ಪಿಒಪಿಗೆ ವಿಘ್ನ ತಂದ ವಿನಾಯಕ; ಪರಿಸರಸ್ನೇಹಿ ಮೂರ್ತಿಗಳಿಗೆ ಹೆಚ್ಚಿದ ಬೇಡಿಕೆ

Ganesha Ideol
Published on

ರಾಮಕಿಶನ್​ ಕೆ.ವಿ. ಬೆಂಗಳೂರು

ಗಣೇಶ ಚತುರ್ಥಿ ಸಮೀಪಿಸುತ್ತಿದ್ದು, ರಾಜಧಾನಿ ಜನರು ಸಂಭ್ರಮದಿಂದ ಹಬ್ಬ ಆಚರಿಸಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಪರಿಸರ ಸಂರಕ್ಷಣೆ ಕಾರಣಕ್ಕೆ ಪ್ಲಾಸ್ಟರ್​ ಆಫ್​ ಪ್ಯಾರಿಸ್​ (ಪಿಒಪಿ) ಹಾಗೂ ರಾಸಾಯನಿಕ ಬಣ್ಣಲೇಪಿತ ಗಣೇಶ ಮೂರ್ತಿಗಳ ಬಳಕೆಗೆ ಸರ್ಕಾರ ನಿಷೇಧ ಹೇರಿರುವುದರಿಂದ ನಗರದಲ್ಲಿ ಜೇಡಿಮಣ್ಣು ಮತ್ತು ರಟ್ಟಿನಿಂದ ತಯಾರಿಸಿದ ಮೂರ್ತಿಗಳಿಗೆ ಬೇಡಿಕೆ ಹೆಚ್ಚಿದೆ. ಜನರು ಕೂಡ ಕಳೆದ ಮೂರ್ನಾಲ್ಕು ವರ್ಷಗಳಿಂದ ಪರಿಸರಸ್ನೇಹಿಯಾಗಿ ಗಣೇಶೋತ್ಸವ ಆಚರಿಸಲು ಹೆಚ್ಚು ಆಸಕ್ತರಾಗಿದ್ದಾರೆ.

ಸರ್ಕಾರದ ನಿಯಮದಂತೆ ಪರಿಸರಸ್ನೇಹಿ ಮೂರ್ತಿಗಳು ಮಾರಾಟವಾಗುತ್ತಿವೆ. ಜೇಡಿಮಣ್ಣಿನ ವಿಗ್ರಹಗಳು ಮೈದಳೆಯುತ್ತಿವೆ. ಶಿವತಾಂಡವ ಗಣಪತಿ, ನಾಗರಾಜ ಗಣಪತಿ, ಸಿಂಹ ಗಣಪತಿ... ಹೀಗೆ ವಿವಿಧ ಕಲ್ಪನೆಯಲ್ಲಿ ತಯಾರಾದ ಮೂರ್ತಿಗಳು ಮಾರುಕಟ್ಟೆಯಲ್ಲಿ ಕಾಣಿಸುತ್ತಿವೆ.

ರಟ್ಟಿನ ಗಣಪತಿ

ಪಿಒಪಿ ಮೂರ್ತಿ ನಿಷೇಧದ ನಂತರ ಮೂರ್ತಿ ತಯಾರಕರು ರಟ್ಟು/ಪೇಪರ್​ ಬಳಸಿ ಗಣೇಶ ಮೂರ್ತಿ ತಯಾರಿಸುತ್ತಿದ್ದಾರೆ. ಈ ಬಾರಿ ಪೇಪರ್​ನಿಂದ ತಯಾರಾದ ಹೆಚ್ಚಿನ ಗಣಪತಿಗಳು ಮಾರುಕಟ್ಟೆಯಲ್ಲಿವೆ. ಇದು ಕಡಿಮೆ ತೂಕವಿದ್ದು, ನೀರಿನಲ್ಲಿ ಬೇಗನೆ ಕರಗುತ್ತದೆ. ಮೂರ್ತಿ ತಯಾರಿಸಲು ಕೋಲ್ಕತದಿಂದ ಕಪ್ಪು ಮಣ್ಣನ್ನು ತರಿಸುತ್ತೇವೆ. 20 ಕೆ.ಜಿ. ಸಾಮರ್ಥ್ಯದ ಒಂದು ಬ್ಯಾಗ್​ಗೆ 450 ರೂ. ನಿಂದ 650 ರೂ. ತನಕ ವೆಚ್ಚ ತಗಲುತ್ತದೆ. ಕಾಗದ ಬಳಸಿಕೊಂಡು ವಿಗ್ರಹ ತಯಾರಿಸಿದಾಗ ವೆಚ್ಚ ಕಡಿಮೆಯಾಗುತ್ತದೆ. ಆದ್ದರಿಂದ ಈ ಬಾರಿ ರಟ್ಟಿನ ಮೂರ್ತಿಗೆ ಹೆಚ್ಚಿನ ಒತ್ತು ನೀಡಿದ್ದೇವೆ. ಕೆಲ ಗ್ರಾಹಕರು ಮುಂಚಿತವಾಗಿ ಮಣ್ಣಿನ ಮೂರ್ತಿಗೆ ಬುಕಿಂಗ್​ ಮಾಡಿಕೊಂಡಿದ್ದರು. ಅವರ ಆಯ್ಕೆಯಂತೆ ವಿಗ್ರಹ ನಿರ್ಮಿಸಿ ಕೊಟ್ಟಿದ್ದೇವೆ ಎಂದು ವಿ.ವಿ. ಪುರದ ಮೂರ್ತಿ ತಯಾರಕ ವಿಘ್ನೇಶ್​ ಪ್ರತಿಕ್ರಿಯಿಸಿದ್ದಾರೆ.

ಪ್ರವಾಹ ಸಂತ್ರಸ್ತರಿಗೆ ದೇಣಿಗೆ

ಕಳೆದ ಜುಲೈ, ಆಗಸ್ಟ್​ನಲ್ಲಿ ಉತ್ತರ ಕನ್ನಡ ಜಿಲ್ಲೆಗಳು ಹಾಗೂ ಕೇರಳದಲ್ಲಿ ಸುರಿದ ಭಾರಿ ಮಳೆಗೆ ಪ್ರವಾಹ ಎದುರಾಗುತ್ತು. ಅದರಲ್ಲೂ ವಯನಾಡ್​ನಲ್ಲಿ ಭೀಕರ ಭೂಕುಸಿತ ಉಂಟಾಗಿದ್ದರೆ ಈ ಅನಾಹುತದಲ್ಲಿ ಜೀವ ಕಳೆದುಕೊಂಡವರ ಗೌರವಾರ್ಥ ಕೆಲ ಸಂಟನೆಗಳು ಹಬ್ಬ ಆಚರಿಸದಿರಲು ಯೋಚಿಸಿವೆ. ಹಣ ಒಟ್ಟಗೂಡಿಸಿ ನೆರೆ ಸಂತ್ರಸ್ತರ ಪುನರ್ವಸತಿಗೆ ನೀಡಲು ಮುಂದಾಗಿವೆ. ಇದು ಗಣಪತಿ ವಿಗ್ರಹ ತಯಾರಿಕೆ ಮೇಲೆ ಪರಿಣಾಮ ಬೀರಿದೆ. ಜತೆಗೆ ಕೇರಳ ಭಾಗದಿಂದ ಪ್ರತಿ ವರ್ಷ ಮೂರ್ತಿ ತಯಾರಿಸಿಕೊಡುವಂತೆ ಮುಂಗಡವಾಗಿ ಬುಕಿಂಗ್​ ಆಗುತ್ತಿದ್ದವು. ಅದೂ ಈ ಬಾರಿ ಇಲ್ಲದಾಗಿದೆ ಎಂದು ವಿಗ್ರಹ ತಯಾರಕ ರಾಮಲಿಂಗಪ್ಪ ತಿಳಿಸಿದ್ದಾರೆ.

ವಿವಿಧ ಬೆಲೆಯ ಮೂರ್ತಿಗಳು ಲಭ್ಯ

ಮಾರುಕಟ್ಟೆಯಲ್ಲಿ ಸಣ್ಣ ಗಾತ್ರದಿಂದ ಆರಂಭವಾಗಿ, 9 ಅಡಿವರೆಗಿನ ಮೂರ್ತಿಗಳು ಲಭ್ಯವಿದೆ. ಗ್ರಾಹಕರು ಆಕಾರ, ಬಣ್ಣ ಹಾಗೂ ವಿಗ್ರಹದ ಆಕರ್ಷಣೆ ಹಾಗೂ ಬೆಲೆಯನ್ನು ಗಮನದಲ್ಲಿಟ್ಟುಕೊಂಡು ಖರೀದಿಸುತ್ತಿದ್ದಾರೆ. 300 ರೂ. ನಿಂದ ಆರಂಭವಾಗಿ 40 ಸಾವಿರ ರೂ. ವರೆಗಿನ ವಿಗ್ರಹಗಳನ್ನು ಜನರು ಖರೀದಿಸುತ್ತಿದ್ದಾರೆ. ಕೆಲ ಸಂಟನೆಗಳು ಮುಂಚಿತವಾಗಿ ದೊಡ್ಡ ದೊಡ್ಡ ಗಾತ್ರದ ಮೂರ್ತಿಗೆ ಬುಕಿಂಗ್​ ಮಾಡಿಕೊಂಡಿದ್ದರು. ಇದರ ಬೆಲೆ 60 ಸಾವಿರ ರೂ.ಗಳಿಗೂ ಹೆಚ್ಚಿದೆ.

ತೂಕ ಕಡಿಮೆ ಹಾಗೂ ಹೆಚ್ಚು ಆಕರ್ಷಣೆ ಎಂಬ ಕಾರಣಕ್ಕೆ ಕೆಲ ಗ್ರಾಹಕರು ಪಿಒಪಿ ಮೂರ್ತಿಗಳು ಇವೆಯಾ ಎಂದು ವಿಚಾರಿಸುತ್ತಿದ್ದಾರೆ. ಸರ್ಕಾರದ ಕೆಲ ನಿಯಮಗಳಿಂದ ಜನರು ಗೊಂದಲಗೊಂಡಂತಿದೆ. ಪರಿಣಾಮ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ವ್ಯಾಪಾರಿ ಕುಸಿದಿದೆ. ಜನರು ಚೌಕಾಸಿ ಮಾಡುತ್ತಿದ್ದಾರೆ. ಬಹುತೇಕರು ಆನ್​ಲೈನ್​ ಮೂಲಕ ಮೂರ್ತಿಗಳನ್ನು ತರಿಸಿಕೊಳ್ಳುತ್ತಿದ್ದಾರೆ.

-ಶ್ರೀನಿವಾಸ್​, ಗಣೇಶ ಮೂರ್ತಿ ವ್ಯಾಪಾರಿ

ಪ್ರತಿ ವರ್ಷ ಮನೆಯಲ್ಲಿ ವಿಗ್ರಹ ಪ್ರತಿಷ್ಠಾಪಿಸಿ ಸಂಭ್ರಮದಿಂದ ಹಬ್ಬ ಆಚರಿಸುತ್ತೇವೆ. ಹೀಗಾಗಿ ಮೂರ್ತಿ ಖರೀದಿಸಲು ಬಸವನಗುಡಿಗೆ ಬಂದಿದ್ದೇನೆ. ಹಬ್ಬಸಂಬಂಧಿ ಎಲ್ಲ ವಸ್ತುಗಳು ಮಾತ್ರವಲ್ಲದೆ ವಿಗ್ರಹದ ಬೆಲೆಯೂ ಹೆಚ್ಚಾಗಿದೆ.

- ಪಂಕಜಾ, ರಿಚ್​ಮಂಡ್​ ಟೌನ್​

ನಮ್ಮೂರಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ವಿಗ್ರಹ ಸಿಗುತ್ತದೆ. ಹೀಗಾಗಿ ಎರಡು ತಿಂಗಳ ಹಿಂದೆ ಮೂರ್ತಿ ತಯಾರಿಸಿಕೊಡುವಂತೆ ತಿಳಿಸಿದ್ದೆ. ಅದರಂತೆ ಈಗ ವಾಹನದ ಮೂಲಕ ಕೊಂಡೊಯ್ಯುತ್ತಿದ್ದೇವೆ. ಹಲವು ವರ್ಷಗಳಿಂದ ಗ್ರಾಮದಲ್ಲಿ ಒಟ್ಟಾಗಿ ಹಬ್ಬ ಆಚರಿಸುತ್ತಿದ್ದೇವೆ.

- ಶ್ರೀಹರಿ, ಪುಟ್ಟಪರ್ತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net