

ನಂಜನಗೂಡು: ಓದಿದ್ದು ಕಡಿಮೆಯಾದರೂ ಅನುಭವ ಹಾಗೂ ಆಸಕ್ತಿಯಿಂದ ಕೃಷಿಯಲ್ಲಿ ಸಮಗ್ರ ಬೇಸಾಯ ಪದ್ಧತಿಯನ್ನು ಅಳವಡಿಸಿಕೊಂಡು ಹಲವು ಬೆಳೆಗಳನ್ನು ಬೆಳೆದು ವರ್ಷವಿಡಿ ಆದಾಯ ಗಳಿಸುವ ಮೂಲಕ ತಾಲೂಕಿನ ಮುದ್ದಹಳ್ಳಿ ಗ್ರಾಮದ ಚಿಕ್ಕಸ್ವಾಮಿ ಇತರರಿಗೆ ಮಾದರಿಯಾಗಿದ್ದಾರೆ.
ತಮ್ಮ ಏಳು ಎಕರೆ ಕೃಷಿ ಭೂಮಿಯಲ್ಲಿ 3.5 ಎಕರೆಯಲ್ಲಿ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ಸಾವಯವ ಬೇಸಾಯ ಮಾಡುತ್ತಿದ್ದಾರೆ. ಕಳೆದ 20 ವರ್ಷಗಳಿಂದ ಕೃಷಿಯಲ್ಲಿ ಹೊಸ ಪ್ರಯೋಗದಲ್ಲಿ ತೊಡಗಿಸಿಕೊಂಡು ಯಶಸ್ಸಾಗುವುದರ ಜತೆಗೆ ಆರ್ಥಿಕವಾಗಿಯೂ ಸದೃಢರಾಗಿದ್ದಾರೆ.
ರಾಸಾಯನಿಕ ಮುಕ್ತ ತೋಟ ಮಾಡುವ ಛಲದೊಂದಿಗೆ ಕೃಷಿ ಕೈಗೆತ್ತಿಕೊಂಡ ಚಿಕ್ಕಸ್ವಾಮಿ ಜಮೀನಿನಲ್ಲಿ ತೆಂಗು, ಬಾಳೆ, ಸೀಬೆ, ಹಲಸು, ಕಿತ್ತಳೆ, ಸಪೋಟ, ದ್ರಾಕ್ಷಿ, ಸೇಬು, ಖರ್ಜೂರ ಸೇರಿದಂತೆ ಹಲವು ಬೆಗೆಯ ಹಣ್ಣಿನ ಗಿಡ, ಮರಗಳು, ಶುಂಠಿ, ಏಲಕ್ಕಿ, ಮೆಣಸು, ದಾಲ್ಚಿನ್ನಿ ಇತರ ಸಾಂಬಾರ ಪದಾರ್ಥಗಳು, ಹೂವಿನ ಗಿಡಗಳನ್ನು ಬೆಳೆದಿದ್ದಾರೆ. ಜತೆಗೆ ಏಲಕ್ಕಿ, ಪಚ್ಚೆಬಾಳೆ, ನಂಜನಗೂಡು ರಸಬಾಳೆ ಹಾಗೂ ಮದರಂಗಿ ಬಾಳೆಯ ಸಮೃದ್ಧ ಫಸಲು ತೋಟದಲ್ಲಿ ಕಾಣಬಹುದಾಗಿದೆ. ಮಲೆನಾಡಿನ ಕಾಫಿಯನ್ನೂ ತೋಟದಲ್ಲಿ ಬೆಳೆದಿದ್ದು, ವಾರ್ಷಿಕ 3 ಕ್ವಿಂಟಾಲ್‌ಗೂ ಹೆಚ್ಚಿನ ಕಾಫಿ ಬೀಜ ಪಡೆಯುತ್ತಿದ್ದಾರೆ.
ಹೈನುಗಾರಿಕೆ, ಮೀನು ಸಾಕಣೆ
ಆರ್ಥಿಕವಾಗಿ ಉನ್ನತಿ ಸಾಧಿಸಲು ಹೈನುಗಾರಿಕೆ ಅವಲಂಬಿಸಿರುವ ಚಿಕ್ಕಸ್ವಾಮಿ 5 ಹಸುಗಳನ್ನು ಸಾಕಿದ್ದು, ಬೆಳಗ್ಗೆ 10 ಹಾಗೂ ಸಂಜೆ 8 ಲೀಟರ್ ಹಾಲನ್ನು ಡೇರಿಗೆ ಹಾಕುತ್ತಿದ್ದಾರೆ. ಇದರೊಂದಿಗೆ ಬಂಡೂರು ತಳಿಯ 18 ಕುರಿ ಸಾಕಿದ್ದಾರೆ. ಜತೆಗೆ ತಮ್ಮ ತೋಟದ 50*50 ಅಡಿ ವಿಸ್ತೀರ್ಣದ ಹೊಂಡದಲ್ಲಿ 1500 ಮೀನು ಮರಿಗಳನ್ನು ಸಾಕಣೆ ಮಾಡುತ್ತಿದ್ದಾರೆ. 8 ತಿಂಗಳಿಗೊಮ್ಮೆ ಮೀನು ಮಾರಾಟ ಮಾಡುವ ಮೂಲಕ ಆರ್ಥಿಕವಾಗಿ ಹೆಚ್ಚಿನ ಲಾಭ ಕಂಡುಕೊಂಡಿದ್ದಾರೆ.
ತಮ್ಮದೇ ತೋಟದಲ್ಲಿರುವ ಜೇನು ಪೆಟ್ಟಿಗೆಗಳಿಂದ ಲಭ್ಯವಾಗುವ ಉತ್ಕೃಷ್ಟ ಗುಣಮಟ್ಟದ ಜೇನು ಹಾಗೂ ತಮ್ಮ ತೋಟದಲ್ಲಿ ಲಭ್ಯವಾಗುವ ಕಾಫಿ ಬೀಜವನ್ನು ಪುಡಿ ಮಾಡಿಸಿ ಪುಷ್ಕರ ಎಂಬ ತಮ್ಮದೇ ಬ್ರಾೃಂಡ್ ಮೂಲಕ ಮಾರಾಟ ಮಾಡುತ್ತಿದ್ದು, ಸ್ಥಳೀಯವಾಗಿ ಈ ಉತ್ಪನ್ನ ಜನ ಮೆಚ್ಚುಗೆ ಪಡೆದಿದೆ.
ಜಮೀನಿನ ಸುತ್ತಾ ಮಹಾಘನಿ, ಅಕೇಶಿಯಾ ಹಾಗೂ ತೇಗದ ಮರದ ಸಾಲುಗಳ ಮೂಲಕ ಹಸಿರಿನ ಬೇಲಿ ನಿರ್ಮಿಸಿದ್ದಾರೆ. ಚಿಕ್ಕಸ್ವಾಮಿ ಅವರ ಜಮೀನಿನಲ್ಲಿ 4 ಎರೆಹುಳು ಗೊಬ್ಬರದ ಗುಂಡಿಗಳು ಹಾಗೂ ಕೃಷಿ ತ್ಯಾಜ್ಯ ವಸ್ತುಗಳನ್ನು ಬಳಸಿ ಗೊಬ್ಬರ ತಯಾರಿಸಲು ನಿರ್ಮಿಸಿರುವ ಬೃಹತ್ ಹೊಂಡ ಗಮನ ಸೆಳೆಯುತ್ತದೆ. ಇನ್ನು ಹಸುವಿನ ಗಂಜಲ ಬಳಸಿ ಜಮೀನಿನಲ್ಲಿ ನಿರ್ಮಿಸಿರುವ ಹೊಂಡದಲ್ಲಿ ಕೃತಕ ಯೂರಿಯಾ ತಯಾರಿಸಿ ತಮ್ಮ ಬೆಳೆಗಳಿಗೆ ನೀಡುತ್ತಿದ್ದಾರೆ.
ಯುವ ರೈತರಿಗೆ ಮಾರ್ಗದರ್ಶನ
ಚಿಕ್ಕಸ್ವಾಮಿ ಅವರ ತೋಟಕ್ಕೆ ಕೃಷಿ ವಿಜ್ಞಾನಿಗಳು, ಕೃಷಿ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಹಾಗೂ ಕೃಷಿಯನ್ನು ಗಂಭೀರವಾಗಿ ಪರಿಗಣಿಸಿರುವ ಕೆಲ ಯುವ ರೈತರು ಭೇಟಿ ನೀಡಿ ಉಪಯುಕ್ತ ಮಾರ್ಗದರ್ಶನ ಪಡೆದಿದ್ದಾರೆ. ಇದರೊಂದಿಗೆ ಚಿಕ್ಕಸ್ವಾಮಿ ಸಾವಯವ ರೈತ ಎಂಬ ಪ್ರಶಂಸನಾ ಪತ್ರವನ್ನೂ ಕೃಷಿ ವಿವಿಯಿಂದ ಪಡೆದುಕೊಂಡಿದ್ದು, ಹಲವು ಸಂಘ, ಸಂಸ್ಥೆಗಳು ಪ್ರಗತಿಪರ ರೈತ ಎಂದು ಚಿಕ್ಕಸ್ವಾಮಿ ಸಾಧನೆಯನ್ನು ಗುರುತಿಸಿ ಸನ್ಮಾನಿಸಿದ್ದಾರೆ.
ತೋಟದಲ್ಲೇ ವಾಸ
ತಮ್ಮ ತೋಟದ ಮನೆಯಲ್ಲಿಯೇ ವಾಸ್ತವ್ಯ ಹೂಡಿರುವ ರೈತ ಚಿಕ್ಕಸ್ವಾಮಿ ಅವರಿಗೆ 80 ವರ್ಷದ ತಾಯಿ ಪಾರ್ವತಮ್ಮ ಸ್ಫೂರ್ತಿಯಾಗಿದ್ದು, ಇಳಿವಯಸ್ಸಿನಲ್ಲೂ ಮಗನ ಕೃಷಿ ಚಟುವಟಿಕೆಗೆ ಸಾಥ್ ನೀಡುತ್ತಿದ್ದಾರೆ. ಪತ್ನಿ ಮಮತಾ ಸಹಾ ಕೃಷಿ ಚಟುವಟಿಕೆಗಳಿಗೆ ನೆರವಾಗಿದ್ದಾರೆ. ಹಿರಿಯ ಮಗ ವಿದ್ಯಾಸಾಗರ್ ಪದವಿ ವ್ಯಾಸಂಗ ಪೂರ್ಣಗೊಳಿಸಿ ಲೋಕಸೇವಾ ಆಯೋಗದ ಪರೀಕ್ಷೆ ಎದುರಿಸಲು ಬೆಂಗಳೂರಿನಲ್ಲಿ ತರಬೇತಿಯಲ್ಲಿದ್ದಾರೆ. ಕಿರಿಯ ಮಗ ಸಿಎ ಪರೀಕ್ಷೆ ಎದುರಿಸಲು ಮಂಗಳೂರಿನಲ್ಲಿ ಸಿದ್ಧತೆ ನಡೆಸುತ್ತಿದ್ದಾರೆ.