ರಾಮನಗರದಲ್ಲಿ ಹೆಚ್ಚಿದ ಚಿರತೆ ಹಾವಳಿ

Leapord
Published on

* ಸೆರೆ ಹಿಡಿಯಲು ಕ್ರಮಕೈಗೊಳ್ಳುವಂತೆ ರೈತರ ಮನವಿ

* ಹಾಡಹಗಲೇ ಸಾಕು ಪ್ರಾಣಿಗಳ ಮೇಲೆ ದಾಳಿ

ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ

ತಾಲೂಕಿನ ಮಾಯಗಾನಹಳ್ಳಿ, ಕೇತೋಹಳ್ಳಿ, ಕೆಂಜಿಗರಹಳ್ಳಿ ಭಾಗಗಳಲ್ಲಿ ಚಿರತೆ ಉಪಟಳ ಹೆಚ್ಚಾಗಿದ್ದು, ಜಮೀನಿನ ಬಳಿ ಮೇಯುವಾಗಲೇ ಸಾಕು ಪ್ರಾಣಿಗಳು ಚಿರತೆಗೆ ಆಹಾರವಾಗುತ್ತಿವೆ. ಹಾಡಹಗಲೇ ದಾಳಿ ಹೆಚ್ಚುತ್ತಿರುವುದರಿಂದ ಕುರಿ, ಮೇಕೆ ಮೇಯಿಸಲು ರೈತರು ಹೆದರುವಂತಾಗಿದೆ.

ಹಂದಿಗೊಂದಿ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಈ ಗ್ರಾಮಗಳಲ್ಲಿ ಆನೆಕಾಟವೂ ಹೆಚ್ಚಿದೆ. ಇದು ಸಾಲದೆಂಬಂತೆ ಗ್ರಾಮದ ಅಕ್ಕಪಕ್ಕದ ಗುಡ್ಡ ಪ್ರದೇಶದಲ್ಲಿರುವ ಚಿರತೆಗಳು ಆಹಾರಕ್ಕಾಗಿ ಸಾಕುಪ್ರಾಣಿಗಳನ್ನು ಹೊತ್ತೊಯ್ಯುತ್ತಿವೆ.

ಹಲವು ರೈತರು ಕುರಿ, ಮೇಕೆ ಸಾಕುತ್ತಿದ್ದು, ಜಮೀನು ಬಳಿ ಮೇಯಲು ಬಿಟ್ಟಾಗ ದಾಳಿ ಮಾಡುವ ಚಿರತೆಗಳು ಕುರಿ, ಮೇಕೆಯನ್ನು ಬಲಿಪಡೆಯುತ್ತಿವೆ. ಇದರಿಂದ ಜೀವ ಭಯದ ಜತೆಗೆ ಆರ್ಥಿಕವಾಗಿಯೂ ನಷ್ಟ ಉಂಟಾಗುತ್ತಿದೆ. ಒಂದು ವಾರದಿಂದಲೂ ಕೇತೋಹಳ್ಳಿ, ಮಾಯಗಾನಹಳ್ಳಿ ಭಾಗಗಳಲ್ಲಿ ಚಿರತೆ ಉಪಟಳ ಹೆಚ್ಚಾಗಿದೆ. ಮಾಯಗಾನಹಳ್ಳಿ ಬಳಿಯ ಮೆಣಸಿನಗುಡ್ಡೆಯ ಸೊಪ್ಪಿನಗುಡ್ಡೆಯಲ್ಲಿ ಚಿರತೆಗಳು ಕಾಣಿಸಿಕೊಳ್ಳುತ್ತಿದ್ದು, ಈ ಭಾಗದಲ್ಲಿ ಚಿರತೆ ಉಪಟಳದಿಂದ ರೈತರು ನಲುಗಿದ್ದಾರೆ. ಅರಣ್ಯ ಇಲಾಖೆ ಬೋನು ಇಟ್ಟು ಚಿರತೆ ಸೆರೆಹಿಡಿಯಬೇಕು. ಕುರಿ, ಮೇಕೆ ಕಳೆದುಕೊಂಡವರಿಗೆ ಸೂಕ್ತ ಪರಿಹಾರ ನೀಡಬೇಕು ಎನ್ನುತ್ತಾರೆ ರೈತ ಸತೀಶ್.

ಗ್ರಾಮಕ್ಕೆ ನುಗ್ಗುವ ಚಿರತೆ

ರಾತ್ರಿ, ಮುಂಜಾನೆ ವೇಳೆ ಗ್ರಾಮದ ಅಕ್ಕಪಕ್ಕದ ಒಂಟಿ ಮನೆಗಳ ಬಳಿ ಬರುವ ಚಿರತೆಗಳು, ಬೀದಿ ನಾಯಿಗಳು, ಕೋಳಿ, ಸಾಕುನಾಯಿಗಳನ್ನು ಹೊತ್ತೊಯ್ಯುತ್ತಿವೆ. ಕೋಳಿತ್ಯಾಜ್ಯ ಕಾರಣ

ಕೋಳಿ ತ್ಯಾಜ್ಯವನ್ನು ಸೂಕ್ತ ಸ್ಥಳದಲ್ಲಿ ವಿಲೇವಾರಿ ಮಾಡದೇ ಗ್ರಾಮದ ಆಸುಪಾಸು, ಜಮೀನುಗಳ ಓಣಿ, ರಸ್ತೆಗಳ ಅಕ್ಕಪಕ್ಕದಲ್ಲಿ ಎಸೆಯಲಾಗುತ್ತಿದೆ. ಈ ಕಾರಣಕ್ಕೆ ಚಿರತೆಗಳು ಕೋಳಿತ್ಯಾಜ್ಯ, ಮಾಂಸಕ್ಕಾಗಿ ಬಂದು ನಾಯಿಗಳನ್ನು ಬೇಟೆಯಾಡುತ್ತಿದ್ದು, ಸುಲಭವಾಗಿ ಬೇಟೆ ಸಿಗುತ್ತಿರುವುದರಿಂದ ಜನವಸತಿ ಪ್ರದೇಶ ಸಮೀಪದ ಸಣ್ಣಪುಟ್ಟ ಗುಡ್ಡ ಪ್ರದೇಶಗಳನ್ನೇ ಚಿರತೆಗಳು ವಾಸಸ್ಥಾನ ಮಾಡಿಕೊಂಡಿವೆ. ನಾಯಿ ಸಿಗದಿದ್ದಾಗ ಕುರಿ, ಮೇಕೆ, ಸಾಕು ಪ್ರಾಣಿಗಳ ಮೇಲೆ ದಾಳಿ ಮಾಡುತ್ತಿವೆ.

ಒಬ್ಬರೇ ರೈತರ ಎರಡು ಮೇಕೆ ಬಲಿ

ಚಿರತೆ ದಾಳಿಗೆ ಮಾಯಗಾನಹಳ್ಳಿಯ ರೈತ ರೇವಣ್ಣ ಅವರ ಎರಡು ಮೇಕೆಗಳು ಎರಡು ದಿನಗಳ ಅಂತರದಲ್ಲಿ ಚಿರತೆ ದಾಳಿಗೆ ಬಲಿಯಾಗಿವೆೆ. ಜತೆಗೆ ಎರಡು ಸಾಕು ನಾಯಿಗಳು ಚಿರತೆಗೆ ಆಹಾರವಾಗಿವೆ. ಕಳೆದ ವಾರ ಕೇತೋಹಳ್ಳಿಯ ಸತೀಶ್ ಅವರ ಕರು ಚಿರತೆ ದಾಳಿಗೆ ತುತ್ತಾಗಿದೆ. ಇದೇ ರೀತಿ ಹಲವು ರೈತರ ಕುರಿ, ಮೇಕೆಗಳನ್ನು ಜಮೀನನ ಬಳಿ ಮೇಯುವ ಸಮಯದಲ್ಲೇ ಹೊತ್ತೊಯ್ಯುತ್ತಿರುವುದು ಹೆಚ್ಚುತ್ತಿದೆ.

ಪರಿಹಾರ

ಚಿರತೆ ದಾಳಿಗೊಳಗಾದ ಕುರಿ, ಮೇಕೆಯಂತಹ ಸಾಕು ಪ್ರಾಣಿಯನ್ನು ಪಶು ವೈದ್ಯರಿಂದ ಮರಣೋತ್ತರ ಪರೀಕ್ಷೆ ನಡೆಸಿ ಅದರ ಪೋಟೋ ಲಗತ್ತಿಸಿದರೆ ಇಲಾಖೆ ಪರಿಹಾರ ನೀಡುತ್ತದೆ. ಆದರೆ, ಇಲಾಖೆ ನೀಡುವ ಪರಿಹಾರ ಸಾಲದು. ವೈಜ್ಞಾನಿಕ ಪರಿಹಾರ ನೀಡಬೇಕು ಎಂಬುದು ರೈತರ ಆಗ್ರಹ.

ಎಲ್ಲೆಂದರಲ್ಲಿ ಕೋಳಿ ತ್ಯಾಜ್ಯ, ಮಾಂಸ, ಮೂಳೆ ಎಸೆಯುವ ಕಾರಣದಿಂದ ನಾಯಿಗಳು ಮಾಂಸಕ್ಕಾಗಿ ಆ ಸ್ಥಳಕ್ಕೆ ದಾಂಗುಡಿ ಇಡುತ್ತಿವೆ. ಈ ವೇಳೆ ಚಿರತೆಗಳ ದಾಳಿಗೆ ನಾಯಿಗಳು ಬಲಿಯಾಗುತ್ತಿವೆ. ಸೂಕ್ತ ಸ್ಥಳದಲ್ಲಿ ಕೋಳಿ, ಮಾಂಸ ತ್ಯಾಜ್ಯ ವಿಲೇವಾರಿ ಮಾಡಿದರೆ ಚಿರತೆ ಉಪಟಳ ಕಡಿಮೆಯಾಗಲಿದೆ. ಅರಣ್ಯ ಇಲಾಖೆ ಚಿರತೆ ಉಪಟಳಕ್ಕೆ ಸೂಕ್ತ ಕ್ರಮ ಕೈಗೊಳ್ಳಲಿದೆ. ರಾಮಕೃಷ್ಣಪ್ಪ, ಡಿಎಫ್‌ಒ, ರಾಮನಗರ.

ಚಿರತೆ ಉಪಟಳ ಮಿತಿಮೀರಿದೆ. ಜಮೀನಿನ ಬಳಿ ಕುರಿ, ಮೇಕೆ ಮೇಯಿಸಲು ಸಾಧ್ಯವಾಗುತ್ತಿಲ್ಲ. ಕಣ್ಣೆದುರೇ ದಾಳಿ ನಡೆಸಿ ಮೇಯುತ್ತಿದ್ದ ಕುರಿ, ಮೇಕೆಗಳನ್ನು ಹೊತ್ತೊಯ್ಯುತ್ತಿದೆ. ಎರಡೇ ದಿನಗಳಲ್ಲಿ ಎರಡು ಮೇಕೆ ಬಲಿಯಾಗಿವೆ. ಕೂಡಲೇ ಅರಣ್ಯ ಇಲಾಖೆ ಚಿರತೆ ನಿಯಂತ್ರಣಕ್ಕೆ ಅಗತ್ಯಕ್ರಮ ಕೈಗೊಂಡು ಬೋನು ಇಟ್ಟು ಚಿರತೆ ಸೆರೆಹಿಡಿದು ಭಯ ತಪ್ಪಿಸಬೇಕು. ರೇವಣ್ಣ, ಮಾಯಗಾನಹಳ್ಳಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net