ರಾಜ್ಯದಲ್ಲಿ ಹೆಚ್ಚಾದ ವಿದ್ಯುತ್​ ಬಳಕೆ: 18 ಸಾವಿರ ಮೆ.ವಾ. ಗಡಿ ದಾಟಿದ ಬೇಡಿಕೆ

energy
Published on

ಬೆಂಗಳೂರು:ರಾಜ್ಯದಲ್ಲಿ ವಿದ್ಯುತ್​ ಬೇಡಿಕೆ ದಾಖಲೆ ಮಟ್ಟಕ್ಕೆ ಏರಿಕೆಯಾಗಿದ್ದು, ಎರಡು ತಿಂಗಳಲ್ಲಿ ಗರಿಷ್ಠ ಬೇಡಿಕೆ ಅವಧಿ (ಪೀಕ್​ ಅವರ್​ ಡಿಮಾಂಡ್​)ಯಲ್ಲಿ 18 ಸಾವಿರ ಮೆಗಾವಾಟ್​ ದಾಟಿದೆ. ಏಪ್ರಿಲ್​ ತಿಂಗಳಲ್ಲಿ 18,500 ಮೆ.ವಾ.ಗೆ ಹೆಚ್ಚಾಗುವ ಸಾಧ್ಯತೆ ಇದೆ.

ಸೋಮವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಗೌರವ್​ ಗುಪ್ತ ಮತ್ತು ಕೆಪಿಟಿಸಿಎಲ್​ ವ್ಯವಸ್ಥಾಪಕ ನಿರ್ದೇಶಕ ಪಂಕಜ್​ ಕುಮಾರ್​ ಪಾಂಡೆ, ಕಳೆದ ಫೆಬ್ರವರಿಯಲ್ಲಿ ವಿದ್ಯುತ್​ ಗರಿಷ್ಠ ಬೇಡಿಕೆ ಅವಧಿಯಲ್ಲಿ 18,350 ಮೆ.ವಾ. ತಲುಪಿದ್ದರೆ, ಮಾರ್ಚ್​ ತಿಂಗಳಲ್ಲಿ 18,395 ಮೆ.ವಾ.ಗೆ ಏರಿಕೆಯಾಗಿದೆ. ಮಾ.7ರಂದು ಗರಿಷ್ಠ ವಿದ್ಯುತ್​ ಬೇಡಿಕೆ 18,395 ಮೆ.ವಾ. ತಲುಪಿತ್ತು ಎಂದು ಮಾಹಿತಿ ನೀಡಿದರು.

ಕೋವಿಡ್​ ಬಳಿಕ ವಿದ್ಯುತ್​ ಬೇಡಿಕೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಗರಿಷ್ಠ ವಿದ್ಯುತ್​ ಬೇಡಿಕೆ 2020-21ನೇ ಸಾಲಿನಲ್ಲಿ 14,367 ಮೆ.ವಾ. ಇದ್ದರೆ, 2021&22ರಲ್ಲಿ 14,818 ಮೆ.ವಾ., 2022-23ರಲ್ಲಿ 15,828 ಮೆ.ವಾ., 2023-24ರಲ್ಲಿ 17,220 ಮೆ.ವಾ. ಇತ್ತು. ಈ ಬಾರಿ 18,385 ಮೆ.ವಾ.ಗೆ ಏರಿಕೆಯಾಗಿದೆ. ಅದೇ ರೀತಿ ಪ್ರಸ್ತುತ ಗರಿಷ್ಠ ವಿದ್ಯುತ್​ ಬಳಕೆ 357 ಮಿ.ಯೂನಿಟ್​ ಇದೆ ಎಂದರು.

ಗರಿಷ್ಠ ಬೇಡಿಕೆ ಅವಧಿಯಲ್ಲಿ 2024ರ ಏಪ್ರಿಲ್​ ತಿಂಗಳಲ್ಲಿ 16,985 ಮೆ.ವಾ. ಬೇಡಿಕೆ ಬಂದಿದ್ದು, ಈ ವರ್ಷ 18,294 ಮೆ.ವಾ. ತಲುಪುವ ಅಂದಾಜಿದೆ. ಅಂದರೆ ವಿದ್ಯುತ್​ ಬೇಡಿಕೆಯಲ್ಲಿ ಶೇ. 8.1 ಹೆಚ್ಚಳವಾಗಲಿದೆ. ಅದೇ ರೀತಿ 2024ರ ಮೇ ತಿಂಗಳಲ್ಲಿ 16,826 ಮೆ.ವಾ. ಬೇಡಿಕೆ ಬಂದಿತ್ತು. ಈ ಬಾರಿ 17,122 ಮೆ.ವಾ.ಗೆ ಏರಿಕೆಯಾಗುವ (ಶೇ.1.8 ಹೆಚ್ಚಳ) ಅದಾಜು ಮಾಡಲಾಗಿದೆ. ಅಲ್ಲದೆ, ವಿದ್ಯುತ್​ ಬಳಕೆ ಪ್ರಮಾಣ ಏಪ್ರಿಲ್​ನಲ್ಲಿ 352 ಮಿ.ಯೂ. ಮತ್ತು ಮೇ ತಿಂಗಳಲ್ಲಿ 331 ಮಿ.ಯೂ. ತಲುಪುವ ನಿರೀೆಯಿದೆ ಎಂದು ವಿವರಿಸಿದರು.

ಬೇಡಿಕೆ ಪೂರೈಸಲು ಸಿದ್ಧತೆ: ರಾಜ್ಯದಲ್ಲಿ ಏರಿಕೆಯಾಗಿರುವ ವಿದ್ಯುತ್​ ಬೇಡಿಕೆಯನ್ನು ಪೂರೈಸಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. 2024ರ ಡಿಸೆಂಬರ್​ನಿಂದ ಮೇ ತಿಂಗಳವರೆಗೆ ಬೇಡಿಕೆಗೆ ಅನುಗುಣವಾಗಿ ಉತ್ತರ ಪ್ರದೇಶದಿಂದ 100ರಿಂದ 1,400 (ಗರಿಷ್ಠ ಬೇಡಿಕೆ ಅವಧಿಯಲ್ಲಿ) ಮೆಗಾವಾಟ್​ ವಿನಿಮಯ ಆಧಾರದ ಮೇಲೆ ವಿದ್ಯುತ್​ ಪಡೆಯಲಾಗುತ್ತಿದೆ. ಅದೇರೀತಿ ಜನವರಿಯಿಂದ ಏಪ್ರಿಲ್​ ಅಂತ್ಯದವರೆಗೆ ಪಂಜಾಬ್​ನಿಂದ 200ರಿಂದ 531 ಮೆ.ವಾ. ವಿದ್ಯುತ್ತನ್ನು ವಿನಿಮಯ ಆಧಾರದ ಮೇಲೆ ಪಡೆಯಲು ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಇದಲ್ಲದೆ, ಮಾ.1ರಿಂದ 15ರವರೆಗೆ ಕೂಡಗಿಯಲ್ಲಿರುವ ಎನ್​ಟಿಪಿಸಿಯಿಂದ 310 ಮೆ.ವಾ. ಹೆಚ್ಚುವರಿ ವಿದ್ಯುತ್​ ಪಡೆಯಲಾಗುತ್ತಿತ್ತು. ಮಾ.15ರಿಂದ ಇನ್ನೂ ಹೆಚ್ಚುವರಿಯಾಗಿ 100 ಮೆ.ವಾ. ಪಡೆಯಲಾಗಿದೆ. ಜತೆಗೆ ಮಾರ್ಚ್​ ತಿಂಗಳಿನಿಂದ ಮೇ ಅಂತ್ಯದವರೆಗೆ ಇಂಧನ ಸುರತೆ ನೀತಿಯಡಿ ಇತರ ರಾಜ್ಯಗಳಿಂದ ಮಾಸಿಕ 1000 ಮೆ.ವಾ. ವಿದ್ಯುತ್​ ಪಡೆಯಲು ಪಿಸಿಕೆಎಲ್​ ಒಪ್ಪಂದ ಮಾಡಿಕೊಂಡಿದೆ ಎಂದು ತಿಳಿಸಿದರು.

ತ್ರಿಫೇಸ್​ ಪೂರೈಗೆ ಕ್ರಮ: ರೈತರಿಗೆ ದಿನದ 7 ಗಂಟೆ ತ್ರಿಫೇಸ್​ ವಿದ್ಯುತ್​ ಪೂರೈಸಲು ಕ್ರಮ ವಹಿಸಲಾಗಿದೆ. ಅನೇಕ ಕಡೆಗಳಲ್ಲಿ ರೈತರ ಕೃಷಿ ಪಂಪ್​ ಸೆಟ್​ಗಳಿಗೆ ಸೋಲಾರ್​ ವಿದ್ಯುತ್​ ಒದಗಿಸಲಾಗುತ್ತಿದೆ. ಕೆಲವೆಡೆ 7 ಗಂಟೆ ತ್ರಿಫೇಸ್​ ವಿದ್ಯುತ್​ ಪೂರೈಸಲು ಸಮಸ್ಯೆಯಾಗದಂತೆ ಬೆಳಗ್ಗೆ ಮತ್ತು ಸಂಜೆ ವೇಳೆ ವಿದ್ಯುತ್​ ಪೂರೈಸಲಾಗುತ್ತದೆ. ವಿದ್ಯಾರ್ಥಿಗಳಿಗೆ ಸಮಸ್ಯೆಯಾಗದಂತೆ (ತೋಟದ ಮನೆಗಳು ಸೇರಿ) ನೋಡಿಕೊಳ್ಳಲು ಸಂಜೆ 6ರಿಂದ ಬೆಳಗ್ಗೆ 6 ಗಂಟೆಯವರೆಗೆ ಸಿಂಗಲ್​ ಫೇಸ್​ ವಿದ್ಯುತ್​ ಒದಗಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net