತ ಬಳಿಕ ನೀರು ತುಂಬಿಸಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈ ಬಿಡಲಾಯಿತು.
ಪ್ರತಿಭಟನೆಯಲ್ಲಿ ಭಾರತೀಯ ಕಿಸಾನ್ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಪುಟ್ಟಸ್ವಾಮಿ, ಸಂಚಾಲಕ ರಾಮಾಪುರ ರಾಜೇಂದ್ರ, ಜಿಲ್ಲಾಧ್ಯಕ್ಷ ಶಿವಪ್ರಕಾಶ್, ಕಾರ್ಯದರ್ಶಿ ಬೋಸ್ಕೋ, ತಾಲೂಕು ಅಧ್ಯಕ್ಷ ಹರೀಶ್ ಹಾಗೂ ಇನ್ನಿತರರು ಇದ್ದರು.