ದಾಖಲಾತಿಗೆ ಹೆಚ್ಚಿದ ಪೈಪೋಟಿ

1
ದಾಖಲಾತಿಗಾಗಿ ಮನೆ ಮನೆಗೆ ಅಭಿಯಾನ ನಡೆಸುತ್ತಿರುವ ಖಾಸಗಿ ಶಾಲೆಗಳ ಸಿಬ್ಬಂದಿ.
Published on

ಪಾಲಕರನ್ನು ಗೊಂದಲಕ್ಕೆ ಸಿಲುಕಿಸಿತೇ ಶಾಲಾ ಶಿಕ್ಷಣ ಇಲಾಖೆ? - ಅಧಿಕೃತ, ಅನಧಿಕೃತ ಶಾಲೆಗಳ ಪಟ್ಟಿ ನೀಡದ ಇಲಾಖೆ

ಚನ್ನಪಟ್ಟಣ: ಬೊಂಬೆನಾಡು ಚನ್ನಪಟ್ಟಣದಲ್ಲಿ ಕೆಲ ಖಾಸಗಿ ಶಾಲೆಗಳು ಮಕ್ಕಳ ದಾಖಲಾತಿಗಾಗಿ ಪೈಪೋಟಿಗೆ ಬಿದ್ದಿವೆ. ಇದರೊಂದಿಗೆ, ಯಾವ ಶಾಲೆಗಳು ಅಧಿಕೃತ? ಯಾವು ಅನಧಿಕೃತ? ಎಂಬ ಬಗ್ಗೆ ಪಾಲಕರಲ್ಲಿ ಗೊಂದಲ ಸೃಷ್ಟಿಯಾಗಿದೆ. ಈ ಬಗ್ಗೆ ಸ್ಪಷ್ಟನೆ ನೀಡಬೇಕಾದ ಶಿಕ್ಷಣ ಇಲಾಖೆ ಈ ವಿಚಾರದಲ್ಲಿ ಜಾಣ ಕುರುಡುತನ ಪ್ರದರ್ಶಿಸುತ್ತಿದೆ.

ಹೌದು... ತಾಲೂಕಿನಲ್ಲಿ 60ಕ್ಕೂ ಹೆಚ್ಚು ಖಾಸಗಿ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ.ಇದರ ಮಧ್ಯೆ ಪ್ರತಿ ವರ್ಷವೂ ನಾಯಿಕೊಡೆಗಳಂತೆ ಹತ್ತಾರು ಶಿಕ್ಷಣ ಸಂಸ್ಥೆಗಳು ತಲೆ ಎತ್ತುತ್ತಿವೆ. ಹೈಟೆಕ್ ಮಾದರಿ ಶಿಕ್ಷಣ ನೀಡುತ್ತೇವೆಂಬ ಪ್ರಚಾರ ಗಿಟ್ಟಿಸಿ, ಪಾಲಕರನ್ನು ಮರಳು ಮಾಡಿ, ಡೊನೇಷನ್ ಪೀಕುವುದೂ ಎಗ್ಗಿಲ್ಲದೆ ಸಾಗುತ್ತಿದೆ. ಇದರ ಮಧ್ಯೆ ಹಲವು ಶಾಲೆಗಳ ಬಗ್ಗೆ ಪಾಲಕರಿಗೆ ಕೆಲ ಗೊಂದಲಗಳಿವೆ. ಆದರೂ, ಶಿಕ್ಷಣ ಇಲಾಖೆ ಯಾವ ಶಾಲೆಗೆ ಮಾನ್ಯತೆ ಇದೆ, ಅನಧಿಕೃತ ಶಾಲೆ ಯಾವುದು ಎಂದು ಅರಿವು ಮೂಡಿಸಲು ಮುಂದಾಗುತ್ತಿಲ್ಲ.

ಮನೆಗಳ ಬಳಿ ಖಾಸಗಿ ಶಾಲೆಗಳು!

ಸರ್ಕಾರಿ, ಖಾಸಗಿ ಹಾಗೂ ಅನುದಾನಸಹಿತ ಸೇರಿ ತಾಲೂಕಿನಲ್ಲಿ 340ಕ್ಕೂ ಹೆಚ್ಚು ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿವೆ. ಇವುಗಳ ಪೈಕಿ ಖಾಸಗಿ ಶಾಲೆಗಳು ದಾಖಲಾತಿಗಾಗಿ ಪೈಪೋಟಿಗೆ ಬಿದ್ದಿವೆ. ಒಂದೆಡೆ, ಖಾಸಗಿ ಶಾಲೆಗಳ ಹೆಚ್ಚಳ, ಮತ್ತೊಂದೆಡೆ ಮಕ್ಕಳ ಸಂಖ್ಯೆ ಇಳಿಕೆ ಹಿನ್ನೆಲೆಯಲ್ಲಿ ದಾಖಲಾತಿಯೂ ಕುಸಿತಗೊಂಡಿದೆ. ಈ ಹಿನ್ನೆಲೆಯಲ್ಲಿ ದಾಖಲಾತಿಗಾಗಿ ಖಾಸಗಿ ಶಾಲೆಗಳು ತೀವ್ರ ಪೈಪೋಟಿಗೆ ಬಿದ್ದಿವೆ. ಪ್ರಚಾರದ ಜತೆಗೆ ಮನೆಮನೆಗೆ ಲಗ್ಗೆ ಇಡಲು ಮುಂದಾಗಿವೆ. ಮಕ್ಕಳಿರುವ ಮನೆಗಳಿಗೆ ಭೇಟಿ ನೀಡಿ ಮಕ್ಕಳನ್ನು ನಮ್ಮ ಶಾಲೆಗೇ ಸೇರಿಸುವಂತೆ ದುಂಬಾಲು ಬೀಳುತ್ತಿವೆ. ಶಿಕ್ಷಕರು ಹಾಗೂ ಸಿಬ್ಬಂದಿಗಳಿಂದ ಪ್ರಚಾರದ ಕ್ಯಾಂಪೇನ್ ನಡೆಸುತ್ತಿವೆ. ಒಂದು ಹೆಜ್ಜೆ ಮುಂದೆ ಹೋಗಿರುವ ಕೆಲ ಶಾಲೆಗಳು ಡೊನೇಷನ್ ರಿಯಾಯಿತಿ ಘೋಷಿಸಿಕೊಂಡಿವೆ. ಇವುಗಳ ಸಾಲಿನಲ್ಲಿ ನಿಯಮಬಾಹಿರವಾಗಿ ನಡೆಯುತ್ತಿರುವ ಕೆಲ ಶಾಲೆಗಳೂ ಇವೆ. ಶಿಕ್ಷಣ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿಯನ್ನೇ ಬಂಡವಾಳ ಮಾಡಿಕೊಂಡಿವೆ.

ನಿಯಮ ಮೀರಿ ಶಾಲೆ ಆರಂಭ

ತಾಲೂಕಿನಲ್ಲಿ ಪೂರ್ವ ಪ್ರಾಥಮಿಕ ಶಾಲೆಗಳು ನಾಯಿಕೊಡೆಗಳಂತೆ ತಲೆ ಎತ್ತುತ್ತಿದ್ದು, ಇವುಗಳಿಗೆ ಅನುಮತಿ ಇದೆಯೇ ಇಲ್ಲವೇ? ಎಂಬುದೇ ತಿಳಿಯದಂತಾಗಿದೆ. ನರ್ಸರಿ, ಪ್ಲೇ ಹೋಂ, ಎಲ್ಕೆಜಿ, ಯುಕೆಜಿಗಾಗಿ ನಗರದಲ್ಲಿ ಬೀದಿಬೀದಿಯಲ್ಲಿ ಶಾಲೆಗಳು ಆರಂಭಗೊಂಡಿವೆ. ಈಗಾಗಲೇ ಹಲವು ಪೂರ್ವ ಪ್ರಾಥಮಿಕ ಶಾಲೆಗಳು ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಪ್ರಸಕ್ತ ಶೈಕ್ಷಣಿಕ ವರ್ಷ ಒಂದರಲ್ಲೇ ಹತ್ತಕ್ಕೂ ಹೆಚ್ಚು ಶಾಲೆಗಳು ಹುಟ್ಟಿಕೊಂಡಿವೆ. ಇವುಗಳ ಸಾಲಿನಲ್ಲಿ ಕೆಲವು ನಿಯಮಾನುಸಾರ ಹಾಗೂ ಉತ್ತಮ ಗುಣಮಟ್ಟದಿಂದ ಆರಂಭಗೊಳ್ಳುತ್ತಿದ್ದರೆ, ಬಹುತೇಕ ಶಾಲೆಗಳು ಕಾರ್ ಪಾರ್ಕಿಂಗ್ ಸ್ಥಳ, ಗಾಳಿ ಮತ್ತು ಬೆಳಕು ಇಲ್ಲದ ಮನೆಗಳು ಹೀಗೆ ಬೇಕಾಬಿಟ್ಟಿಯಾಗಿವೆ. ಪೂರ್ವ ಪ್ರಾಥಮಿಕ ಶಾಲೆಗಳ ಆರಂಭಕ್ಕೆ ಸಾಕಷ್ಟು ನಿಯಮಗಳಿದ್ದು, ಇವುಗಳನ್ನು ಗಾಳಿಗೆ ತೂರಿರುವ ಆರೋಪಗಳು ಕೇಳಿಬಂದಿವೆ. ನಗರದ ಹೆದ್ದಾರಿಯಲ್ಲಿ ಒಂದನೇ ಅಂತಸ್ತಿನಲ್ಲಿ ಪೂರ್ವ ಪ್ರಾಥಮಿಕ ಶಾಲೆ ಆರಂಭಗೊಂಡಿರುವುದು ಇದಕ್ಕೆ ಒಂದು ಉದಾಹರಣೆಯಾಗಿದೆ.

ಶಿಕ್ಷಣ ಇಲಾಖೆ ಜಾಣ ಕುರುಡು

ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ವಿದ್ಯಾ ದೇಗುಲಗಳ ಪಾತ್ರ ಮಹತ್ತರವಾದದ್ದು. ಆದರೆ, ತಾಲೂಕಿನಲ್ಲಿ ಕೆಲ ಶಾಸಗಿ ಶಾಲೆಗಳು ಮಕ್ಕಳ ಭವಿಷ್ಯದ ಜತೆ ಚೆಲ್ಲಾಟವಾಡುತ್ತಿವೆ ಎಂಬ ಆರೋಪಗಳಿವೆ. ತಾಲೂಕಿನಲ್ಲಿ ತಲೆ ಎತ್ತಿರುವ ಹಾಗೂ ಪ್ರಸುತ್ತ ಎತ್ತುತ್ತಿರುವ ಕೆಲ ಅನಧಿಕೃತ ಶಾಲೆಗಳ ವಿರುದ್ಧ ಕಾನೂನು ಕ್ರಮವಹಿಸಿ ಕಡಿವಾಣ ಹಾಕಬೇಕಿದ್ದ ಶಿಕ್ಷಣ ಇಲಾಖೆ, ಈ ವಿಚಾರದಲ್ಲಿ ಜಾಣ ಕುರುಡುತನ ಪ್ರದರ್ಶನ ಮಾಡುತ್ತಿದೆ. ಮಕ್ಕಳನ್ನು ಚೆನ್ನಾಗಿ ಓದಿಸಬೇಕು, ಒಳ್ಳೆಯ ಶಿಕ್ಷಣ ನೀಡಿ ಉನ್ನತ ಹುದ್ದೆಗೇರಿಸಬೇಕು ಎಂದು ಅದೆಷ್ಟೋ ಪಾಲಕರು ಹಗಲಿರುಳು ಕಷ್ಟಪಟ್ಟು ದುಡಿದು ಮಕ್ಕಳನ್ನು ಹೈಟೆಕ್ ಶಾಲೆಗಳಿಗೆ ದಾಖಲು ಮಾಡಿಸುತ್ತಾರೆ. ಆದರೆ, ಕೆಲಶಾಲೆಗಳು ನಿಯಮಬಾಹಿರವಾಗಿದ್ದು, ಇವುಗಳ ಬಗ್ಗೆ ಸಂಬಂಧಿಸಿದವರು ಯಾವುದೇ ಗಮನಹರಿಸುತ್ತಿಲ್ಲ. ಶಾಲೆಗಳ ದಾಖಲಾತಿ ಪ್ರಕ್ರಿಯೆ ಶುರುವಾಗಿದ್ದರೂ, ಶಿಕ್ಷಣ ಇಲಾಖೆ ಮಾತ್ರ ಈ ವಿಚಾರದಲ್ಲಿ ಮೌನ ವಹಿಸಿದೆ.ತಾಲೂಕಿನಲ್ಲಿ ಇರುವ ಅನಧಿಕೃತ ಶಾಲೆಗಳ ಪಟ್ಟಿ ಪ್ರಕಟಿಸಲು ಕ್ಷೇತ್ರ ಶಿಕ್ಷಣಾಧಿಕಾರಿಯವರು ಕ್ರಮ ಕೈಗೊಳ್ಳಬೇಕು. ಆದರೆ, ಈ ವಿಚಾರದಲ್ಲಿ ಬಿಇಒ ತೀವ್ರ ನಿರ್ಲಕ್ಷ್ಯವಹಿಸುತ್ತಿದ್ದು, ನುಣುಚಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ.

ನುಣುಚಿಕೊಳ್ಳುವ ಕೆಲಸವೇ?

ಪ್ರತಿವರ್ಷ ಶೈಕ್ಷಣಿಕ ಅವಧಿ ಪ್ರಾರಂಭಗೊಳ್ಳುವ ಮೊದಲೇ ಶಿಕ್ಷಣ ಇಲಾಖೆ ತಮ್ಮ ವ್ಯಾಪ್ತಿಯ ಅಧಿಕೃತ ಹಾಗೂ ಅನಧಿಕೃತ ಶಾಲೆಗಳ ಪಟ್ಟಿಯನ್ನು ಮಾಧ್ಯಮ ಪ್ರಕಟಣೆ ಮೂಲಕ ತಿಳಿಸುತ್ತಿತ್ತು. ಆದರೆ, ತಾಲೂಕು ಶಿಕ್ಷಣ ಇಲಾಖೆ ಮಾತ್ರ ಈ ವಿಚಾರವನ್ನು ನಿರ್ಲಕ್ಷ್ಯ ಮಾಡಿದೆ. ಪತ್ರಿಕೆಯೂ ಕಳೆದ ಒಂದು ತಿಂಗಳ ಹಿಂದಿನಿಂದಲೂ ಈ ಮಾಹಿತಿ ನೀಡುವಂತೆ ಇಲಾಖೆಯನ್ನು ಹಲವು ಬಾರಿ ಸಂಪರ್ಕಿಸಿತ್ತು. ಆದರೆ, ಕೇವಲ ಸಬೂಬು ಹೇಳುತ್ತ ಶಿಕ್ಷಣಾಧಿಕಾರಿಗಳು ಕಾಲ ಕಳೆದಿದ್ದರು. ಈ ಮಧ್ಯೆ ಮಂಗಳವಾರ ಮತ್ತೆ ಈ ವಿಚಾರವಾಗಿ ಪತ್ರಿಕೆ ಶಿಕ್ಷಣಾಧಿಕಾರಿಯವರನ್ನು ಸಂಪರ್ಕಿಸಿದಾಗ, ಅಂತಿಮವಾಗಿ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಮಾನ್ಯತೆ ಹಾಗೂ ನವೀಕರಣಗೊಂಡಿರುವ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಅನಧಿಕೃತ ಶಾಲೆಗಳ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಕೇವಲ ಅಧಿಕೃತ ಶಾಲೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ವಿಚಾರದಲ್ಲಿ ಇಲಾಖೆ ನುಣಿಚಿಕೊಳ್ಳುವ ಕೆಲಸ ಮಾಡುತ್ತಿದೆಯೇ? ಎಂಬ ಅನುಮಾನ ಮೂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net