ಹಾವೇರಿ ಜಿಲ್ಲಾದ್ಯಂತ ಸೋಯಾಬೀನ್​ಗೆ ಹೆಚ್ಚಿದ ಬೇಡಿಕೆ

24-hvr-01
Published on

ಹಾವೇರಿ: ಜಿಲ್ಲಾದ್ಯಂತ ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗುತ್ತಿದೆ. ರೈತರು ಸೋಯಾಬೀನ್ ಬಿತ್ತನೆ ಬೀಜಕ್ಕೆ ಪರದಾಡುತ್ತಿದ್ದಾರೆ.

ಕೃಷಿ ಇಲಾಖೆಯಿಂದ ಬಿತ್ತನೆ ಬೀಜ ಮಾರಾಟ ಮಾಡುವ ಮುನ್ನವೇ ಕೆಒಎಫ್​ನಿಂದ ಸೋಯಾಬೀನ್ ಬೀಜ ವಿತರಣೆ ಆರಂಭಗೊಂಡಿದೆ. ತಾಲೂಕಿನ ಕೆರಿಮತ್ತಿಹಳ್ಳಿಯಲ್ಲಿರುವ ಕೆಒಎಫ್ ಕಚೇರಿ ಎದುರು ಸೋಮವಾರ ನೂರಾರು ರೈತರು ಸರದಿಯಲ್ಲಿ ನಿಂತಿದ್ದರು. ಅಂದಾಜು 60 ಜನರಿಗೆ ಬೀಜ ವಿತರಿಸಿ ಇನ್ನುಳಿದವರಿಗೆ ಮಂಗಳವಾರ ಬರುವಂತೆ ಚೀಟಿ ಕೊಟ್ಟು ಕಳಿಸಿದರು. ಜಿಲ್ಲೆಯಲ್ಲಿ ಬಿತ್ತನೆ ಬೀಜ, ರಸಗೊಬ್ಬರವನ್ನು ಅಗತ್ಯ ಪ್ರಮಾಣದಲ್ಲಿ ಕೃಷಿ ಇಲಾಖೆ ದಾಸ್ತಾನು ಮಾಡಿಕೊಳ್ಳುತ್ತಿದೆ. ಜಿಲ್ಲೆಯವರೇ ಕೃಷಿ ಸಚಿವರಾಗಿರುವುದರಿಂದ ಬೀಜ ಹಾಗೂ ಗೊಬ್ಬರಕ್ಕೆ ಕೊರತೆ ಉಂಟಾಗುವುದಿಲ್ಲ ಎಂಬ ಧೈರ್ಯ ರೈತರಲ್ಲಿದೆ. ಆದರೆ, ಕೃಷಿ ಇಲಾಖೆ ಇನ್ನೂ ಬಿತ್ತನೆ ಬೀಜ ಮಾರಾಟಕ್ಕೆ ಮುಂದಾಗದಿರುವುದರಿಂದ ಸಮಸ್ಯೆ ಉದ್ಭವಿಸಿದೆ ಎಂಬುದು ಕೆಲ ರೈತರ ಅನಿಸಿಕೆ.

ಕಳಪೆ ಬೀಜ: ಕಳೆದ ವರ್ಷ ಜಿಲ್ಲೆಯಲ್ಲಿ ರೈತ ಸಂಪರ್ಕ ಕೇಂದ್ರಗಳ ಮೂಲಕ ವಿತರಿಸಿದ್ದ ಸೋಯಾಬೀನ್ ಬೀಜಗಳು ಕಳಪೆಯಾಗಿದ್ದವು ಎಂಬ ಆರೋಪ ಕೇಳಿ ಬಂದಿತ್ತು. ಬೀಜಗಳು ಸರಿಯಾಗಿ ಮೊಳಕೆಯೊಡೆದಿರಲಿಲ್ಲ. ಈ ಕುರಿತು ಅನೇಕ ರೈತರು ಕೃಷಿ ಇಲಾಖೆಗೂ ದೂರು ನೀಡಿದ್ದರು. ಆದರೆ, ತೇವಾಂಶ ಕೊರತೆಯಿಂದ ಬೀಜ ಸರಿಯಾಗಿ ಮೊಳಕೆಯೊಡೆದಿಲ್ಲ ಎಂಬ ವರದಿ ಬಂದಿತ್ತು. ಅಷ್ಟರಲ್ಲಿ ಕಂಪನಿಯವರೇ ಕೆಲ ರೈತರಿಗೆ ಬೀಜ, ಬಿತ್ತನೆಯ ಖರ್ಚು ವೆಚ್ಚವನ್ನು ನೀಡಿ ಸಮಸ್ಯೆಗೆ ಆರಂಭದಲ್ಲಿಯೇ ಅಂತ್ಯ ಹಾಡಿದ್ದರು. ಹೀಗಾಗಿ, ಈ ಬಾರಿ ರೈತರು ಕೃಷಿ ಇಲಾಖೆ ಬದಲು ಕೆಒಎಫ್​ನಿಂದ ಬಿತ್ತನೆ ಬೀಜ ಖರೀದಿಗೆ ಮುಂದಾಗಿದೆ.

ಹಾವೇರಿ ಜಿಲ್ಲೆಯಲ್ಲಿ ಸದ್ಯ ಯಾವುದೇ ಬಿತ್ತನೆ ಬೀಜ ಹಾಗೂ ರಸಗೊಬ್ಬರದ ಕೊರತೆಯಿಲ್ಲ. ಈಗಾಗಲೇ 6 ಸಾವಿರ ಕ್ವಿಂಟಾಲ್​ನಷ್ಟು ಸೋಯಾಬೀನ್ ಬೀಜ ದಾಸ್ತಾನಿದೆ. ಇನ್ನೂ 6 ಸಾವಿರ ಕ್ವಿಂಟಾಲ್ ಬೀಜ ಬರಲಿದೆ. ಕಳೆದ ವರ್ಷ 8 ಸಾವಿರ ಕ್ವಿಂಟಾಲ್ ಸೋಯಾಬೀನ್ ಬೀಜ ವಿತರಿಸಲಾಗಿತ್ತು. ಈ ಬಾರಿ ಹೆಚ್ಚುವರಿಯಾಗಿ 4 ಸಾವಿರ ಕ್ವಿಂಟಾಲ್ ಪೂರೈಕೆಯಾಗುತ್ತಿದೆ. ಆರ್​ಎಸ್​ಕೆ ಮೂಲಕ ಶೀಘ್ರದಲ್ಲಿಯೇ ಬೀಜ ವಿತರಣೆ ಆರಂಭಗೊಳ್ಳಲಿದೆ.| ಬಿ. ಮಂಜುನಾಥ, ಜಂಟಿ ಕೃಷಿ ನಿರ್ದೇಶಕ, ಹಾವೇರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net